Paralympics 2024: ಭಾರತೀಯರ ಐತಿಹಾಸಿಕ ಸಾಧನೆ: ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ

|

Updated on: Sep 04, 2024 | 10:10 AM

Paris Paralympics 2024: ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತ ಈವರೆಗೆ 20 ಪದಕಗಳನ್ನು ಗೆದ್ದಿದೆ. ಇದರಲ್ಲಿ 3 ಚಿನ್ನ, 7 ಬೆಳ್ಳಿ ಹಾಗೂ 10 ಕಂಚಿನ ಪದಕಗಳು ಒಳಗೊಂಡಿವೆ. ಇದಕ್ಕೂ ಮುನ್ನ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತೀಯರು 19 ಪದಕಗಳನ್ನು ಗೆದ್ದಿದ್ದು ಶ್ರೇಷ್ಠ ಸಾಧನೆಯಾಗಿತ್ತು. ಆದರೆ ಈ ಬಾರಿ 20 ಪದಕಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.

Paralympics 2024: ಭಾರತೀಯರ ಐತಿಹಾಸಿಕ ಸಾಧನೆ: ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ
PM Modi
Follow us on

ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ ಮುಂದುವರೆದಿದೆ. 6 ದಿನಗಳಲ್ಲಿ ಭಾರತದ ಕ್ರೀಡಾಳು ಒಟ್ಟು 20 ಪದಕಗಳನ್ನು ಗೆದ್ದಿದ್ದಾರೆ. ಇದು ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತೀಯರು ಗೆದ್ದ ಗರಿಷ್ಠ ಪದಕ ಎಂಬುದು ವಿಶೇಷ. ಈ ಐತಿಹಾಸಿಕ ಸಾಧನೆ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಕ್ರೀಡಾಪಟುಗಳಿಗೆ ಕರೆ ಅಭಿನಂದನೆ ಸಲ್ಲಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಬ್ರೂನೈ ಪ್ರವಾಸದಲ್ಲಿದ್ದು, ಇದರ ನಡುವೆ ಬಿಡುವು ಮಾಡಿಕೊಂಡು ಭಾರತೀಯ ಕ್ರೀಡಾಪಟುಗಳನ್ನು ಕರೆ ಮಾಡಿ ಹುರಿದುಂಬಿಸಿರುವುದು ವಿಶೇಷ. ಅಲ್ಲದೆ ಈ ವೇಳೆ ಭಾರತದ ಪ್ಯಾರಾಲಿಂಪಿಕ್ ಆಟಗಾರರಾದ ಯೋಗೇಶ್ ಕಥುನಿಯಾ, ಸುಮಿತ್ ಅಂತಿಲ್, ಶೀತಲ್ ದೇವಿ ಮತ್ತು ರಾಕೇಶ್ ಕುಮಾರ್ ಅವರೊಂದಿಗೆ ಮಾತನಾಡಿದರು.

ನಿಮ್ಮ ಬಗ್ಗೆ ಹೆಮ್ಮೆಯಿದೆ:

ಕ್ರೀಡಾಪಟುಗಳಿಗೆ ಕರೆ ಮಾಡಿ ಮಾತನಾಡಿದ ಪ್ರಧಾನಿ, ನಿಮ್ಮ ಬಗ್ಗೆ ಇಡೀ ದೇಶವೇ ಹೆಮ್ಮೆಪಡುತ್ತದೆ ಎಂದು ಶ್ಲಾಘಿಸಿದರು. ಇದೇ ವೇಳೆ ಡಿಸ್ಕಸ್ ಥ್ರೋನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟಿರುವ ಯೋಗೇಶ್ ಕಥುನಿಯಾ ಅವರೊಂದಿಗೆ ಕುಶಲೋಪರಿ ನಡೆಸಿದ ಪ್ರಧಾನಿ, ಅವರ ತಾಯಿಯ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದರು.

ಯೋಗೇಶ್ ಕಥುನಿಯಾ ಅವರ ತಾಯಿಯು ಗರ್ಭಕಂಠದ ಸಮಸ್ಯೆಯಿಂದ ಬಳಲುತ್ತಿದ್ದು, ಇದಾಗ್ಯೂ ಮಗ ಪ್ಯಾರಾಲಿಂಪಿಕ್ಸ್​ನಲ್ಲಿ ಭಾಗವಹಿಸಿ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಇಂತಹ ಮಗನನ್ನು ಹೆತ್ತ ತಾಯಿಯನ್ನು ಪ್ರಧಾನಿ ಮೋದಿ ಶ್ಲಾಘಿಸಿದರು.

