ಫೆಬ್ರವರಿ 6 ರಂದು ಬೆಂಗಳೂರಿನಲ್ಲಿ ನಡೆದ ಇಂಡಿಯಾ ಎನರ್ಜಿ ವೀಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಉಡುಗೊರೆಯನ್ನು ಸ್ವೀಕರಿಸಿದರು. ಪ್ರಧಾನಿ ಮೋದಿಯವರ ಭಾಷಣ ಮುಗಿದ ನಂತರ, ಅರ್ಜೆಂಟೀನಾದ ಸರ್ಕಾರಿ ಸ್ವಾಮ್ಯದ ಕಂಪನಿ YPF ನ ಅಧ್ಯಕ್ಷ ಪಾಬ್ಲೋ ಗೊನ್ಜಾಲೆಜ್ ಅವರು ಖ್ಯಾತ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ (lionel messi) ಅವರ ಜೆರ್ಸಿಯನ್ನು ಭಾರತೀಯ ಪ್ರಧಾನಿಗೆ ಉಡುಗೊರೆಯಾಗಿ ನೀಡಿದರು. ಕಳೆದ ವರ್ಷ ನಡೆದ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಅರ್ಜೆಂಟೀನಾ ತಂಡವನ್ನು ಮುನ್ನಡೆಸಿದ್ದ ಮೆಸ್ಸಿ ತಮ್ಮ ದೇಶಕ್ಕೆ ವಿಶ್ವಕಪ್ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಮೆಸ್ಸಿಯ ವಿಶೇಷ ಜೆರ್ಸಿಯನ್ನು ಪ್ರಧಾನಿ ಮೋದಿ ಅವರಿಗೆ ವೈಪಿಎಫ್ ಕಂಪೆನಿಯ ಅಧ್ಯಕ್ಷರು ಉಡುಗೊರೆಯಾಗಿ ನೀಡಿರುವುದು ವಿಶೇಷ.
ಇನ್ನು ಇಂಡಿಯಾ ಎನರ್ಜಿ ವೀಕ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಭಾರತವು ಪ್ರಸ್ತುತ ಅತ್ಯಂತ ಸೂಕ್ತವಾದ ಸ್ಥಳವಾಗಿದೆ. ಮುಂದಿನ ದಶಕದಲ್ಲಿ ದೇಶವು ಶಕ್ತಿಯ ಬೇಡಿಕೆಯಲ್ಲಿ ವಿಶ್ವದ ಅತ್ಯಂತ ವೇಗದ ಬೆಳವಣಿಗೆಯನ್ನು ವೀಕ್ಷಿಸುವ ನಿರೀಕ್ಷೆಯಿದೆ ಎಂದು ಪ್ರಧಾನಿ ಹೇಳಿದರು.
ಭಾರತದ ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ಅವಕಾಶಗಳನ್ನು ಅನ್ವೇಷಿಸಲು ನಾನು ನಿಮ್ಮನ್ನು ವಿನಂತಿಸುತ್ತೇನೆ. ಭಾರತವು ಇಂದು ಹೂಡಿಕೆಗೆ ಅತ್ಯಂತ ಸೂಕ್ತವಾದ ಸ್ಥಳವಾಗಿದೆ. ಜಾಗತಿಕ ಬಿಕ್ಕಟ್ಟಿನ ಹೊರತಾಗಿಯೂ, ಭಾರತವು ತನ್ನ ಆಂತರಿಕ ಸ್ಥಿತಿಸ್ಥಾಪಕತ್ವದಿಂದಾಗಿ 2022 ರಲ್ಲಿ ಜಗತ್ತಿಗೆ ಭರವಸೆಯ ತಾಣವಾಗಿ ಉಳಿದಿದೆ ಎಂದರು.
ಹಳ್ಳಿಗಳಲ್ಲಿ ಇಂಟರ್‌ನೆಟ್ ಸೌಲಭ್ಯ ಒದಗಿಸಲು ಆರು ಲಕ್ಷ ಕಿಲೋಮೀಟರ್‌ಗೂ ಹೆಚ್ಚು ಆಪ್ಟಿಕಲ್ ಫೈಬರ್ ನೆಟ್‌ವರ್ಕ್ ಹಾಕಲಾಗಿದೆ. ಭಾರತದಲ್ಲಿ ಬ್ರಾಡ್‌ಬ್ಯಾಂಡ್ ಬಳಕೆದಾರರ ಸಂಖ್ಯೆ 9 ವರ್ಷಗಳ ಹಿಂದೆ ಹೋಲಿಸಿದರೆ 13 ಪಟ್ಟು ಹೆಚ್ಚಾಗಿದೆ. ಅದೇ ಅವಧಿಯಲ್ಲಿ ಇಂಟರ್ನೆಟ್ ಸಂಪರ್ಕಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ ಎಂದು ಪ್ರಧಾನಿ ಹೇಳಿದರು.
Pablo Gonzalez, President of YPF from Argentina, gifted a Lionel Messi football jersey to PM Modi on the sidelines of the India Energy Week in Bengaluru pic.twitter.com/45SegRxfYR
— ANI (@ANI) February 6, 2023
ಏನಿದು YPF?
YPF ಎಂಬುದು ಅರ್ಜೆಂಟೀನಾದ ಸರ್ಕಾರಿ ಸ್ವಾಮ್ಯದ ಕಂಪೆನಿಯಾಗಿದೆ. ಇದು ಇಂಧನ ಕ್ಷೇತ್ರದಲ್ಲಿ, ಅಂದರೆ ತೈಲ ಮತ್ತು ಅನಿಲ ಪರಿಶೋಧನೆ ಮತ್ತು ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ. ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆ, ಸಂಸ್ಕರಣೆ ಮುಂತಾದ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದೆ. ಇದೀಗ ಭಾರತದ ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿದ್ದು, ಮುಂದಿನ ದಿನಗಳಲ್ಲಿ ವೈಪಿಎಫ್ ಕಂಪೆನಿಯು ದೇಶದ ಇಂಧನ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡುವ ನಿರೀಕ್ಷಿಸಿದೆ.
Published On - 7:38 pm, Mon, 6 February 23