ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇಂದು ನಡೆದ ಭಾರತ ಹಾಗೂ ಗ್ರೇಟ್ ಬ್ರಿಟನ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಬ್ರಿಟನ್ ತಂಡವನ್ನು 4-2 ಗೋಲುಗಳಿಂದ ಸೋಲಿಸಿದ ಭಾರತ ಹಾಕಿ ತಂಡ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಇದರೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ, ಹಾಕಿಯಲ್ಲಿ ಪದಕ ಗೆಲ್ಲುವ ನಿರೀಕ್ಷೆ ಇನ್ನಷ್ಟು ಗಟ್ಟಿಯಾಗಿದೆ. ವಾಸ್ತವವಾಗಿ 2020 ರಲ್ಲಿ ನಡೆದಿದ್ದ ಟೋಕಿಯೊ ಒಲಿಂಪಿಕ್ಸ್‌ನಲ್ಲೂ ಇದೇ ಗ್ರೇಟ್ ಬ್ರಿಟನ್ ತಂಡವನ್ನು ಸೋಲಿಸುವ ಮೂಲಕ ಭಾರತ ಸೆಮಿಫೈನಲ್ ತಲುಪಿತ್ತು. ಈ ಬಾರಿಯೂ ಅದೇ ಸಂಭವಿಸಿದೆ. ಆದರೆ ಈ ಬಾರಿ ಎರಡು ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಗ್ರೂಪ್ ಹಂತದಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತ ಹಾಕಿ ತಂಡ ಈ ಪಂದ್ಯದಲ್ಲೂ ಅಮೋಘ ಆರಂಭ ಪಡೆದಿತ್ತಾದರೂ, ಗ್ರೇಟ್ ಬ್ರಿಟನ್ ಕೂಡ ಅದ್ಭುತ ಆಟ ಪ್ರದರ್ಶಿಸಿತು. ಇದರಿಂದಾಗಿ ಪಂದ್ಯದ ಫಲಿತಾಂಶ ಶೂಟೌಟ್‌ನಲ್ಲಿ ನಿರ್ಧಾರವಾಯಿತು.
ಉಭಯ ತಂಡಗಳ ನಡುವಿನ ಈ ಪಂದ್ಯದ ಮೊದಲ ಕ್ವಾರ್ಟರ್ ಯಾವುದೇ ಗೋಲುಗಳಿಲ್ಲದೆ ಅಂತ್ಯಗೊಂಡಿತು. ಆದರೆ ಎರಡನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳಿಂದ ಆಕ್ರಮಣಕಾರಿ ಆಟ ಕಂಡು ಬಂತು. ಮೊದಲನೆಯದಾಗಿ ಭಾರತದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಎರಡನೇ ಕ್ವಾರ್ಟರ್‌ನಲ್ಲಿ ಗೋಲು ಗಳಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಇದರ ನಂತರ, ಎರಡನೇ ಕ್ವಾರ್ಟರ್‌ನಲ್ಲಿಯೇ ಬ್ರಿಟನ್ ತಂಡ ಕೂಡ ಗೋಲು ಗಳಿಸಿ 1-1 ರಿಂದ ಸಮಬಲ ಸಾಧಿಸಿತು. ಬ್ರಿಟನ್ ಪರ ಲೀ ಮಾರ್ಟನ್ ಗೋಲು ದಾಖಲಿಸಿದರು. ಇದಾದ ಬಳಿಕ ಉಭಯ ತಂಡಗಳಿಂದ ಯಾವುದೇ ಗೋಲು ದಾಖಲಾಗಲಿಲ್ಲ.
SREEJESH THE WALL STANDS TALL! 💪
The #MenInBlue defeat Great Britain after an epic 4-2 shoot-out win in an exciting 🤯 Men’s #Hockey Quarter-final match at the #Paris2024Olympics. 🏑#TeamIndia ended the match in normal time with the scores tied at 1-1 but played brilliantly… pic.twitter.com/dlW4ETRfY1
— SAI Media (@Media_SAI) August 4, 2024
ಈ ಮಹತ್ವದ ಪಂದ್ಯದಲ್ಲಿ ಭಾರತ ತಂಡ ಎರಡನೇ ಕ್ವಾರ್ಟರ್ನಲ್ಲೇ ದೊಡ್ಡ ಹಿನ್ನಡೆ ಅನುಭವಿಸಬೇಕಾಯಿತು. ಅಮಿತ್ ರೋಹಿದಾಸ್‌ಗೆ ಅಂಪೈರ್ ರೆಡ್ ಕಾರ್ಡ್ ನೀಡಿದರಿಂದಾಗಿ ಅವರು ಇಡೀ ಪಂದ್ಯದಿಂದ ಹೊರಗುಳಿಯಬೇಕಾಯಿತು. ಹೀಗಾಗಿ ಭಾರತ ಹಾಕಿ ತಂಡವು ಕೇವಲ 10 ಆಟಗಾರರೊಂದಿಗೆ ಇಡೀ ಪಂದ್ಯವನ್ನು ಆಡಬೇಕಾಯಿತು. ಆದರೆ 10 ಆಟಗಾರರಿದ್ದರೂ ಭಾರತ ಹಾಕಿ ತಂಡ ಉತ್ತಮ ರಕ್ಷಣಾತ್ಮಕ ಆಟವನ್ನು ಪ್ರದರ್ಶಿಸಿ, ಬ್ರಿಟನ್ ತಂಡಕ್ಕೆ ಒಂದೇ ಒಂದು ಗೋಲು ಬಿಟ್ಟುಕೊಡಲಿಲ್ಲ.
ಅಂತಿಮವಾಗಿ ಪಂದ್ಯ 1-1 ರಿಂದ ಡ್ರಾ ಆದ್ದರಿಂದ ಪೆನಾಲ್ಟಿ ಶೂಟೌಟ್‌ನಲ್ಲಿ ವಿಜೇತರನ್ನು ನಿರ್ಧರಿಸಲಾಯಿತು. ಇದರಲ್ಲಿ ಭಾರತ 4-2 ಗೋಲುಗಳಿಂದ ಬ್ರಿಟನ್ನನ್ನು ಸೋಲಿಸಿತು. ಪೆನಾಲ್ಟಿ ಶೂಟೌಟ್‌ನಲ್ಲಿ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮೊದಲ ಗೋಲು ದಾಖಲಿಸಿದರೆ, ಇದಾದ ಬಳಿಕ ಭಾರತದ ಪರ ಸುಖಜೀತ್, ಲಲಿತ್ ಮತ್ತು ರಾಜ್ ಕುಮಾರ್ ಗೋಲು ಗಳಿಸಿದರು. ಆದರೆ, ಭಾರತದ ಈ ಗೆಲುವಿನಲ್ಲಿ ಅನುಭವಿ ಗೋಲ್‌ಕೀಪರ್ ಪಿಆರ್ ಶ್ರೀಜೇಶ್ ಅವರ ಪಾತ್ರ ಪ್ರಮುಖವಾಗಿತ್ತು. ಇದೀಗ ಭಾರತ ಹಾಕಿ ತಂಡ ಆಗಸ್ಟ್ 6 ರಂದು ಸೆಮಿಫೈನಲ್ ಪಂದ್ಯವನ್ನು ಆಡಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:26 pm, Sun, 4 August 24