ರಷ್ಯಾ ಆಕ್ರಮಣದಿಂದಾಗಿ ಯುದ್ಧಪೀಡಿತ ಪ್ರದೇಶವಾಗಿರುವ ಉಕ್ರೇನ್‌ನ (Ukraine) ಸ್ಥಿತಿ ಚಿಂತಾಜನಕವಾಗಿದೆ. ಗುರುವಾರ ರಷ್ಯಾ ಅಧ್ಯಕ್ಷ ಪುಟಿನ್ (Putin) ಅವರು ದೂರದರ್ಶನದ ಮೂಲಕ ತಾವು ಉಕ್ರೇನ್ ಮೇಲೆ ದಾಳಿ ಮಾಡುತ್ತಿರುವುದಾಗಿ ಘೋಷಿಸಿ ಆರಂಭವಾದ ಯುದ್ಧ ಇನ್ನೂ ಅಂತ್ಯಕಂಡಿಲ್ಲ. ಸಾವು ನೋವುಗಳ ಸಂಖ್ಯೆ ಹೆಚ್ಚುತ್ತಿದ್ದರೂ ಶಸ್ತ್ರಾಸ್ತ್ರಗಳಲ್ಲಿ ಪ್ರಬಲವಾಗಿರುವ ರಷ್ಯಾದೊಂದಿಗೆ ಉಕ್ರೇನ್ ಏಕಾಂಗಿಯಾಗಿ ಹೋರಾಡುತ್ತಿದೆ. ಈ ಮಧ್ಯೆ ಪ್ರೈಮಿರಾ ಲಿಗಾ ಹಣಾಹಣಿಯಲ್ಲಿ ವಿಶೇಷ ಘಟನೆಯೊಂದು ನಡೆದಿದೆ. ಉಕ್ರೇನ್‌ನ ರೋಮನ್ ಯಾರೆಮ್ಚುಕ್ (Roman Yaremchuk) ಅವರಿಗೆ ವಿಟೋರಿಯಾ ಎಸ್ಸಿ ವಿರುದ್ಧದ ಪಂದ್ಯದಲ್ಲಿ ಬೆನ್ಫಿಕಾ ಬೆಂಬಲಿಗರು ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ಇಡೀ ಉಕ್ರೇನ್ ದೇಶವೇ ಕಣ್ಣೀರಿನಲ್ಲಿ ಮುಳುಗುತ್ತಿದ್ದರೆ ಇತ್ತ ಪ್ರೈಮಿರಾ ಲಿಗಾನಲ್ಲಿ ನಡೆದ ಈ ಘಟನೆ ಮತ್ತಷ್ಟು ಭಾವುಕರನ್ನಾಗಿ ಮಾಡುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉಕ್ರೇನಿಯನ್ ಸ್ಟ್ರೈಕರ್ ಆರಂಭದಲ್ಲಿ ಆಡುವ 11ರ ಬಳಗದಲ್ಲಿ ಇರಲಿಲ್ಲ. ಆದರೆ ಇವರು ಪಂದ್ಯದ 62ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕೆ ಪ್ರವೇಶ ಪಡೆದರು. ಇವರು ಮೈದಾನಕ್ಕೆ ಕಾಲಿಟ್ಟಿದ್ದೇ ತಡ ಬೆನ್‌ಫಿಕಾ ತಂಡದ ಬೆಂಬಲಿಗರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ಯಾರೆಮ್‌ಚುಕ್ ತಾಯ್ನಾಡನ್ನು ಬೆಂಬಲಿಸಿ ಬೆನ್‌ಫಿಕಾ ಬೆಂಬಲಿಗರು ಗೌರವ ಸೂಚಿಸಿದರು. ರೋಮನ್ ಯಾರೆಮ್ಚುಕ್ಗೆ ನಾಯಕನ ಆರ್ಮ್‌ಬ್ಯಾಂಡ್ ಅನ್ನು ಸಹ ನೀಡಲಾಯಿತು. ಈ ಸಂದರ್ಭ ದುಃಖ ತಾಳಲಾರದೆ ಇವರು ಕೂಡ ಕಣ್ಣೀರು ಸುರಿಸಿದರು.
?? This moment… Speachless! ? pic.twitter.com/EpgNydnZer
— SL Benfica (@slbenfica_en) February 27, 2022
ಬೆನ್ಫಿಕಾ ತಂಡವು ಎಸ್ಟಾಡಿಯೊ ಡ ಲುಝ್ ನಲ್ಲಿ ನಡೆದ ಪಂದ್ಯವನ್ನು 3-0 ಅಂತರದಿಂದ ಗೆದ್ದುಕೊಂಡಿತು. ಡಾರ್ವಿನ್ ನುನೆಝ್ ಎರಡು ಗೋಲು ಗಳಿಸಿದರು. ಇದೇ ವೇಳೆ ಗೊನ್ಕಾಲೊ ರಾಮೋಸ್ ಕೂಡ ಗೋಲು ದಾಖಲಿಸಿದರು. ರಷ್ಯಾ ವಿರುದ್ಧ ಇಂಗ್ಲೆಂಡ್ ತನ್ನ ಎಲ್ಲಾ ಅಂತರರಾಷ್ಟ್ರೀಯ ಪಂದ್ಯಗಳನ್ನು ಬಹಿಷ್ಕರಿಸುವುದಾಗಿ ಘೋಷಿಸುವುದರೊಂದಿಗೆ ಯುರೋಪಿನ ಹಲವು ಫುಟ್ಬಾಲ್ ರಾಷ್ಟ್ರಗಳಿಂದ ಉಕ್ರೇನ್ ಬೆಂಬಲವನ್ನು ಪಡೆದುಕೊಂಡಿದೆ.
