ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆಲ್ಲುವಲ್ಲಿ ಸುಮಿತ್ ಆಂಟಿಲ್ ಮತ್ತೊಮ್ಮೆ ಯಶಸ್ವಿಯಾಗಿದ್ದಾರೆ. ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಜಾವೆಲಿನ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದು ಕೊಟ್ಟಿದ್ದ ಸುಮಿತ್ ಈ ಬಾರಿ ದಾಖಲೆಯೊಂದಿಗೆ ಬಂಗಾರದ ಪದಕಕ್ಕೆ ಕೊರೊಳೊಡ್ಡಿದ್ದಾರೆ. ಜಾವೆಲಿನ್ ಥ್ರೋ F64 ಫೈನಲ್ ಸ್ಪರ್ಧೆಯಲ್ಲಿ 70.59 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಭಾರತೀಯ ತಾರೆ ಚಿನ್ನದ ಪದಕ ಗೆದ್ದರೆ, 67.03 ಮೀಟರ್ ದೂರ ಎಸೆದ ಶ್ರೀಲಂಕಾದ ದುಲಾನ್ ಬೆಳ್ಳಿ ಪದಕ ಗೆದ್ದರು. ಇನ್ನು ಆಸ್ಟ್ರೇಲಿಯಾದ ಬುರಿಯಾನ್ 64.89 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.
ಸುಮಿತ್ ಆಂಟಿಲ್ ತನ್ನ ಮೊದಲ ಪ್ರಯತ್ನದಲ್ಲಿಯೇ ಪ್ಯಾರಾಲಿಂಪಿಕ್ಸ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಮೊದಲ ಎಸೆತದಲ್ಲೇ 69.11 ಮೀಟರ್ ದೂರ ಕ್ರಮಿಸಿದ ಸುಮಿತ್, ಎರಡನೇ ಪ್ರಯತ್ನದ ಮೂಲಕ 70.59 ಮೀಟರ್ ತಲುಪಿ ಚಿನ್ನವನ್ನು ಖಚಿತಪಡಿಸಿಕೊಂಡರು. ಇನ್ನು ಮೂರನೇ ಪ್ರಯತ್ನದಲ್ಲಿ 66.66 ಮೀಟರ್ ದೂರವನ್ನು ಸಾಧಿಸಿದರು. ನಾಲ್ಕನೇ ಪ್ರಯತ್ನದಲ್ಲಿ ಫೌಲ್ ಥ್ರೋ ಮಾಡಿದರು. ಐದನೇ ಪ್ರಯತ್ನದಲ್ಲಿ 69.04 ಮೀಟರ್ ದೂರವನ್ನು ಸಾಧಿಸಿದರು. ಹಾಗೆಯೇ ಕೊನೆಯ ಪ್ರಯತ್ನದಲ್ಲಿ 66.57 ಮೀಟರ್ ದೂರಕ್ಕೆ ಎಸೆಯುವ ಮೂಲಕ ಫೈನಲ್ ಸ್ಪರ್ಧೆಯನ್ನು ಮುಗಿಸಿದರು.
ಈ ಮೂಲಕ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಸುಮಿತ್ ಆಂಟಿಲ್ ಚಿನ್ನದ ಪದಕವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ವರ್ಷ ನಡೆದ ಪ್ಯಾರಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 69.50 ಮೀಟರ್ ಜಾವೆಲಿನ್ ಎಸೆದು ಚಿನ್ನ ಗೆದ್ದಿದ್ದರು. ಹಾಗೆಯೇ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರು 68.55 ಮೀಟರ್ ದೂರ ಎಸೆದು ಚಿನ್ನದ ಪದಕವನ್ನು ಗೆದ್ದಿದ್ದರು. ಇದೀಗ ಈ ದಾಖಲೆಗಳನ್ನು ಮುರಿಯುವ ಮೂಲಕ 70.59 ಮೀಟರ್ನೊಂದಿಗೆ ಸುಮಿತ್ ಆಂಟಿಲ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಸುಮಿತ್ ಆಂಟಿಲ್ ಅವರು 6 ಜುಲೈ 1998 ರಂದು ಹರಿಯಾಣದ ಖೇವ್ರಾದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ವಾಯುಪಡೆಯಲ್ಲಿ JWO ಅಧಿಕಾರಿಯಾಗಿದ್ದರು. ಸುಮಿತ್ ಬಾಲ್ಯದಿಂದಲೂ ತುಂಬಾ ಶ್ರಮಜೀವಿ. ಬಾಲ್ಯದಿಂದಲೂ ಕುಸ್ತಿಯಲ್ಲಿ ಆಸಕ್ತಿ ಹೊಂದಿದ್ದರು. ಅದಕ್ಕೇ ಕುಸ್ತಿಪಟು ಆಗಬೇಕು ಎಂದು ಆಸೆಪಟ್ಟು ಬಾಲ್ಯದಿಂದಲೂ ಅದಕ್ಕಾಗಿ ಶ್ರಮಿಸುತ್ತಿದ್ದ.
