Ravindra Jadeja: ಭಾರತಕ್ಕೆ ಶಾಕ್ ಮೇಲೆ ಶಾಕ್: ರಾಹುಲ್ ಬಳಿಕ ಮತ್ತೊಬ್ಬ ಸ್ಟಾರ್ ಪ್ಲೇಯರ್ ಔಟ್?
IND vs WI 1st ODI: ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಆರಂಭಕ್ಕೂ ಮುನ್ನವೇ ಭಾರತಕ್ಕೆ ಒಂದರ ಹಿಂದೆ ಒಂದರಂತೆ ಆಘಾತ ಉಂಟಾಗಿದೆ. ರವೀಂದ್ರ ಜಡೇಜಾ ಇಂಜುರಿಯಿಂದ ಬಳಲುತ್ತಿದ್ದಾರೆ. ಇವರಿಗೆ ಮೊಣಕಾಲಿನ ನೋವು ಕಾಣಿಸಿಕೊಂಡಿದೆ.
ಇಂಗ್ಲೆಂಡ್ ಪ್ರವಾಸದ ಬಳಿಕ ಭಾರತ ತಂಡ ಇದೀಗ ವೆಸ್ಟ್ ಇಂಡೀಸ್ ಇಂಡೀಸ್ಗೆ (India vs West Indies) ತೆರಳಿದ್ದು ಇಂದು ಮೊದಲ ಏಕದಿನ ಪಂದ್ಯ ಆಯೋಜಿಸಲಾಗಿದೆ. ಆದರೆ, ಈ ಸರಣಿ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾಕ್ಕೆ ಒಂದರ ಹಿಂದೆ ಒಂದರಂತೆ ಆಘಾತ ಉಂಟಾಗಿದೆ. ಗುರುವಾರವಷ್ಟೆ ಕೆಎಲ್ ರಾಹುಲ್ಗೆ (KL Rahul) ಕೊರೊನಾ ಪಾಸಿಟಿವ್ ಇರುವುದು ಕಂಡುಬಂದಿತ್ತು. ವಿಂಡೀಸ್ ಪ್ರವಾಸಕ್ಕೆ ತೆರಳುವ ಮೊದಲ ನಡೆಸಲಾದ ಕೋವಿಡ್ ಪರೀಕ್ಷೆಯಲ್ಲಿ ರಾಹುಲ್ಗೆ ಸೋಂಕು ತಗುಲಿರುವುದು ಧೃಡಪಟ್ಟಿದೆ. ಹೀಗಾಗಿ ಇವರು ಕೆರಿಬಿಯನ್ನರ ನಾಡಿಗೆ ತೆರಳುವುದು ಅನುಮಾನ ಎನ್ನಲಾಗುತ್ತಿದೆ. ಹೀಗಿರುವಾಗ ಇದೀಗ ಭಾರತಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಉಪ ನಾಯಕನಾಗಿ ಆಯ್ಕೆ ಆಗಿರುವ ರವೀಂದ್ರ ಜಡೇಜಾ (Ravindra Jadeja) ಅವರು ಈ ಸರಣಿಯಿಂದಲೇ ಹೊರಗುಳಿಯಲಿದ್ದಾರೆ ಎಂದು ವರದಿ ಆಗಿದೆ.
