Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಿಂದ ಹೊರಬಿದ್ದ ನಡಾಲ್-ಅಲ್ಕರಾಝ್

|

Updated on: Aug 01, 2024 | 8:27 AM

Paris Olympics 2024: ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್​ನ ಟೆನ್ನಿಸ್​ನಲ್ಲಿ ಸ್ಪೇನ್ ಎರಡು ಚಿನ್ನವನ್ನು ಬಹುತೇಕ ಖಚಿತಪಡಿಸಿಕೊಂಡಿತ್ತು. ಇದಕ್ಕೆ ಒಂದು ಕಾರಣ ಟೆನ್ನಿಸ್ ಅಂಗಳದ ದಿಗ್ಗಜ ರಾಫೆಲ್ ನಡಾಲ್ ಯುವ ಸೆನ್ಸೇಷನ್ ಕಾರ್ಲೋಸ್ ಅಲ್ಕರಾಝ್ ಜೊತೆ ಡಬಲ್ಸ್​ನಲ್ಲಿ ಕಣಕ್ಕಿಳಿದದ್ದು. ಆದರೆ ಈ ಜೋಡಿಯು ಕ್ವಾರ್ಟರ್ ಫೈನಲ್​ನಲ್ಲೇ ತಮ್ಮ ಅಭಿಯಾನ ಅಂತ್ಯಗೊಳಿಸಿದ್ದಾರೆ. ಇದಾಗ್ಯೂ ಅಲ್ಕರಾಝ್ ಸಿಂಗಲ್ಸ್ ವಿಭಾಗದಲ್ಲಿ ತಮ್ಮ ಹೋರಾಟ ಮುಂದುವರೆಸಿದ್ದಾರೆ.

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಿಂದ ಹೊರಬಿದ್ದ ನಡಾಲ್-ಅಲ್ಕರಾಝ್
Rafael Nadal and Carlos Alcaraz
Follow us on

ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಡಬಲ್ಸ್ ವಿಭಾಗದಲ್ಲಿ ಕಾರ್ಲೋಸ್ ಅಲ್ಕರಾಝ್ ಮತ್ತು ರಾಫೆಲ್ ನಡಾಲ್ ಜೋಡಿ ಮುಗ್ಗರಿಸಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೆರಿಕನ್ ಜೋಡಿ ಆಸ್ಟಿನ್ ಕ್ರಾಜಿಸೆಕ್ ಮತ್ತು ರಾಜೀವ್ ರಾಮ್ ವಿರುದ್ಧ  ನಡಾಲ್-ಅಲ್ಕರಾಝ್ ಸೋಲನುಭವಿಸಿದ್ದಾರೆ. ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಸ್ಪೇನ್ ಜೋಡಿಯು ಜೊತೆಯಾಗಿ ಕಣಕ್ಕಿಳಿದಿದ್ದರಿಂದ ಡಬಲ್ಸ್​ನಲ್ಲಿ ಪದಕ ನಿರೀಕ್ಷಿಸಲಾಗಿತ್ತು. ಆದರೆ ಕ್ವಾರ್ಟರ್ ಫೈನಲ್​ನಲ್ಲಿ ಆಸ್ಟಿನ್ ಮತ್ತು ರಾಜೀವ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಅಲ್ಕರಾಝ್-ನಡಾಲ್​ ರನ್ನು ಹೊರದಬ್ಬುವಲ್ಲಿ ಯಶಸ್ವಿಯಾಗಿದ್ದಾರೆ.

ರೋಲ್ಯಾಂಡ್ ಗ್ಯಾರೋನ್​ನ ಕ್ಲೇ ಕೋರ್ಟ್​ನಲ್ಲಿ ನಡೆದ 3 ಸುತ್ತಿನ ಈ ಪಂದ್ಯದಲ್ಲಿ ಅಭಿಮಾನಿಗಳ ಸಂಪೂರ್ಣ ಬೆಂಬಲ ರಾಫೆಲ್ ನಡಾಲ್ ಹಾಗೂ ಕಾರ್ಲೋಸ್ ಅಲ್ಕರಾಝ್​ಗೆ ಲಭಿಸಿತ್ತು. ಆದರೆ ಆರಂಭದಲ್ಲೇ ಪರಾಕ್ರಮ ಮೆರೆದ ಆಸ್ಟಿನ್ ಕ್ರಾಜಿಸೆಕ್ ಮತ್ತು ರಾಜೀವ್ ರಾಮ್ 2-6 ಅಂತರದಿಂದ ಮೊದಲ ಸೆಟ್​ ಗೆಲ್ಲುವಲ್ಲಿ ಯಶಸ್ವಿಯಾದರು.

