IND vs WI: ಕಂಟಕವಾದ ಜಡೇಜಾ ಇಂಜುರಿ: ಮೊದಲ ಏಕದಿನಕ್ಕೆ ಭಾರತದ ಪ್ಲೇಯಿಂಗ್ XI ನಲ್ಲಿ ದೊಡ್ಡ ಬದಲಾವಣೆ
India Playing XI vs WI, 1st ODI: ಮೂರೂ ಏಕದಿನ ಪಂದ್ಯದಿಂದ ರವೀಂದ್ರ ಜಡೇಜಾ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಹಾಗಾದ್ರೆ ಇಂದಿನ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ ಇಲೆವೆನ್ (India Playing XI) ಹೇಗಿರಬಹುದು?.
ಭಾರತದ ಕೆರಿಬಿಯನ್ (IND vs WI) ಪ್ರವಾಸ ಇಂದಿನಿಂದ ಆರಂಭಗೊಳ್ಳಲಿದೆ. ಟ್ರಿನಿಡಾಡ್ನ ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದ್ದು ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಆದರೆ, ಪಂದ್ಯ ಆರಂಭಕ್ಕೂ ಮುನ್ನವೇ ಭಾರತಕ್ಕೆ ದೊಡ್ಡ ಆಘಾತ ಉಂಟಾಗಿದೆ. ಕೊಹ್ಲಿ, ರೋಹಿತ್, ಬುಮ್ರಾ, ಪಂತ್, ಹಾರ್ದಿಕ್ ಹೀಗೆ ಸ್ಟಾರ್ ಆಟಗಾರರು ವಿಶ್ರಾಂತಿ ಪಡೆದುಕೊಂಡ ಕಾರಣ ಯುವ ಆಟಗಾರರಿಗೆ ಅವಕಾಶ ನೀಡಿಲಾಗಿದೆ. ಆದರೆ, ತಂಡ ಇದೀಗ ಇಂಜುರಿ ಸಮಸ್ಯೆಯಿಂದ ಬಳಲುತ್ತಿದೆ. ಉಪ ನಾಯಕನಾಗಿರುವ ರವೀಂದ್ರ ಜಡೇಜಾ (Ravindra Jadeja) ಮೊಣ ಕಾಲಿಗೆ ಗಾಯಮಾಡಿಕೊಂಡಿದ್ದು, ಮೂರೂ ಏಕದಿನ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಇವರ ಜೊತೆಗೆ ಅರ್ಶ್ದೀಪ್ ಸಿಂಗ್ ಕೂಡ ಗಾಯಕ್ಕೆ ತುತ್ತಾಗಿದ್ದು ಪಂದ್ಯಕ್ಕೆ ಲಭ್ಯವಿರುವುದು ಅನುಮಾನ. ಹಾಗಾದ್ರೆ ಇಂದಿನ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ ಇಲೆವೆನ್ (India Playing XI) ಹೇಗಿರಬಹುದು?.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ, ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಯುವ ಪಡೆಯಿಂದ ಕೂಡಿರುವ ಭಾರತದ ಆಡುವ ಬಳಗ ಹೇಗಿರಲಿದೆ ಎಂಬುದು ಕುತೂಹಲ. ಧವನ್ ಜೊತೆ ಇಶಾನ್ ಕಿಶನ್, ಶುಭ್ಮನ್ ಗಿಲ್, ಋತುರಾಜ್ ಗಾಯಕ್ವಾಡ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಆವೇಶ್ ಖಾನ್, ಪ್ರಸಿದ್ಧ ಕೃಷ್ಣ ಮತ್ತು ಆರ್ಷದೀಪ್ ಸಿಂಗ್ ಅವರಿಗೆ ಈ ಸರಣಿ ಅಗ್ನಿಪರೀಕ್ಷೆ ಎನ್ನಬಹುದು. ವಿಕೆಟ್‌ಕೀಪರ್ ಸಂಜು ಸ್ಯಾಮ್ಸನ್ ಅವರಿಗೂ ಅಂತಿಮ ಹನ್ನೊಂದರಲ್ಲಿ ಕಣಕ್ಕಿಳಿಯುವ ಅವಕಾಶ ಸಿಗುವ ಸಾಧ್ಯತೆ ಇದೆ.
ಟೀಮ್ ಇಂಡಿಯಾ ಪರ ಓಪನರ್ಗಳಾಗಿ ಶಿಖರ್ ಧವನ್ ಹಾಗೂ ರುತುರಾಜ್ ಗಾಯಕ್ವಾಡ್ ಕಣಕ್ಕಿಳಿಯುವುದು ಬಹುತೇಕ ಖಚಿತ. ಮೂರನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ಗಳಾದ ಇಶಾನ್ ಕಿಶನ್ ಅಥವಾ ಸಂಜು ಸ್ಯಾಮ್ಸನ್ಗೆ ಅವಕಾಶ ಸಿಗಬಹುದು. ಸ್ಯಾಮ್ಸನ್ಗೆ ಹೆಚ್ಚು ಅನುಭವ ಇರುವ ಕಾರಣ ಇವರೇ ಮೊದಲ ಆಯ್ಕೆ ಆಗಿರಬಹುದು. ನಂತರದ ಎರಡು ಸ್ಥಾನಕ್ಕೆ ದೀಪಕ್ ಹೂಡ, ಸೂರ್ಯಕುಮಾರ್ ಯಾದವ್ ಹಾಗೂ ಶ್ರೇಯಸ್ ಅಯ್ಯರ್ ಹೀಗೆ ಮೂವರ ನಡುವೆ ಪೈಪೋಟಿ ನಡೆಯಲಿದೆ. ಇವರಲ್ಲಿ ಸೂರ್ಯ ಹಾಗೂ ಅಯ್ಯರ್ಗೆ ಸ್ಥಾನ ಸಿಗಬಹುದು.
ಜಡೇಜಾ ಅಲಭ್ಯರಾದರೆ ಅನುಭವಿ ಆಲ್ರೌಂಡರ್ನ ಕೊರತೆ ತಂಡದಲ್ಲಿ ಎದ್ದು ಕಾಣಲಿದೆ. ಅಕ್ಷರ್ ಪಟೇಲ್ ಅವರು ಜಡೇಜಾ ಸ್ಥಾನ ತುಂಬಬೇಕಿದೆ. ಶಾರ್ದೂಲ್ ಠಾಕೂರ್ ಕೂಡ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳಬಹುದು. ಇವರ ಜೊತೆಗೆ ಯುಜ್ವೇಂದ್ರ ಚಹಲ್, ಪ್ರಸಿದ್ಧ ಕೃಷ್ಣ, ಆವೇಶ್ ಖಾನ್ ಹಾಗೂ ಮೊಹಮ್ಮದ್ ಸಿರಾಜ್ ಕಣಕ್ಕಿಳಿಯಲಿದ್ದಾರೆ.
ಭಾರತ ಸಂಭಾವ್ಯ ಪ್ಲೇಯಿಂಗ್ XI: ಶಿಖರ್ ಧವನ್ (ನಾಯಕ), ಋತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಹಲ್, ಪ್ರಸಿದ್ಧ ಕೃಷ್ಣ, ಮೊಹಮ್ಮದ್ ಸಿರಾಜ್, ಆವೇಶ್ ಖಾನ್.