ಬ್ರೆಝಿಲ್ನ ಖ್ಯಾತ ಫುಟ್ಬಾಲ್ ಆಟಗಾರ ನೇಮರ್ ಜೂನಿಯರ್ ಸೌದಿ ಅರೇಬಿಯಾದ ಅಲ್ ಹಿಲಾಲ್ ಕ್ಲಬ್ ಪರ ಕಣಕ್ಕಿಳಿಯುವುದು ಖಚಿತವಾಗಿದೆ. ಮಂಗಳವಾರ ನೇಮರ್ ಹಾಗೂ ಕ್ಲಬ್ ಜೊತೆ ಒಪ್ಪಂದವಾಗಿದ್ದು, ಅದರಂತೆ ಮುಂದಿನ 2 ವರ್ಷಗಳ ಕಾಲ ಬ್ರೆಝಿಲ್ ತಾರೆ ಅಲ್ ಹಿಲಾಲ್ ಪರ ಕಣಕ್ಕಿಳಿಯಲಿದ್ದಾರೆ.
ಈ ಹಿಂದೆ ನೇಮರ್ ಫ್ರಾನ್ಸ್ನ ಪ್ಯಾರಿಸ್ ಸೇಂಟ್-ಜರ್ಮೈನ್ (PSG) ಪರ ಕಣಕ್ಕಿಳಿಯುತ್ತಿದ್ದರು. ಆದರೆ ಈ ಬಾರಿ ಪಿಎಸ್ಜಿ ಜೊತೆಗಿನ ಒಪ್ಪಂದವನ್ನು ಕೊನೆಗೊಳಿಸಲು ಅವರು ನಿರ್ಧರಿಸಿದ್ದರು. ಹೀಗಾಗಿ ಪ್ಯಾರಿಸ್ ಸೇಂಟ್ ಜರ್ಮೈನ್ ಕ್ಲಬ್ ಅವರನ್ನು ಟ್ರಾನ್ಸ್ಫರ್ ಮಾಡಲು ನಿರ್ಧರಿಸಿತ್ತು.
ಅದರಂತೆ ಇದೀಗ ಸೌದಿ ಅರೇಬಿಯಾದ ಅಲ್ ಹಿಲಾಲ್ ಹಾಗೂ ಪ್ಯಾರಿಸ್ ಸೇಂಟ್-ಜರ್ಮೈನ್ ನಡುವೆ ವರ್ಗಾವಣೆ ಡೀಲ್ ಕುದುರಿದೆ. ಅಲ್ಲದೆ ವರ್ಗಾವಣೆ ಮೊತ್ತವಾಗಿ ಪಿಎಸ್ಜಿಗೆ ಅಲ್ ಹಿಲಾಲ್ ಕ್ಲಬ್ ಸುಮಾರು 100 ಮಿಲಿಯನ್ ಯುರೋ ನೀಡಲಿದೆ ಎಂದು ವರದಿಯಾಗಿದೆ.
ಹೊಸ ಒಪ್ಪಂದಂತೆ ನೇಮರ್ ಮುಂದಿನ 2 ವರ್ಷಗಳ ಕಾಲ ಅಲ್ ಹಿಲಾಲ್ ಪರ ಕಣಕ್ಕಿಳಿಯಲಿದ್ದಾರೆ. ಇದಕ್ಕಾಗಿ ಬ್ರೆಝಿಲ್ ತಾರೆ ಜೊತೆ ಅಲ್ ಹಿಲಾಲ್ ಕ್ಲಬ್ 300 ಮಿಲಿಯನ್ ಡಾಲರ್ನ ಒಪ್ಪಂದ ಮಾಡಿಕೊಂಡಿದೆ. ಅಂದರೆ ಭಾರತೀಯ ಮೌಲ್ಯ ಸುಮಾರು 24,970,496,700 ರೂ.