ಇದಾಗ್ಯೂ ನಡಾಲ್ – ಅಲ್ಕರಾಝ್ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ದ್ವಿತೀಯ ಸುತ್ತಿನಲ್ಲೂ ನಿರಾಸೆ ಕಾದಿತ್ತು. ಅದ್ಭುತ ಫುಟ್​ವರ್ಕ್ ಪ್ರದರ್ಶಿಸಿದ ಆಸ್ಟ್ರಿಕ್ ಕ್ರಾಜಿಸೆಕ್ ಫೋರ್​ಹ್ಯಾಂಡ್, ಬ್ಯಾಂಕ್​ಹ್ಯಾಡ್ ಶಾಟ್​ಗಳ ಮೂಲಕ ಕಮಾಲ್ ಮಾಡಿದರು. ಪರಿಣಾಮ ಸ್ಪೇನ್ ಜೋಡಿಯು 4 ಅಂಕಗಳನ್ನು ಕಲೆಹಾಕುವಷ್ಟರಲ್ಲಿ ಆಸ್ಟಿನ್ ಕ್ರಾಜಿಸೆಕ್ ಮತ್ತು ರಾಜೀವ್ ರಾಮ್ 6 ಅಂಕಗಳನ್ನು ಪೂರ್ಣಗೊಳಿಸಿದರು.

ಈ ಮೂಲಕ ಕ್ಲೇ ಕೋರ್ಟ್​ನ ಕಿಂಗ್ ಎಂದು ಕರೆಸಿಕೊಳ್ಳುವ ರಾಫೆಲ್ ನಡಾಲ್ ಹಾಗೂ ಕಾರ್ಲೋಸ್ ಅಲ್ಕರಾಝ್ ಅವರನ್ನು 6-2, 6-4 ನೇರ ಸೆಟ್‌ಗಳಿಂದ ಸೋಲಿಸಿದರು. ಈ ಗೆಲುವಿನೊಂದಿಗೆ ಯುಎಸ್​ಎನ ಆಸ್ಟಿನ್ ಕ್ರಾಜಿಸೆಕ್ ಮತ್ತು ರಾಜೀವ್ ರಾಮ್ ಜೋಡಿಯು ಪುರುಷರ ಡಬಲ್ಸ್ ವಿಭಾಗದಲ್ಲಿ ಸೆಮಿ ಫೈನಲ್​ ಹಂತಕ್ಕೇರಿದ್ದಾರೆ.

ಸಿಂಗಲ್ಸ್​ನಲ್ಲೂ ಹೊರಬಿದ್ದ ನಡಾಲ್:

ಪುರುಷರ ಸಿಂಗಲ್ಸ್​ ವಿಭಾಗದಿಂದಲೂ ರಾಫೆಲ್ ನಡಾಲ್ ಹೊರಬಿದ್ದಿದ್ದಾರೆ. ನೊವಾಕ್ ಜೊಕೊವಿಚ್ ವಿರುದ್ಧದ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿದ ನಡಾಲ್ 6-1, 6-4 ಅಂತರದಿಂದ ಸೋಲುವ ಮೂಲಕ ಪ್ರಿ ಕ್ವಾರ್ಟರ್ ಫೈನಲ್​ಗೂ ಮುನ್ನ ಒಲಿಂಪಿಕ್ಸ್​ ಅಭಿಯಾನ ಅಂತ್ಯಗೊಳಿಸಿದ್ದರು.

ಇದನ್ನೂ ಓದಿ: Manu Bhaker: ಒಲಿಂಪಿಕ್ಸ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಮನು ಭಾಕರ್

ಇದಾಗ್ಯೂ ಕಾರ್ಲೋಸ್ ಅಲ್ಕರಾಝ್ ಪುರುಷರ ಸಿಂಗಲ್ಸ್​ನಲ್ಲಿ ಕ್ವಾರ್ಟರ್ ಫೈನಲ್​ಗೆ ಪ್ರವೇಶಿಸಿದ್ದು, ಆಗಸ್ಟ್ 1 ರಂದು ನಡೆಯಲಿರುವ ಮೊದಲ ಕ್ವಾರ್ಟರ್ ಫೈನಲ್​ನಲ್ಲಿ ಅಮೆರಿಕದ ಟಾಮಿ ಪೌಲ್ ಅವರನ್ನು ಎದುರಿಸಲಿದ್ದಾರೆ.