Bengaluru Bulls: ಭರ್ಜರಿ ಜಯದೊಂದಿಗೆ ಸೆಮಿಫೈನಲ್ಗೆ ನುಗ್ಗಿದ ಬೆಂಗಳೂರು ಬುಲ್ಸ್
Pro Kabaddi League 2022: ಬೆಂಗಳೂರು ಬುಲ್ಸ್ ಪರ ಪವನ್ ಕುಮಾರ್ ಶೆಹ್ರಾವತ್ 11 ಪಾಯಿಂಟ್ ಕಲೆಹಾಕಿದರೆ, ಚಂದ್ರನ್ ರಂಜಿತ್ 7 ರೈಡಿಂಗ್ ಪಾಯಿಂಟ್ ಪಡೆದುಕೊಂಡರು.
ಪ್ರೋ ಕಬಡ್ಡಿ ಲೀಗ್ನ ಎಲಿಮಿನೇಟರ್ ಪಂದ್ಯಗಳು ಮುಗಿದಿವೆ. ಪುಣೇರಿ ಪಲ್ಟನ್ ವಿರುದ್ದ ಯುಪಿ ಯೋಧಾ ಗೆದ್ದರೆ, ಗುಜರಾತ್ ಜೈಂಟ್ಸ್ ವಿರುದ್ದ ಬೆಂಗಳೂರು ಬುಲ್ಸ್ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಬೆಂಗಳೂರು ಬುಲ್ಸ್ ತಂಡವು ಸೆಮಿಫೈನಲ್ಗೆ ಎಂಟ್ರಿ ಕೊಟ್ಟಿದೆ. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಬೆಂಗಳೂರು ಬುಲ್ಸ್ ಹಾಗೂ ಗುಜರಾತ್ ಜೈಂಟ್ಸ್ ನಡುವಣ ಪಂದ್ಯವು ಆರಂಭದಲ್ಲೇ ಒನ್ಸೈಡ್ ಪಂದ್ಯವಾಗಿ ಮಾರ್ಪಟ್ಟಿತು. ಬೆಂಗಳೂರು ಬುಲ್ಸ್ ಸ್ಟಾರ್ ರೈಡರ್ ಪವನ್ ಕುಮಾರ್ ಶೆಹ್ರಾವತ್ ಅವರ ಭರ್ಜರಿ ಪ್ರದರ್ಶನದ ಮುಂದೆ ಗುಜರಾತ್ ಆಟಗಾರರು ಮಂಕಾದಂತೆ ಕಂಡು ಬಂದರು.
ಆರಂಭಿಕ ರೈಡ್ ಮೂಲಕವೇ ಪವನ್ ಕುಮಾರ್ ಶೆಹ್ರಾವತ್ ಹಾಗೂ ಚಂದ್ರನ್ ರಂಜಿತ್ ಬೆಂಗಳೂರು ತಂಡಕ್ಕೆ ಬ್ಯಾಕ್ ಟು ಬ್ಯಾಕ್ ಪಾಯಿಂಟ್ಗಳನ್ನು ತಂದುಕೊಟ್ಟರು. ಮತ್ತೊಂದೆಡೆ ರಾಕೇಶ್ ಉತ್ತಮ ರೈಡ್ ಮಾಡಿದ್ರೂ ಸೌರಭ್ ನಂದಾಲ್ ಹಾಗೂ ಮಹೇಂದ್ರ ಸಿಂಗ್ ಟ್ಯಾಕಲ್ ಬಗ್ಗೆ ಎಚ್ಚರಿಕೆವಹಿಸಬೇಕಾಯಿತು. ಪರಿಣಾಮ ಮೊದಲಾರ್ಧ ಮುಕ್ತಾಯದ ವೇಳೆಗೆ ಬೆಂಗಳೂರು ಬುಲ್ಸ್ 24 ಅಂಕ ಪಡೆದರೆ, ಗುಜರಾತ್ ಜೈಂಟ್ಸ್ 17 ಅಂಕಗಳಿಸಲಷ್ಟೇ ಶಕ್ತರಾದರು.
