RCB ಪರ ಆಡ್ಬೇಕು, ಆರ್ಸಿಬಿಗೆ ಕಪ್ ಗೆಲ್ಲಿಸಿ ಕೊಡ್ಬೇಕು: ಪ್ರಿಯಾಂಶ್ ಆರ್ಯ
Priyansh Arya: ಪ್ರಿಯಾಂಶ್ ಆರ್ಯ ಡೆಲ್ಲಿ ಪ್ರೀಮಿಯರ್ ಲೀಗ್ನಲ್ಲಿ ಒಂದೇ ಓವರ್ನಲ್ಲಿ 6 ಸಿಕ್ಸ್ ಸಿಡಿಸಿ ಅಬ್ಬರಿಸಿದ್ದಾರೆ. ಹಾಗೆಯೇ ಡಿಪಿಎಲ್ನಲ್ಲಿ 2 ಶತಕ ಬಾರಿಸಿದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದೀಗ ಐಪಿಎಲ್ ಅವಕಾಶವನ್ನು ಎದುರು ನೋಡುತ್ತಿರುವ ಯುವ ದಾಂಡಿಗ ಆರ್‌ಸಿಬಿ ಪರ ಕಣಕ್ಕಿಳಿಯಬೇಕೆಂಬ ಮನದಾಸೆಯನ್ನು ವ್ಯಕ್ತಪಡಿಸಿದ್ದಾರೆ.
Updated on: Sep 03, 2024 | 9:03 AM

ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಬೇಕು... ಅಲ್ಲದೆ ಆರ್‌ಸಿಬಿ ಪಾಲಿಗೆ ಮರೀಚಿಕೆಯಾಗಿರುವ ಐಪಿಎಲ್ ಟ್ರೋಫಿಯನ್ನು ಗೆದ್ದು ಕೊಡಬೇಕು... ಹೀಗಂದಿದ್ದು ಮತ್ಯಾರೂ ಅಲ್ಲ. ಡೆಲ್ಲಿ ಪ್ರೀಮಿಯರ್ ಲೀಗ್ನ ಸಿಕ್ಸರ್ ಕಿಂಗ್ ಪ್ರಿಯಾಂಶ್ ಆರ್ಯ. ಪ್ರಸ್ತುತ ನಡೆಯುತ್ತಿರುವ ಡಿಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಪ್ರಿಯಾಂಶ್ ಆರ್‌ಸಿಬಿ ಪರ ಆಡಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಸೌತ್ ಡೆಲ್ಲಿ ಸೂಪರ್ ಸ್ಟಾರ್ಸ್ ಪರ ಕಣಕ್ಕಿಳಿಯುತ್ತಿರುವ ಪ್ರಿಯಾಂಶ್ ಆರ್ಯ ಕೇವಲ 9 ಪಂದ್ಯಗಳಿಂದ 602 ರನ್ ಕಲೆಹಾಕಿದ್ದಾರೆ. ಈ ವೇಳೆ 2 ಭರ್ಜರಿ ಶತಕ ಹಾಗೂ 4 ಅರ್ಧಶತಕಗಳನ್ನು ಸಿಡಿಸಿದ್ದಾರೆ. ತಮ್ಮ ಸ್ಪೋಟಕ ಬ್ಯಾಟಿಂಗ್ನಿಂದಲೇ ಗುರುತಿಸಿಕೊಂಡಿರುವ ಯುವ ಎಡಗೈ ದಾಂಡಿಗ ಮುಂಬರುವ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಚಾನ್ಸ್ ಸಿಗುವುದನ್ನು ಎದುರು ನೋಡುತ್ತಿದ್ದಾರೆ.

ಈ ಬಗ್ಗೆ ವೆಬ್ಸೈಟ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ರಿಯಾಂಶ್, ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಆಟಗಾರ. ಹೀಗಾಗಿ ನಾನು ಸಹ ಆರ್‌ಸಿಬಿ ಪರ ಆಡಲು ಬಯಸುತ್ತೇನೆ. ಅವಕಾಶ ಸಿಕ್ಕರೆ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಬೇಕೆಂಬ ಆಸೆಯಿದೆ ಎಂದು ತಿಳಿಸಿದ್ದಾರೆ.

ಆರ್‌ಸಿಬಿ ತಂಡವು ಈವರೆಗೆ ಐಪಿಎಲ್ ಟ್ರೋಫಿ ಗೆದ್ದಿಲ್ಲ. ಈ ಕೊರತೆಯನ್ನು ನೀಗಿಸಬೇಕಿದೆ. ಅದಕ್ಕಾಗಿ ನಾನು ಬ್ಯಾಟಿಂಗ್ ಮೂಲಕ ನನ್ನಿಂದಾದ ನೆರವು ನೀಡಬಲ್ಲೆ. ಈ ಮೂಲಕ ಆರ್ಸಿಬಿಗೆ ಚೊಚ್ಚಲ ಟ್ರೋಫಿ ಗೆಲ್ಲಿಸಿಕೊಡಬೇಕೆಂಬ ಆಸೆಯಿದೆ ಎಂದು ಪ್ರಿಯಾಂಶ್ ಆರ್ಯ ತಿಳಿಸಿದ್ದಾರೆ.

ಸದ್ಯ ಡೆಲ್ಲಿ ಪ್ರೀಮಿಯರ್ ಲೀಗ್ನಲ್ಲಿ ಸಂಚಲನ ಸೃಷ್ಟಿಸಿರುವ ಪ್ರಿಯಾಂಶ್ ಆರ್ಯ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳುವುದು ಖಚಿತ. ಈಗಾಗಲೇ ಸೌತ್ ಡೆಲ್ಲಿಯ ಆರಂಭಿಕ ಆಟಗಾರನ ಮೇಲೆ ಕೆಲ ಫ್ರಾಂಚೈಸಿಗಳು ಕಣ್ಣಿಟ್ಟಿದೆ. ಇದಾಗ್ಯೂ ಯುವ ಎಡಗೈ ದಾಂಡಿಗ ಆರ್‌ಸಿಬಿ ಪರ ಆಡಬೇಕೆಂಬ ಮನದಿಂಗಿತವನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪ್ರಿಯಾಂಶ್ ಆರ್ಯರನ್ನು ಈ ಬಾರಿ ಆರ್‌ಸಿಬಿ ಖರೀದಿಸಲಿದೆಯಾ ಕಾದು ನೋಡಬೇಕಿದೆ.
