ಟೋಕಿಯೋ ಒಲಿಂಪಿಕ್ಸ್ನಲ್ಲಿ ಜಾವೆಲಿನ್ ಥ್ರೋ ಮೂಲಕ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ತಮ್ಮ ಮಾಜಿ ಕೋಚ್ ಕಾಶೀನಾಥ್ ನಾಯ್ಕ್ ಅವರ ಮನೆ ಭೇಟಿ ನೀಡಿದ್ದಾರೆ. ಈ ಮೂಲಕ ಗುರುವಿನ ಆರ್ಶೀವಾದ ಪಡೆದಿದ್ದಾರೆ. ಈ ಹಿಂದೆ, ನೀರಜ್ ಚೋಪ್ರಾ ಜಪಾನ್ನಲ್ಲಿ ಚಿನ್ನ ಗೆಲ್ಲುತ್ತಿದ್ದಂತೆ ಇತ್ತ ಕಾಶೀನಾಥ್ ಹೆಸರು ಚಾಲ್ತಿಗೆ ಬಂದಿತ್ತು.
ಭಾರತದ ಯುವ ಅಥ್ಲೀಟ್ನನ್ನು ಸಜ್ಜುಗೊಳಿಸುವಲ್ಲಿ ಕನ್ನಡಿಗನ ಪಾತ್ರ ಕೂಡ ಇದೆ ಎಂದು ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ನೀರಜ್ ಸಾಧನೆ ಹಿಂದಿರುವ ಕನ್ನಡಿಗ ಕಾಶೀನಾಥ್ ನಾಯ್ಕ್ ಅವರಿಗೆ ಕರ್ನಾಟಕ ಸರ್ಕಾರ 10 ಲಕ್ಷ ರೂ. ಬಹುಮಾನ ಘೋಷಿಸಿತ್ತು. ಈ ಸುದ್ದಿ ಬೆನ್ನಲ್ಲೇ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಅದಿಲ್ಲೆ ಸುಮರಿವಾಲ್ಲಾ ನೀಡಿದ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು.
ನೀರಜ್ ಚೋಪ್ರಾಗೆ ತರಬೇತಿ ನೀಡಿರುವ ಕಾಶೀನಾಥ್ ನಾಯ್ಕ್ ಯಾರೆಂದೇ ಗೊತ್ತಿಲ್ಲ. ಅಂತಹ ಯಾವುದೇ ವ್ಯಕ್ತಿ ತರಬೇತಿ ನೀಡಿಲ್ಲ ಎಂದು ಅಥ್ಲೆಟಿಕ್ಸ್ ಫೆಡರೇಷನ್ ಆಕ್ಷೇಪ ವ್ಯಕ್ತಪಡಿಸಿತ್ತು. ಕಾಶೀನಾಥ್ ಅವರು ತಮ್ಮ ಕೋಚ್ ಎಂದು ನೀರಜ್ ಚೋಪ್ರಾ ಹೇಳಿಲ್ಲ. ಅಥ್ಲೆಟಿಕ್ಸ್ ಫೆಡರೇಷನ್ ಕೂಡ ಈ ಬಗ್ಗೆ ಖಚಿತಪಡಿಸಿಲ್ಲ. ಹೀಗಿರುವಾಗ ಕರ್ನಾಟಕ ಸರ್ಕಾರ ಕಾಶೀನಾಥ್ ನಾಯ್ಕ್ಗೆ ಹೇಗೆ ಬಹುಮಾನ ಘೋಷಿಸಿದೆ ಎಂದು ಅದಿಲ್ಲೆ ಸುಮರಿವಾಲ್ಲಾ ಪ್ರಶ್ನಿಸಿದ್ದರು.
ಅಥ್ಲೆಟಿಕ್ಸ್ ಫೆಡರೇಷನ್ನ ಈ ಹೇಳಿಕೆ ವೈರಲ್ ಆದ ಬೆನ್ನಲ್ಲೇ ಕಾಶೀನಾಥ್ ನಾಯ್ಕ್ ಅವರು ಸುಳ್ಳು ಹೇಳಿದ್ದಾರೆ ಎಂಬಿತ್ಯಾದಿ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಇದಾಗ್ಯೂ ಉತ್ತರ ಕನ್ನಡದ ಸಿರಸಿ ಮೂಲದವರಾದ ಕಾಶಿನಾಥ್ ನಾಯ್ಕ್ ತಾನು 2015-17ರವರೆಗೆ ಪಟಿಯಾಲದ ಸೇನಾ ಕ್ರೀಡಾ ಸಂಕೀರ್ಣದಲ್ಲಿ ನೀರಜ್ ಚೋಪ್ರಾಗೆ ತರಬೇತಿ ನೀಡಿರುವುದು ತಿಳಿಸಿದ್ದರು. ಅಲ್ಲದೆ 2010ರ ಕಾಮ್‌ವೆಲ್ತ್ ಕ್ರೀಡಾಕೂಟದಲ್ಲಿ ನಾನು ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದೇನೆ. ನೀರಜ್ಗೆ 6 ವರ್ಷಗಳ ಕಾಲ ಕೋಚಿಂಗ್ ಮಾಡಿರುವ ಬಗ್ಗೆ ಸಾಕ್ಷಿ ಒದಗಿಸಲು ಸಿದ್ದನಿದ್ದೇನೆ ಎಂದು ಕಾಶೀನಾಥ್ ತಿಳಿಸಿದ್ದರು.
ನಾನು ಕೋಚ್ ಆಗಿದ್ದೆನೋ ಇಲ್ಲವೋ ಎಂದು ನೀರಜ್ ಚೋಪ್ರಾ ಅವರೇ ಮುಂದೆ ಉತ್ತರ ಕೊಡಲಿದ್ದಾರೆ ಎಂದು ಕಾಶೀನಾಥ್ ನಾಯ್ಕ್ ತಿಳಿಸಿದ್ದರು. ಇದೀಗ ಗುರುವಿನ ನಿರೀಕ್ಷೆ ನಿಜವಾಗಿದೆ. ನೀರಜ್ ಚೋಪ್ರಾ ಉತ್ತರ ಕನ್ನಡದ ಸಿರಸಿಯ ಕಾಶಿನಾಥ್ ನಾಯ್ಕ್ ಅವರ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ತೆಗೆದುಕೊಂಡಿರುವ ಫೋಟೋಗಳು ವೈರಲ್ ಆಗಿವೆ.
ಅದರಲ್ಲೂ ಇಡೀ ವಿಶ್ವ ವಿಖ್ಯಾತಿ ಪಡೆದರೂ ಯಾವುದೇ ಅಹಂಕಾರವಿಲ್ಲದೆ, ಸಾಮಾನ್ಯನಂತೆ ಕಾಣಿಸಿಕೊಂಡಿರುವ ನೀರಜ್ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಈ ಮೂಲಕ ತಮ್ಮ ಮಾಜಿ ಕೋಚ್ ಕಾಶೀನಾಥ್ ನಾಯ್ಕ್ ವಿರುದ್ದ ಕೇಳಿ ಬಂದ ಆರೋಪ, ಆಕ್ಷೇಪ ಮತ್ತು ಸುಳ್ಳುಸುದ್ದಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ ನೀರಜ್ ಚೋಪ್ರಾ.
Published On - 9:06 pm, Tue, 24 August 21