ಇನ್ನು 6 ಅಂಕಗಳ ಮುನ್ನಡೆಯೊಂದಿಗೆ ದ್ವಿತಿಯಾರ್ಧ ಆರಂಭಿಸಿದ ಬೆಂಗಳೂರು ಬುಲ್ಸ್ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಅದರಂತೆ ಗುಜರಾತ್ ತಂಡವು 28 ಅಂಕಗಳಿಸುವಷ್ಟರಲ್ಲಿ ಬೆಂಗಳೂರು ಬುಲ್ಸ್ ತಂಡದ ಪಾಯಿಂಟ್ 40ರ ಗಡಿ ದಾಟಿತು. ಅಂತಿಮ 1 ನಿಮಿಷಗಳ ಆಟ ಬಾಕಿಯಿರುವಾಗ ಬೆಂಗಳೂರು ಬುಲ್ಸ್ ತಂಡವು 49 ಅಂಕ ಪಡೆಯುವ ಮೂಲಕ ಗೆಲುವನ್ನು ಖಚಿತಪಡಿಸಿಕೊಂಡಿತು.
ಅದರಂತೆ ಅಂತಿಮವಾಗಿ ಬೆಂಗಳೂರು ಬುಲ್ಸ್ ತಂಡವು 49 ಅಂಕಗಳಿಸಿದರೆ, ಗುಜರಾತ್ ಜೈಂಟ್ಸ್ ತಂಡವು 29 ಅಂಕಗಳಿಸುವ ಮೂಲಕ 20 ಅಂಕಗಳ ಅಂತರದಿಂದ ಸೋಲೋಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಬೆಂಗಳೂರು ಬುಲ್ಸ್ ತಂಡವು ಸೆಮಿಫೈನಲ್ಗೆ ಎಂಟ್ರಿ ಕೊಟ್ಟಿದೆ. ಬೆಂಗಳೂರು ಬುಲ್ಸ್ ಪರ ಪವನ್ ಕುಮಾರ್ ಶೆಹ್ರಾವತ್ 11 ಪಾಯಿಂಟ್ ಕಲೆಹಾಕಿದರೆ, ಚಂದ್ರನ್ ರಂಜಿತ್ 7 ರೈಡಿಂಗ್ ಪಾಯಿಂಟ್ ಪಡೆದುಕೊಂಡರು. ಇನ್ನು ಟ್ಯಾಕಲ್ ಮೂಲಕ ಮಹೇಂದ್ರ ಸಿಂಗ್ 5 ಪಾಯಿಂಟ್ ಕಲೆಹಾಕಿ ಗೆಲುವಿನ ರೂವಾರಿ ಎನಿಸಿಕೊಂಡರು. ಮತ್ತೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್ (31) ವಿರುದ್ದ ಯುಪಿ ಯೋಧಾ 42 ಅಂಕ ಪಡೆಯುವ ಮೂಲಕ 11 ಅಂಕಗಳ ಅಂತರದಿಂದ ಗೆದ್ದು ಸೆಮಿಫೈನಲ್ಗೆ ಎಂಟ್ರಿ ಕೊಟ್ಟಿದೆ.
ಬುಧವಾರ ನಡೆಯಲಿರುವ ಸೆಮಿಫೈನಲ್ನಲ್ಲಿ ಪಟ್ನಾ ಪೈರೇಟ್ಸ್ ಹಾಗೂ ಯುಪಿ ಯೋಧಾ ಮುಖಾಮುಖಿಯಾಗಲಿದೆ. ಹಾಗೆಯೇ 2ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ದಬಾಂಗ್ ಡೆಲ್ಲಿ ಸೆಣಸಲಿದೆ. ಫೈನಲ್ ಪಂದ್ಯವು ಫೆಬ್ರವರಿ 25 ರಂದು ನಡೆಯಲಿದೆ.
ಇದನ್ನೂ ಓದಿ: AB de Villiers: ಸಿಡಿಲಬ್ಬರದ ಸಿಡಿಲಮರಿ ABDಯ ಈ 3 ದಾಖಲೆ ಮುರಿಯುವವರು ಯಾರು?
ಇದನ್ನೂ ಓದಿ: Rohit Sharma: ಬಾಬರ್ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ
ಇದನ್ನೂ ಓದಿ: Sunil narine: ಸಿಡಿಲಬ್ಬರದ ಅರ್ಧಶತಕ ಸಿಡಿಸಿ ದಾಖಲೆ ಬರೆದ ಸುನಿಲ್ ನರೈನ್
(Pro Kabaddi League Playoffs: Bengaluru Bulls Enters Semi Final)