Paralympics 2024: ಭಾರತಕ್ಕೆ 4ನೇ ಪದಕ; 10 ಮೀ. ಏರ್ ಪಿಸ್ತೂಲ್ ಶೂಟಿಂಗ್​ನಲ್ಲಿ ಬೆಳ್ಳಿ ಗೆದ್ದ ಮನೀಶ್ ನರ್ವಾಲ್

Paralympics 2024: 2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತ ಒಂದೇ ದಿನದಲ್ಲಿ ತನ್ನ ನಾಲ್ಕನೇ ಪದಕವನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ. ನಾಲ್ಕನೇ ಪದಕದ ರೂಪದಲ್ಲಿ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮನೀಶ್ ನರ್ವಾಲ್ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು. ಒಟ್ಟು 24 ಸುತ್ತುಗಳಲ್ಲಿ 234.9 ಅಂಕಗಳನ್ನು ಕಲೆಹಾಕಿದ ಮನೀಶ್, ಭಾರತಕ್ಕೆ ನಾಲ್ಕನೇ ಪದಕ ಗೆದ್ದುಕೊಟ್ಟಿದ್ದಾರೆ.

Paralympics 2024: ಭಾರತಕ್ಕೆ 4ನೇ ಪದಕ; 10 ಮೀ. ಏರ್ ಪಿಸ್ತೂಲ್ ಶೂಟಿಂಗ್​ನಲ್ಲಿ ಬೆಳ್ಳಿ ಗೆದ್ದ ಮನೀಶ್ ನರ್ವಾಲ್
ಮನೀಶ್ ನರ್ವಾಲ್
Follow us
|

Updated on:Aug 30, 2024 | 6:24 PM

2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತ ಒಂದೇ ದಿನದಲ್ಲಿ ತನ್ನ ನಾಲ್ಕನೇ ಪದಕವನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ. ನಾಲ್ಕನೇ ಪದಕದ ರೂಪದಲ್ಲಿ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮನೀಶ್ ನರ್ವಾಲ್ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು. ಒಟ್ಟು 24 ಸುತ್ತುಗಳಲ್ಲಿ 234.9 ಅಂಕಗಳನ್ನು ಕಲೆಹಾಕಿದ ಮನೀಶ್, ಭಾರತಕ್ಕೆ ನಾಲ್ಕನೇ ಪದಕ ಗೆದ್ದುಕೊಟ್ಟಿದ್ದಾರೆ. ಕಳೆದ ಪ್ಯಾರಾಲಿಂಪಿಕ್ಸ್‌ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದ ಮನೀಶ್ ನರ್ವಾಲ್ ಒಟ್ಟು 234.9 ಅಂಕ ಗಳಿಸುವ ಮೂಲಕ ಚಿನ್ನದ ಪದಕ ಗೆದ್ದಿದ್ದರು. ಆದರೆ ಈ ಬಾರಿ ಪದಕದ ಬಣ್ಣ ಬದಲಾಗಿದ್ದು, ಮನೀಶ್ ಕೊರಳಿಗೆ ಚಿನ್ನದ ಬದಲು ಬೆಳ್ಳಿ ಪದಕ ಬಿದ್ದಿದೆ. ಇದರೊಂದಿಗೆ ಮನೀಶ್ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಇತಿಹಾಸದಲ್ಲಿ ಬಹು ಪದಕಗಳನ್ನು ಗೆದ್ದ ಏಕೈಕ ಆರನೇ ಭಾರತೀಯ ಅಥ್ಲೀಟ್ ಎನಿಸಿಕೊಂಡರು.

ಭಾರತಕ್ಕೆ 4ನೇ ಪದಕ

ಇದು ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಸಿಕ್ಕಿರುವ ನಾಲ್ಕನೇ ಪದಕವಾಗಿದ್ದು, ಶೂಟಿಂಗ್ ಒಂದರಲ್ಲೇ ಲಭಿಸಿದ ಮೂರನೇ ಪದಕವಾಗಿದೆ. ಮನೀಶ್​ಗೂ ಮುನ್ನ ಸ್ಟಾರ್ ಶೂಟರ್ ಅವನಿ ಲೇಖರಾ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರೆ, ಇನ್ನು ಇದೇ ಈವೆಂಟ್​ನಲ್ಲಿ ಭಾರತದ ಮತ್ತೊರ್ವ ಶೂಟರ್ ಮೋನಾ ಅಗರ್ವಾಲ್ ಕಂಚಿನ ಪದಕವನ್ನು ಗೆದ್ದು 17 ನೇ ಬೇಸಿಗೆ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಪದಕ ಖಾತೆಯನ್ನು ತೆರೆದಿದ್ದರು. ಶೂಟಿಂಗ್ ಹೊರತುಪಡಿಸಿ ಮಹಿಳೆಯರ 100 ಮೀಟರ್ ಟಿ-35 ಓಟದ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಭಾರತದ ಪ್ರೀತಿ ಪಾಲ್ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

ಮನೀಶ್​ಗೆ ಕಳಪೆ ಆರಂಭ

ಉಳಿದಂತೆ ದಕ್ಷಿಣ ಕೊರಿಯಾದ ಜಿಯೊಂಗ್ಡು ಜೋ 237.4 ಅಂಕಗಳೊಂದಿಗೆ ಅಗ್ರಸ್ಥಾನ ಪಡೆಯುವ ಮೂಲಕ ಚಿನ್ನದ ಪದಕ ಗೆದ್ದರೆ, ಚೀನಾದ ಚಾವೊ ಯಾಂಗ್ ಕಂಚಿನ ಪದಕ ಗೆದ್ದು ಮೂರನೇ ಸ್ಥಾನ ಪಡೆದರು. ಮನೀಷ್ ತನ್ನ ಮೊದಲ ಪ್ರಯತ್ನದಲ್ಲಿ 8.8 ಸ್ಕೋರ್‌ ಕಲೆಹಾಕಿ ಮೊದಲ ಹಂತದ ಆರಂಭದಲ್ಲಿ ಕಳಪೆ ಆರಂಭ ಪಡೆದುಕೊಂಡರು. ಆದರೆ ಆ ಬಳಿಕ ಪುನರಾಗಮನ ಮಾಡಿದ ಮನೀಶ್, ಚಿನ್ನದ ಪದಕ್ಕಾಗಿ ನಡೆದ ಅಂತಿಮ ಕದನದಲ್ಲಿ 8.9 ಅಂಕ ಸಂಪಾದಿಸಿದರೆ, ಜಿಯೋಂಗ್ಡು 10.8 ಅಂಕ ಸಂಪಾದಿಸಿ ಮುನ್ನಡೆ ಸಾಧಿಸಿದರು. ಕೊನೆಯ ಪ್ರಯತ್ನದಲ್ಲಿ, ಮನೀಷ್ 9.9 ಅಂಕ ಕಲೆಹಾಕಿದರೆ, ದಕ್ಷಿಣ ಕೊರಿಯಾದ ಜಿಯೋಂಗ್ಡು 8.8 ಗಳಿಸಿದರು. ಆದಾಗ್ಯೂ ಮನೀಶ್ ತಮ್ಮ ಮೊದಲ ಪ್ರಯತ್ನದಲ್ಲಿ ಕಡಿಮೆ ಅಂಕ ಸಂಪಾಧಿಸಿದರ ಫಲವಾಗಿ ಎರಡನೇ ಸ್ಥಾನ ಪಡೆಯಬೇಕಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:09 pm, Fri, 30 August 24