ಮ್ಯಾಥ್ಸ್​ ಒಲಂಪಿಯಾಡ್​ನಲ್ಲಿ ಪದಕ ಗೆದ್ದ ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಅಭಿನಂದನೆ

|

Updated on: Jul 28, 2024 | 2:01 PM

ಇಂಟರ್ನ್ಯಾಷನಲ್ ಮ್ಯಾಥಮೆಟಿಕಲ್ ಒಲಿಂಪಿಯಾಡ್ (IMO) ಅಥವಾ ಮ್ಯಾಥ್ಸ್ ಒಲಿಂಪಿಯಾಡ್ ಎಂಬುದು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ವಿಶ್ವ ಚಾಂಪಿಯನ್‌ಶಿಪ್ ಗಣಿತ ಸ್ಪರ್ಧೆಯಾಗಿದೆ. 1959 ರಲ್ಲಿ ರೊಮೇನಿಯಾದಲ್ಲಿ ಶುರುವಾದ ಈ ಸ್ಪರ್ಧೆಯನ್ನು ವಾರ್ಷಿಕವಾಗಿ ಬೇರೆ ದೇಶದಲ್ಲಿ ನಡೆಸಲಾಗುತ್ತದೆ. ಅದರಂತೆ ಈ ಬಾರಿ ಯುಕೆಯಲ್ಲಿ ನಡೆದ ಸ್ಪರ್ಧೆಯಲ್ಲಿ 108 ದೇಶಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮ್ಯಾಥ್ಸ್​ ಒಲಂಪಿಯಾಡ್​ನಲ್ಲಿ ಪದಕ ಗೆದ್ದ ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಅಭಿನಂದನೆ
PM Modi - IMO Winners
Follow us on

ಮ್ಯಾಥ್ಸ್​ ಒಲಂಪಿಯಾಡ್​ (IMO) ನಲ್ಲಿ ಪದಕ ವಿಜೇತರಾದ ಭಾರತೀಯ ವಿದ್ಯಾರ್ಥಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಯುನೈಟೆಡ್ ಕಿಂಗ್​ಡಮ್​ನಲ್ಲಿ ನಡೆದ ಅಂತರರಾಷ್ಟ್ರೀಯ ಗಣಿತ ಒಲಂಪಿಯಾಡ್ ಭಾರತದ ವಿದ್ಯಾರ್ಥಿಗಳು ನಾಲ್ಕು ಚಿನ್ನದ ಪದಕಗಳು, ಒಂದು ಬೆಳ್ಳಿ ಪದಕ ಮತ್ತು ಒಂದು ಗೌರವಾನ್ವಿತ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಈ ಮೂಲಕ ಮ್ಯಾಥ್ಯ್ ಒಲಿಂಪಿಯಾಡ್​​ನಲ್ಲಿ 4ನೇ ಶ್ರೇಯಾಂಕ ಅಲಂಕರಿಸಿ ಭಾರತದ ಕೀರ್ತಿ ಪಾತಾಕೆಯನ್ನು ಹಾರಿಸಿದ ವಿದ್ಯಾರ್ಥಿಗಳಿಗೆ ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ಪ್ರಧಾನಿ ಅಭಿನಂದನೆ ಸಲ್ಲಿಸಿದ್ದಾರೆ.

ಮನ್ ​ಕಿ ಬಾತ್​ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಇಡೀ ವಿಶ್ವವು ಈಗ ಪ್ಯಾರಿಸ್ ಒಲಿಂಪಿಕ್ಸ್​ನತ್ತ ಮುಖ ಮಾಡಿದೆ. ಭಾರತೀಯ ಕ್ರೀಡಾಪಟುಗಳು ಕೂಡ ನಮ್ಮ ತ್ರಿವರ್ಣ ಧ್ವಜ ಹಾರಿಸುವ ವಿಶ್ವಾಸದಲ್ಲಿದ್ದಾರೆ. ಅವರನ್ನು ನಾವು ಚಿಯರ್ ಫರ್ ಭಾರತ್ ಮೂಲಕ ಹುರಿದುಂಬಿಸೋಣ. ಅಂದಹಾಗೆ ಈ ಒಲಿಂಪಿಕ್ಸ್​ಗೂ ಕೆಲ ದಿನಗಳ ಹಿಂದೆ ಗಣಿತದಲ್ಲೂ ಒಂದು ಒಲಿಂಪಿಕ್ಸ್​ ನಡೆದಿತ್ತು. ಇಂಟರ್ನ್ಯಾಷನಲ್ ಮ್ಯಾಥಮೆಟಿಕಲ್ ಒಲಿಂಪಿಯಾಡ್. ಇದರಲ್ಲಿ ನಮ್ಮ ವಿದ್ಯಾರ್ಥಿಗಳು ಸರ್ವಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಇವರು 4 ಚಿನ್ನ ಮತ್ತು ಒಂದು ಬೆಳ್ಳಿ ಪದಕ ಗೆದ್ದಿದ್ದಾರೆ.