Ukrainian forward Roman Yaremchuk comes on for Darwin Núñez and is handed the captain’s armband.
The entire Benfica supporters group gives him a standing ovation, moving Yaremchuk to tears.
Very emotional moment at the Luz. pic.twitter.com/BY8cLPS1Aa
— Zach Lowy (@ZachLowy) February 27, 2022
ಖಾರ್ಕಿವ್ ಬಿಟ್ಟು ಕೊಡದ ಉಕ್ರೇನ್:
ಉಕ್ರೇನ್ನ 2ನೇ ಅತಿದೊಡ್ಡ ನಗರ ಖಾರ್ಕಿವ್ ಅನ್ನು ವಶಪಡಿಸಿಕೊಳ್ಳುವ ರಷ್ಯಾ ಸೇನೆಯ ಪ್ರಯತ್ನ ವಿಫಲಗೋಳಿಸಿದ್ದು, ಖಾರ್ಕಿವ್ ತಮ್ಮ ವಶದಲ್ಲಿರುವುದಾಗಿ ಉಕ್ರೇನ್ ಘೋಷಿಸಿದೆ. ರಷ್ಯಾ ಶಾಂತಿ ಮಾತುಕತೆಯ ಹಾದಿಯನ್ನು ಇನ್ನಷ್ಟು ಜಟಿಲಗೊಳಿಸುತ್ತಿದೆ ಎಂದು ಆರೋಪಿಸಿರುವ ಉಕ್ರೇನ್ ಸೇನಾ ಮೂಲಗಳು, ರಷ್ಯಾ ಸೇನೆ ನಮ್ಮ ನಾಗರಿಕ ಮತ್ತು ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿದೆ. ಆದರೆ ರಷ್ಯಾ ಸೇನೆಯ ಎಲ್ಲಾ ಕಾರ್ಯಾಚರಣೆಯನ್ನು ವಿಫಲಗೊಳಿಸಿರುವುದಾಗಿ ಉಕ್ರೇನ್ ತಿರುಗೇಟು ನೀಡಿದೆ.
ಮಾತುಕತೆಗೆ ಸಜ್ಜಾದ ವೇದಿಕೆ:
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರಮಾಣು ದಾಳಿ ಬೆದರಿಕೆಯ ಬಳಿಕ ಉಕ್ರೇನ್ ಶಾಂತಿ ಮಾತುಕತೆಗೆ ಒಪ್ಪಿಗೆ ನೀಡಿದ್ದು, ಬೆಲಾರಸ್ ಗಡಿಯಲ್ಲಿ ಉಭಯ ರಾಷ್ಟ್ರಗಳ ನಿಯೋಗ ಮಾತುಕತೆಗೆ ಮುಂದಾಗಲಿವೆ. ಸಂಧಾನಕ್ಕೆ ಅಗತ್ಯ ಸಿದ್ಧತೆ ಮಾಡಲಾಗಿದೆ. ನಿಯೋಗಗಳ ಆಗಮನಕ್ಕೆ ಕಾದಿದ್ದೇವೆ ಎಂದು ಬೆಲಾರಸ್ ಸರ್ಕಾರ ತಿಳಿಸಿದೆ. ರಷ್ಯಾದೊಂದಿಗೆ ಮಾತುಕತೆ ನಡೆಸಲು ಉಕ್ರೇನಿಯನ್ ನಿಯೋಗ ಬೆಲಾರಸ್‌ಗೆ ತಲುಪಿದೆ. ಇನ್ನು ರಷ್ಯಾದ ವಿದೇಶಾಂಗ, ರಕ್ಷಣೆ ಮತ್ತು ಅಧ್ಯಕ್ಷರ ಕಚೇರಿ ಅಧಿಕಾರಿಗಳನ್ನೊಳಗೊಂಡ ನಿಯೋಗ ಕೂಡ ಬೆಲಾರಸ್ನಲ್ಲಿದೆ ಎಂದು ತಿಳಿದು ಬಂದಿದೆ. ಉಭಯ ದೇಶಗಳ ಮಧ್ಯೆ ಯುದ್ಧ ಆರಂಭವಾದ ಬಳಿಕ ನಡೆಯುತ್ತಿರುವ ಮೊದಲ ಸಂಧಾನ ಸಭೆ ಇದಾಗಿದೆ.