ಇದೇ ವೇಳೆ ವಿದೇಶಿ ಪ್ರವಾಸದಲ್ಲಿದ್ದರೂ ಭಾರತೀಯ ಕ್ರೀಡಾಪಟುಗಳ ಸಂಪೂರ್ಣ ಮಾಹಿತಿ ಪಡೆಯುತ್ತಿರುವ ಪ್ರಧಾನಿಯ ನಡೆಗೆ ಯೋಗೇಶ್ ಧನ್ಯವಾದಗಳನ್ನು ಅರ್ಪಿಸಿದರು. ಈ ಶ್ಲಾಘನೆಗೆ ಪ್ರತಿಕ್ರಿಯಿಸಿದ ಪ್ರಧಾನಿ, ನಾನು ಜಗತ್ತಿನ ಎಲ್ಲೇ ಇರಲಿ, ನಾನು ಭಾರತದಲ್ಲಿ ವಾಸಿಸುತ್ತಿರುತ್ತೇನೆ ಎಂದರು.

ಕ್ರೀಡಾಳುಗಳಿಗೆ ಹೊಸ ಹುಮ್ಮಸ್ಸು:

ಪ್ರಧಾನಿ ವಿದೇಶ ಪ್ರವಾಸದಲ್ಲಿದ್ದರೂ ಪ್ಯಾರಿಸ್ ಪ್ಯಾರಾಲಿಂಪಿಕ್ ಆಟಗಾರರನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿದ್ದಾರೆ. ಸೋಮವಾರ ಅವರೂ ಅವನಿ ಲೇಖರ ಜೊತೆ ಮಾತನಾಡಿದ್ದರು. ಇದಕ್ಕೂ ಮುನ್ನ ಪ್ರಧಾನಿ ಎಲ್ಲಾ ಪ್ಯಾರಾಲಿಂಪಿಕ್ ಆಟಗಾರರ ಜೊತೆ ಮಾತುಕತೆ ನಡೆಸಿದಾಗ, ಅವನಿ ಲೇಖರಾ ಸ್ಪರ್ಧೆಯಲ್ಲಿ ಭಾಗವಹಿಸಲು ಹೋಗಿದ್ದರು. ಇದರಿಂದಾಗಿ ಆಕೆಗೆ ಆ ವೇಳೆ ಪ್ರಧಾನಿ ಜತೆ ಮಾತನಾಡಲು ಸಾಧ್ಯವಾಗಿರಲಿಲ್ಲ. ಈ ಕಾರಣಕ್ಕಾಗಿ ಪ್ರಧಾನಿ ಸೋಮವಾರ ದೂರವಾಣಿ ಮೂಲಕ ಅಭಿನಂದನೆ ಸಲ್ಲಿಸಿದ್ದರು.

ಇದೀಗ ಮತ್ತೊಮ್ಮೆ ಇತರೆ ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿ ಕರೆ ಮಾಡಿ ಮಾತನಾಡಿದ್ದಾರೆ. ಅಲ್ಲದೆ ಪ್ರಧಾನಿಯ ಪ್ರೋತ್ಸಾಹಕರ ಮಾತುಗಳಿಂದ ಪ್ರೇರಿತರಾಗಿರುವ ಭಾರತೀಯ ಕ್ರೀಡಾಪಟುಗಳು ಇದೀಗ ಹೊಸ ಹುಮ್ಮಸ್ಸಿನಲ್ಲಿದ್ದಾರೆ.

ಐತಿಹಾಸಿಕ ಸಾಧನೆ:

ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ ಮೂಲಕ ಭಾರತೀಯ ಕ್ರೀಡಾಪಟುಗಳು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅದು ಸಹ 20 ಪದಕಗಳನ್ನು ಗೆಲ್ಲುವ ಮೂಲಕ ಎಂಬುದು ವಿಶೇಷ. ಅಂದರೆ ಪ್ಯಾರಾಂಪಿಕ್ಸ್​ನಲ್ಲಿ ಇದೇ ಮೊದಲ ಬಾರಿಗೆ ಭಾರತೀಯರು 20 ಪದಕಗಳನ್ನು ಗೆದ್ದಿದ್ದಾರೆ.

ಇದನ್ನೂ ಓದಿ: 2 ವರ್ಷ ಬೆಂಚ್ ಕಾಯಿಸಿದ RCBಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ ಮನೋಜ್ ಭಾಂಡಗೆ

2020 ರಲ್ಲಿ ನಡೆದ ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ 5 ಚಿನ್ನದ ಪದಕ, 8 ಬೆಳ್ಳಿ ಪದಕ ಮತ್ತು 6 ಕಂಚಿನ ಪದಕಗಳೊಂದಿಗೆ ಭಾರತೀಯರು ಒಟ್ಟು 19 ಪದಕಗಳನ್ನು ಗೆದ್ದಿದ್ದರು. ಆದರೆ ಈ ಬಾರಿ 20 ಪದಕಗಳನ್ನು ಗೆಲ್ಲುವಲ್ಲಿ ಭಾರತೀಯ ಕ್ರೀಡಾಪಟುಗಳು ಯಶಸ್ವಿಯಾಗಿದ್ದಾರೆ. ಅಲ್ಲದೆ ಈ ಬಾರಿ ಪದಕಗಳ ಸಂಖ್ಯೆ 25 ದಾಟುವ ನಿರೀಕ್ಷೆಯಿದೆ.