Eldhose Paul: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಇತಿಹಾಸ ನಿರ್ಮಿಸಿದ ಭಾರತದ ಎಲ್ಡೋಸ್ ಪಾಲ್
World Athletics Championship 2022: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಭಾರತದ ಎಲ್ಡೋಸ್ ಪಾಲ್ (Eldhose Paul) ಇತಿಹಾಸ ನಿರ್ಮಿಸಿದ್ದಾರೆ. ಇವರು 16.68 ಮೀಟರ್ ಹಾರುವ ಮೂಲಕ ಫೈನಲ್‍ಗೆ ಕಾಲಿಟ್ಟಿದ್ದಾರೆ.
ಅಮೆರಿಕದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ (World Athletics Championships) ಪುರುಷರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಭಾರತದ ಎಲ್ಡೋಸ್ ಪಾಲ್ (Eldhose Paul) ಇತಿಹಾಸ ನಿರ್ಮಿಸಿದ್ದಾರೆ. ಇಂದು ನಡೆದ ಪಂದ್ಯದಲ್ಲಿ ಇವರು 16.68 ಮೀಟರ್ ಹಾರುವ ಮೂಲಕ ಫೈನಲ್‍ಗೆ ಗ್ರೂಪ್ A ವಿಭಾಗದಲ್ಲಿ 6ನೇ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ. ಈ ಮೂಲಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಟ್ರಿಪಲ್ ಜಂಪ್ ಫೈನಲ್‍ಗೆ ಅರ್ಹತೆ ಪಡೆದ ಮೊಟ್ಟ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಏಳು ವರ್ಷಗಳ ಹಿಂದೆ ಕೇರಳದಲ್ಲಿ ಭಾರತೀಯ ಟ್ರಿಪಲ್ ಜಂಪರ್ ಗಿಂತ ಉತ್ತಮ ಕ್ರೀಡಾಪಟುಗಳು ಇದ್ದಾರೆ ಎಂದು ಅಧಿಕಾರಿಗಳು ನಂಬಿದ್ದರಿಂದ ಎಲ್ಡೋಸ್ ಅವರನ್ನು ಕ್ರೀಡಾ ವಿದ್ಯಾರ್ಥಿವೇತನಕ್ಕೆ ತಿರಸ್ಕರಿಸಲಾಯಿತು. ಅದರೂ ಇದೀಗ ಯುಎಸ್ಎಯಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ದಾಖಲೆಯನ್ನೆ ಬರೆದಿದ್ದು ಫೈನಲ್ನಲ್ಲೂ ಗೆಲ್ಲುವ ಭರವಸೆ ಮೂಡಿಸಿದ್ದಾರೆ.
ಟ್ರಿಪಲ್ ಜಂಪ್‍ನಲ್ಲಿ ಎಲ್ಡೋಸ್ ಪಾಲ್ ಫೈನಲ್‍ಗೆ ಲಗ್ಗೆಯಿಟ್ಟರೆ ಜಾವಲಿನ್ ಥ್ರೋನಲ್ಲಿ ರೋಹಿತ್ ಯಾದವ್ 80.42 ಮೀ. ಎಸೆದು ಗ್ರೂಪ್ B ವಿಭಾಗದಲ್ಲಿ 6ನೇ ಸ್ಪರ್ಧಿಯಾಗಿ ಫೈನಲ್‍ಗೆ ತೇರ್ಗಡೆಗೊಂಡಿದ್ದಾರೆ. ಈ ಮೊದಲು ಜಾವೆಲಿನ್ ಎಸೆತದಲ್ಲಿ ಒಲಿಂಪಿಕ್ಸ್‌ನ ಚಿನ್ನದ ಹುಡುಗ ನೀರಜ್ ಚೋಪ್ರಾ 88.39 ಮೀ. ಎಸೆದು ಕೂಟದ ಗ್ರೂಪ್ A ವಿಭಾಗದಲ್ಲಿ ಮೊದಲನೇ ಸ್ಪರ್ಧಿಯಾಗಿ ಫೈನಲ್‍ಗೆ ಎಂಟ್ರಿಕೊಟ್ಟಿದ್ದರು. ಈ ಮೂಲಕ ವಿಶ್ವ ಅಥ್ಲೇಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಒಂದೇ ದಿನ ಭಾರತದ ಮೂವರು ಆಟಗಾರರು ಫೈನಲ್‍ಗೆ ಪ್ರವೇಶ ಪಡೆದಿದ್ದು ಪದಕದ ನಿರೀಕ್ಷೆ ಹುಟ್ಟಿಸಿದ್ದಾರೆ.
9 ವರ್ಷಗಳ ಇತಿಹಾಸ ಹೊಂದಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಭಾರತ ಪದಕ ಗೆದ್ದಿದ್ದು ಕೇವಲ 1 ಬಾರಿ ಮಾತ್ರ. 2003 ರಲ್ಲಿ ಪ್ಯಾರಿಸ್ನಲ್ಲಿ ನಡೆದ ಕೂಟದಲ್ಲಿ ಲೆಜೆಂಡರಿ ಲಾಂಗ್ ಜಂಪರ್ ಅಂಜು ಬಾಬಿ ಜಾರ್ಜ್ ಅವರು 6.70 ಮೀ ಜಿಗಿತದೊಂದಿಗೆ ಕಂಚಿನ ಪದಕ ಗೆದ್ದುಕೊಂಡಿದ್ದರು. ಇದಾದ ಬಳಿಕ ಯಾವುದೇ ಕ್ರೀಡಾಪಟುವು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ತಮ್ಮ ಸಾಮರ್ಥ್ಯವನ್ನು ತೆರೆದಿಡಲು ಸಾಧ್ಯವಾಗಿಲ್ಲ. ಇದೀಗ ಭಾರತ ಪದಕ ಗೆಲ್ಲುವ ನೆಚ್ಚಿನ ದೇಶವಾಗಿದೆ.
ಇನ್ನು ಭಾರತದ ಜಾವೆಲಿನ್ ಎಸೆತಗಾರ್ತಿ ಅನ್ನುರಾಣಿ ಸತತ ಎರಡನೇ ಸಲ ವಿಶ್ವ ಆ್ಯತ್ಲೆಟಿಕ್ಸ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸಿದ್ದಾರೆ. ಅರ್ಹತಾ ಸುತ್ತಿನಲ್ಲಿ ಅವರು 59.60 ಮೀ. ದೂರದ ಸಾಧನೆಗೈದರು. ಫೌಲ್‌ನೊಂದಿಗೆ ಸ್ಪರ್ಧೆ ಆರಂಭಿಸಿದ ಅನ್ನು ರಾಣಿ, ದ್ವಿತೀಯ ಪ್ರಯತ್ನದಲ್ಲಿ 55.35 ಮೀ. ದೂರಕ್ಕೆಸೆದರು. ಬಳಿಕ ಈ ದೂರವನ್ನು 59.60 ಮೀಟರ್‌ಗೆ ಹೆಚ್ಚಿಸಿಕೊಂಡು “ಬಿ’ ವಿಭಾಗದ 5ನೇ ಸ್ಥಾನಿಯಾದರು. ಒಟ್ಟಾರೆಯಾಗಿ 8ನೇ ಸ್ಥಾನ ಪಡೆದರು.
Published On - 1:18 pm, Fri, 22 July 22