ಹೌದು, ಜಡೇಜಾ ಅವರು ಇಂಜುರಿಯಿಂದ ಬಳಲುತ್ತಿದ್ದಾರೆ. ಇವರಿಗೆ ಮೊಣಕಾಲಿನ ನೋವು ಕಾಣಿಸಿಕೊಂಡಿದ್ದು ವೆಸ್ಟ್ ಇಂಡೀಸ್ ವಿರುದ್ಧದ ಮೂರೂ ಏಕದಿನ ಪಂದ್ಯದಿಂದ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಕ್ರಿಕ್ಬಜ್ ವರದಿ ಮಾಡಿದೆ. ಐಪಿಎಲ್ 2022ರಲ್ಲಿ 10 ಪಂದ್ಯ ಆಡಿದ ಬಳಿಕ ಗಾಯಕ್ಕೆ ತುತ್ತಾಗಿದ್ದ ಜಡೇಜಾ ಇಂಗ್ಲೆಂಡ್ ವಿರುದ್ಧದ ಸರಣಿ ಮೂಲಕ ಭರ್ಜರಿ ಕಮ್ಬ್ಯಾಕ್ ಮಾಡಿದ್ದರು. ಆಂಗ್ಲರ ವಿರುದ್ಧ ಬಾಕಿ ಉಳಿದಿದ್ದ ಒಂದು ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದರು. ಇದಾದ ಬಳಿಕ ಜಡೇಜಾ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದರು.
ಕೆರಿಬಿಯನ್ ಪ್ರವಾಸಕ್ಕೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದ ಕಾರಣ ಜಡೇಜಾ ಅವರನ್ನು ಉಪ ನಾಯಕನಾಗಿ ನೇಮಿಸಲಾಗಿತ್ತು. ಆದರೀಗ ಇವರು ಏಕದಿನ ಸರಣಿಯಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ. ಹೀಗಾದಲ್ಲಿ ತಂಡದಲ್ಲಿರುವ ಮತ್ತೊಬ್ಬ ಅನುಭವಿ ಆಟಗಾರ ಯುಜ್ವೇಂದ್ರ ಚಹಲ್ ಉಪ ನಾಯಕ ಪಟ್ಟ ಅಲಂಕರಿಸಲಿದ್ದಾರೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಶಿಖರ್ ಧವನ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿ ಪೈಕಿ ಇಂದು ಮೊದಲ ಮ್ಯಾಚ್ ನಡೆದರೆ, ಜುಲೈ 24 ಹಾಗೂ ಜುಲೈ 27 ಕ್ಕೆ ಉಳಿದ ಎರಡು ಪಂದ್ಯ ಆಯೋಜಿಸಲಾಗಿದೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ, ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಯುವ ಪಡೆಯಿಂದ ಕೂಡಿರುವ ಭಾರತದ ಆಡುವ ಬಳಗ ಹೇಗಿರಲಿದೆ ಎಂಬುದು ಕುತೂಹಲ. ಧವನ್ ಜೊತೆ ಇಶಾನ್ ಕಿಶನ್, ಶುಭ್ಮನ್ ಗಿಲ್, ಋತುರಾಜ್ ಗಾಯಕ್ವಾಡ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಆವೇಶ್ ಖಾನ್, ಪ್ರಸಿದ್ಧ ಕೃಷ್ಣ ಮತ್ತು ಆರ್ಷದೀಪ್ ಸಿಂಗ್ ಮುಖ್ಯ ವೇಗಿಗಳಾಗಿ ಕಣಕ್ಕಿಳಿಯಲಿದ್ದಾರೆ.
ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಸಂಜೆ 7 ಗಂಟೆಯಿಂದ ಶುರುವಾಗಲಿದೆ. ನೇರಪ್ರಸಾರ ಡಿಡಿ ನ್ಯಾಷನಲ್ ಚಾನೆಲ್ನಲ್ಲಿ ಇರಲಿದೆ. ಹಾಗೆಯೇ ಸ್ಪೋರ್ಟ್ಸ್ ಮ್ಯಾಕ್ಸ್ (SportsMax) ಚಾನೆಲ್ನಲ್ಲೂ ಲೈವ್ ಇರಲಿದೆ. ಫ್ಯಾನ್‌ಕೋಡ್ ಆ್ಯಪ್ ಮತ್ತು ವೆಬ್ಸೈಟ್ ಮೂಲಕ ಲೈವ್ ಸ್ಟೀಮಿಂಗ್ ವೀಕ್ಷಿಸಬಹುದು.