ಅಲ್ ಹಿಲಾಲ್ ಜೊತೆಗಿನ ಒಪ್ಪಂದ ಪ್ರಕಾರ, ನೇಮರ್ ವರ್ಷಕ್ಕೆ 1248+ ಕೋಟಿ ರೂ. ಪಡೆಯಲಿದ್ದಾರೆ. ಇದರ ಜೊತೆಗೆ ಇತರೆ ಜಾಹೀರಾತು ಹಾಗೂ ವಾಣಿಜ್ಯ ವ್ಯವಹಾರಗಳಿಂದ ಗಳಿಸುವ ಆದಾಯದಿಂದ ಕ್ಲಬ್ ಬೋನಸ್ ಮೊತ್ತವನ್ನು ಸಹ ನೀಡಲಿದೆ.
ಅಂದರೆ ನೇಮರ್ ಇನ್ನೆರಡು ವರ್ಷಗಳ ಕಾಲ ಅಲ್ ಹಿಲಾಲ್ ಕ್ಲಬ್ನಿಂದ ಪ್ರತಿ ತಿಂಗಳು 104 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. ಆದರೆ ಇದು ಕ್ರಿಸ್ಟಿಯಾನೊ ರೊನಾಲ್ಡೊಗಿಂತ ಕಡಿಮೆ ಎಂಬುದು ಇಲ್ಲಿ ಉಲ್ಲೇಖಾರ್ಹ.
ಸೌದಿ ಅರೇಬಿಯಾದ ಅಲ್ ನಾಸ್ರ್ ಪರ ಆಡುತ್ತಿರುವ ಪೋರ್ಚುಗಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಪಡೆಯುತ್ತಿರುವ ವಾರ್ಷಿಕ ವೇತನ ಬರೋಬ್ಬರಿ 1,770 ಕೋಟಿ ರೂ. ಅಂದರೆ CR7 ಅವರ ಪ್ರತಿ ತಿಂಗಳ ಸಂಭಾವನೆ 147 ಕೋಟಿ ರೂ.
2017 ರಲ್ಲಿ ಸ್ಪೇನ್ನ ಖ್ಯಾತ ಫುಟ್ಬಾಲ್ ಕ್ಲಬ್ ಬಾರ್ಸಿಲೋನಾ ತಂಡದಲ್ಲಿದ್ದ ನೇಮರ್ ಅವರನ್ನು ಟ್ರಾನ್ಸ್ಫರ್ ಆಯ್ಕೆಯ ಮೂಲಕ ಪ್ಯಾರಿಸ್ ಸೇಂಟ್-ಜರ್ಮೈನ್ ಖರೀದಿಸಿತ್ತು. ಆ ಬಳಿಕ 6 ವರ್ಷಗಳ ಕಾಲ ಪಿಎಸ್ಜಿ ಗೆಲುವಿನಲ್ಲಿ ಬ್ರೆಝಿಲ್ ತಾರೆ ಪ್ರಮುಖ ಪಾತ್ರವಹಿಸಿದ್ದರು. ಈ ವೇಳೆ ಆಡಿದ್ದ 173 ಪಂದ್ಯಗಳಲ್ಲಿ 118 ಗೋಲುಗಳನ್ನು ಬಾರಿಸಿದ್ದಲ್ಲದೆ, 77 ಬಾರಿ ಇತರೆ ಆಟಗಾರರು ಗೋಲುಗಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇದನ್ನೂ ಓದಿ: ಭಾರತ ವಿಶ್ವಕಪ್ ತಂಡದಿಂದ 7 ಆಟಗಾರರು ಔಟ್..!
ಇದಕ್ಕೂ ಮುನ್ನ ಬಾರ್ಸಿಲೋನಾ ಪರ 186 ಪಂದ್ಯಗಳಲ್ಲಿ 105 ಗೋಲುಗಳಿಸಿದ್ದರು. ಹಾಗೆಯೇ 76 ಬಾರಿ ಅಸಿಸ್ಟ್ ಮಾಡಿದ್ದರು. ಇದೀಗ ತಮ್ಮ 31ನೇ ವಯಸ್ಸಿನಲ್ಲಿ ಸೌದಿ ಅರೇಬಿಯಾ ಕ್ಲಬ್ನತ್ತ ಮುಖ ಮಾಡಿರುವ ನೇಮರ್ ಅರಬ್ಬರ ನಾಡಿನಲ್ಲಿ ಮೋಡಿ ಮಾಡುವ ವಿಶ್ವಾಸದಲ್ಲಿದ್ದಾರೆ.
Published On - 7:39 pm, Wed, 16 August 23