ಆದರೆ ದುರಾದೃಷ್ಟ ಎಂಬಂತೆ 2015 ರಲ್ಲಿ ಸುಮಿತ್ ಟ್ಯೂಷನ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಅವರ ಕಾರು ಅಪಘಾತಕ್ಕೀಡಾಯಿತು. ಅವರ ತಂದೆ ಭಾರತೀಯ ಸೇನೆಯಲ್ಲಿದ್ದ ಕಾರಣ ಅವರನ್ನು ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ವೈದ್ಯರು ಸುಮಿತ್ ಅವರ ಮೊಣಕಾಲಿನ ಕೆಳಗಿನ ಭಾಗವನ್ನು ಕತ್ತರಿಸಬೇಕಾಯಿತು. 53 ದಿನಗಳ ವಿಶ್ರಾಂತಿಯ ನಂತರ ಅವರನ್ನು ಪುಣೆಯ ಕೃತಕ ಅಂಗ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಕೃತಕ ಕಾಲು ಅಥವಾ ಕೃತಕ ಕಾಲನ್ನು ಅಳವಡಿಸಲಾಯಿತು. ಇದರೊಂದಿಗೆ ಕುಸ್ತಿಪಟುವಾಗುವ ಅವರ ಕನಸುಗಳು ನುಚ್ಚುನೂರಾಯಿತು.
ಇದನ್ನೂ ಓದಿ: 2 ವರ್ಷ ಬೆಂಚ್ ಕಾಯಿಸಿದ RCBಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ ಮನೋಜ್ ಭಾಂಡಗೆ
ಅತ್ತ ಕೃತಕ ಕಾಲಿನ ಕಾರಣ ಕುಸ್ತಿಪಟುವಾಗುವ ಕನಸನ್ನು ತ್ಯಜಿಸಿದ ಸುಮಿತ್ ಆ ಬಳಿಕ ಪ್ಯಾರಾಲಿಂಪಿಕ್ಸ್ನತ್ತ ಮುಖ ಮಾಡಿದರು. ಆರಂಭದಲ್ಲಿ ಅವರು ಶಾಟ್‌ಪುಟ್ ಆಗಬೇಕೆಂದು ಬಯಸಿದ್ದರು. ಈ ಬಗ್ಗೆ ಅಭಿಪ್ರಾಯ ಪಡೆಯಲು ಭಾರತದ ಕೋಚ್ ವೀರೇಂದ್ರ ಧಂಖರ್ ಅವರನ್ನು ಭೇಟಿಯಾದರು. ಅವರು ಜಾವೆಲಿನ್ ಕೋಚ್ ನವಲ್ ಸಿಂಗ್ ಅವರಿಗೆ ಸುಮಿತ್ ಅವರನ್ನು ಪರಿಚಯಿಸಿದರು. ಅವರ ಭೇಟಿಯ ಬಳಿಕ ಸುಮಿತ್ ಆಂಟಿಲ್ ಜಾವೆಲಿನ್ ಥ್ರೋನತ್ತ ಆಕರ್ಷಿತರಾದರು. ಆ ಬಳಿಕ ಶುರುವಾದ ಸತತ ಪ್ರಯತ್ನದ ಫಲವಾಗಿ ಇದೀಗ ಸುಮಿತ್ ಆಂಟಿಲ್ ಅಂತಾರಾಷ್ಟ್ರೀಯ ಮಟ್ಟದ ಪ್ಯಾರಾಲಿಂಪಿಯನ್ ಆಗಿ ಮಿಂಚುತ್ತಿದ್ದಾರೆ.