ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತ ಹಾಕಿ ತಂಡವು ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ ಮುಂದಿನ ಹಂತಕ್ಕೇರಿದೆ. ಈ ಪಂದ್ಯದಲ್ಲಿ ಉತ್ತಮ ಹೊಂದಾಣಿಕೆಯ ಪ್ರದರ್ಶನ ನೀಡಿದ ಭಾರತ ತಂಡವು ಆರಂಭದಲ್ಲೇ ಐರ್ಲೆಂಡ್ ವಿರುದ್ಧ ಮೇಲುಗೈ ಸಾಧಿಸಿತ್ತು.
ಇದರ ನಡುವೆ 11ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಸ್ಟ್ರೋಕ್ ಅನ್ನು ಟೀಮ್ ಇಂಡಿಯಾ ನಾಯಕ ಹರ್ಮನ್‌ಪ್ರೀತ್ ಸಿಂಗ್ ಗೋಲಾಗಿ ಪರಿವರ್ತಿಸಿ ಮುನ್ನಡೆ ತಂದುಕೊಟ್ಟರು. ಅತ್ತ ಒತ್ತಡಕ್ಕೆ ಒಳಗಾದ ಐರ್ಲೆಂಡ್ ಆಟಗಾರರು ಸತತ ತಪ್ಪುಗಳನ್ನು ಎಸೆದರು.
ಈ ತಪ್ಪುಗಳ ಸಂಪೂರ್ಣ ಲಾಭ ಪಡೆದ ಟೀಮ್ ಇಂಡಿಯಾ ಮುನ್ಪಡೆ ಆಟಗಾರರು ಸತತ ಪ್ರತಿ ದಾಳಿ ನಡೆಸಿತು. ಇದಾಗ್ಯೂ ಐರ್ಲೆಂಡ್ ತಂಡದ ಡಿಫೆಂಡರ್ಗಳನ್ನು ವಂಚಿಸಲು ಸಾಧ್ಯವಾಗಲಿಲ್ಲ. ಆದರೆ 18ನೇ ನಿಮಿಷದಲ್ಲಿ ಗುರ್ಜಂತ್ ಸಿಂಗ್ ಅವರು ಮಿಡ್‌ಫೀಲ್ಡ್‌ನಲ್ಲಿ ಉತ್ತಮ ಪಾಸ್ ನೀಡಿದ್ದರು. ಈ ಪಾಸ್ ಮನ್‌ದೀಪ್ ಸಿಂಗ್ ಗೋಲಾಗಿಸಲು ಯತ್ನಿಸಿದ್ದರು. ಆದರೆ ಐರಿಶ್ ರಕ್ಷಣಾ ಆಟಗಾರ ಮಾಡಿದ ಫೌಲ್ನಿಂದ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಲಭಿಸಿತು.
19ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಮತ್ತೊಂದು ಗೋಲು ಬಾರಿಸಿದರು. ಇದರೊಂದಿಗೆ ಪಂದ್ಯವು 2-0 ಅಂತರದಲ್ಲಿ ಸಾಗಿತು. ಇತ್ತ 2 ಗೋಲುಗಳ ಮುನ್ನಡೆ ಪಡೆದ ಬಳಿಕ ಭಾರತ ತಂಡವು ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿತು. ಈ ಮೂಲಕ ಟೀಮ್ ಇಂಡಿಯಾ 2-0 ಅಂತರಿಂದ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು.
ಈ ಗೆಲುವಿನೊಂದಿಗೆ ಭಾರತ ತಂಡವು ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದೆ. ಇದಕ್ಕೂ ಮುನ್ನ ನ್ಯೂಝಿಲೆಂಡ್ ವಿರುದ್ಧ ಭಾರತ ತಂಡವು 3-2 ಅಂತರದಿಂದ ಗೆಲುವು ಸಾಧಿಸಿತ್ತು. ಹಾಗೆಯೇ ಅರ್ಜೆಂಟೀನಾ ವಿರುದ್ಧ 1-1 ಅಂತರದಿಂದ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಐರ್ಲೆಂಡ್ ವಿರುದ್ಧ 2-0 ಅಂತರದಿಂದ ಗೆದ್ದು ಮುಂದಿನ ಹಂತಕ್ಕೇರಿದೆ.
ಇದನ್ನೂ ಓದಿ: Suryakumar Yadav: ಸೂರ್ಯಕುಮಾರ್ ಯಾದವ್ ಅಬ್ಬರಕ್ಕೆ ಮ್ಯಾಕ್ಸ್ವೆಲ್ ವಿಶ್ವ ದಾಖಲೆ ಉಡೀಸ್
ಇನ್ನು ಗುರುವಾರ ನಡೆಯಲಿರುವ ಲೀಗ್ ಹಂತದ ಪಂದ್ಯದಲ್ಲಿ ಭಾರತ ತಂಡವು ಬೆಲ್ಜಿಯಂ ತಂಡವನ್ನು ಎದುರಿಸಲಿದೆ. ಮುಂದಿನ ಹಂತಕ್ಕೇರಿದರೂ ಈ ಪಂದ್ಯವು ಭಾರತದ ಪಾಲಿಗೆ ತುಂಬಾ ಮಹತ್ವದ್ದು. ಏಕೆಂದರೆ ವಿಶ್ವ ಹಾಕಿ ಶ್ರೇಯಾಂಕದಲ್ಲಿ ಬೆಲ್ಜಿಯಂ 4ನೇ ಸ್ಥಾನದಲ್ಲಿರುವ ತಂಡ. ಹೀಗಾಗಿ ಬಲಿಷ್ಠ ತಂಡವನ್ನು ಬಗ್ಗು ಬಡಿದು ಕ್ವಾರ್ಟರ್ ಫೈನಲ್ಗೂ ಮುನ್ನ ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳುವ ಅವಕಾಶ ಟೀಮ್ ಇಂಡಿಯಾ ಮುಂದಿದೆ. ಹೀಗಾಗಿ ಈ ಪಂದ್ಯದಲ್ಲೂ ಭಾರತ ತಂಡದ ಕಡೆಯಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು.
Published On - 8:56 am, Wed, 31 July 24