ಅಂತರರಾಷ್ಟ್ರೀಯ ಗಣಿತ ಒಲಿಂಪಿಯಾಡ್‌ನಲ್ಲಿ 100 ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಇದರಲ್ಲಿ ನಮ್ಮ ತಂಡವು ಒಟ್ಟಾರೆಯಾಗಿ ಅಗ್ರ ಐದರಲ್ಲಿ ಸ್ಥಾನ ಪಡೆದಿದೆ. ದೇಶಕ್ಕೆ ಕೀರ್ತಿ ತಂದ ವಿದ್ಯಾರ್ಥಿಗಳ ಹೆಸರು ಪುಣೆಯ ಆದಿತ್ಯ ವೆಂಕಟ್, ಪುಣೆಯ ಸಿದ್ಧಾರ್ಥ್ ಚೋಪ್ರಾ, ದೆಹಲಿಯ ಅರ್ಜುನ್ ಗುಪ್ತಾ, ಗ್ರೇಟರ್ ನೋಯ್ಡಾದ ಕನವ್ ತಲ್ವಾರ್, ಮುಂಬೈನ ರುಶಿಲ್ ಮಾಥುರ್ ಮತ್ತು ಗುವಾಹಟಿಯ ಆನಂದೋ ಭಾದುರಿ ಎಂದು ಅಭಿನಂದನೆ ಸಲ್ಲಿಸಿದರು. ಅಲ್ಲದೆ ಈ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಭಾರತದ ಶ್ರೇಷ್ಠ ಸಾಧನೆ:

1989 ರ ಬಳಿಕ ಮ್ಯಾಥ್ಸ್ ಒಲಿಂಪಿಯಾಡ್​ನಲ್ಲಿ ಇದು ಭಾರತೀಯರ ಅತ್ಯುತ್ತಮ ಪ್ರದರ್ಶನವಾಗಿದೆ. IMO 1998 ಮತ್ತು IMO 2001 ರಲ್ಲಿ ಭಾರತೀಯ ವಿದ್ಯಾರ್ಥಿಗಳ ತಂಡ 7ನೇ ಶ್ರೇಯಾಂಕ ಪಡೆದುಕೊಂಡಿತ್ತು. ಆದರೆ ಈ ಬಾರಿ 4ನೇ ಶ್ರೇಯಾಂಕಕ್ಕೇರುವ ಮೂಲಕ ವಿಶ್ವದ ಗಮನ ಸೆಳೆದಿದೆ.

ಮ್ಯಾಥ್ಸ್ ಒಲಿಂಪಿಯಾಡ್​ನಲ್ಲಿ ಪದಕ ಗೆದ್ದ ವಿದ್ಯಾರ್ಥಿಗಳು:

  • ಆದಿತ್ಯ ವೆಂಕಟ್ (ಪುಣೆ, 11ನೇ ತರಗತಿ)- ಚಿನ್ನದ ಪದಕ
  • ಆನಂದ ಭಾದುರಿ (ಗುವಾಹಟಿ, 12ನೇ ತರಗತಿ)- ಚಿನ್ನದ ಪದಕ
  • ಕನವ್ ತಲ್ವಾರ್ (ನೋಯ್ಡಾ, 10ನೇ ತರಗತಿ)- ಚಿನ್ನದ ಪದಕ
  • ರುಶಿಲ್ ಮಾಥುರ್ (ಮುಂಬೈ, 12ನೇ ತರಗತಿ)- ಚಿನ್ನದ ಪದಕ
  • ಅರ್ಜುನ್ ಗುಪ್ತಾ (ದೆಹಲಿ, 12ನೇ ತರಗತಿ)-ಬೆಳ್ಳಿ ಪದಕ
  • ಸಿದ್ಧಾರ್ಥ್ ಚೋಪ್ಪಾರ (ಪುಣೆ, 12ನೇ ತರಗತಿ)- ಗೌರವಾನ್ವಿತ ಪ್ರಶಸ್ತಿ

ಇದನ್ನೂ ಓದಿ: Suryakumar Yadav: ಸೂರ್ಯಕುಮಾರ್ ಯಾದವ್ ಅಬ್ಬರಕ್ಕೆ ಮ್ಯಾಕ್ಸ್​ವೆಲ್ ವಿಶ್ವ ದಾಖಲೆ ಉಡೀಸ್

ಅಗ್ರಸ್ಥಾನಿ ಯಾರು:

ಜಾಗತಿಕವಾಗಿ, ಯುಎಸ್ಎ, ಚೀನಾ ಮತ್ತು ಸೌತ್ ಕೊರಿಯಾ ತಂಡಗಳು ಅಗ್ರ ಮೂರು ವಿಜೇತರಾಗಿ ಸ್ಥಾನ ಪಡೆದಿವೆ. ಮ್ಯಾಥ್ಸ್ ಒಲಿಂಪಿಯಾಡ್​ನಲ್ಲಿ ಟಾಪ್-5 ದೇಶಗಳ ಸ್ಕೋರ್​ ಈ ಕೆಳಗಿನಂತಿದೆ.

  1. ಯುಎಸ್​ಎ- 192 ಅಂಕಗಳು
  2. ಚೀನಾ- 190 ಅಂಕಗಳು
  3. ಸೌತ್ ಕೊರಿಯ- 168 ಅಂಕಗಳು
  4. ಭಾರತ- 167 ಅಂಕಗಳು
  5. ಬೆಲಾರಸ್- 165 ಅಂಕಗಳು