French Open 2022: ಫ್ರೆಂಚ್ ಓಪನ್‌ನ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹದಿಮೂರು ಬಾರಿಯ ಚಾಂಪಿಯನ್ ಸ್ಪೇನ್‌ನ ಸ್ಟಾರ್ ಟೆನಿಸ್ ಆಟಗಾರ ರಾಫೆಲ್ ನಡಾಲ್ (Rafael Nadal) ವಿಶ್ವದ ನಂಬರ್ ಒನ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ (Novak Djokovic) ಅವರನ್ನು ಸೋಲಿಸಿದ್ದಾರೆ. ಈ ಮೂಲಕ ಈ ವರ್ಷದ ಎರಡನೇ ಗ್ರ್ಯಾಂಡ್ ಸ್ಲಾಮ್ ಫ್ರೆಂಚ್ ಓಪನ್‌ನ ಸೆಮಿಫೈನಲ್ಗೆ ತಲುಪಿದ್ದಾರೆ. ನಾಡಾಲ್ ಮುಂದಿನ ನಿರ್ಣಾಯಕ ಪಂದ್ಯದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಎದುರಿಸಲಿದ್ದಾರೆ. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ನಡಾಲ್-ಜೊಕೊವಿಕ್ ನಡುವಿನ ಕದನವು ನಿರೀಕ್ಷೆಯಂತೆ ರೋಚಕತೆಯನ್ನು ಸೃಷ್ಟಿಸಿತ್ತು.
ಈ ಪಂದ್ಯದಲ್ಲಿ ವಿಶ್ವದ ಮಾಜಿ ನಂಬರ್ ಒನ್ ಆಟಗಾರ ನಡಾಲ್ 6-2, 4-6, 6-2, 7-6 ಸೆಟ್‌ಗಳಿಂದ ಜೊಕೊವಿಚ್ ಅವರನ್ನು ಸೋಲಿಸಿದರು. ವಿಶೇಷ ಎಂದರೆ ಈ ಅಮೋಘ ಪಂದ್ಯ 4 ಗಂಟೆ 11 ನಿಮಿಷಗಳ ಕಾಲ ನಡೆಯಿತು. ಅಂದರೆ ಮೊದಲ ಸೆಟ್ ಅನ್ನು ನಡಾಲ್ ಗೆದ್ದರೆ, 2ನೇ ಸೆಟ್ ಗೆಲ್ಲುವ ಮೂಲಕ ಜೊಕೊವಿಕ್ ಪ್ರಬಲ ಪೈಪೋಟಿ ನೀಡಿದರು. ಇದಾಗ್ಯೂ ಮೂರನೇ ಸೆಟ್ನಲ್ಲಿ ನಡಾಲ್ ಗೆಲುವು ದಾಖಲಿಸಿದರು. ಆದರೆ 4ನೇ ಸೆಟ್ನಲ್ಲಿ ಇಬ್ಬರಿಂದ ತೀವ್ರ ಹೋರಾಟ ಕಂಡು ಬಂತು. ಅಂತಿಮವಾಗಿ 7-6 ಅಂತರದಿಂದ ಗೆಲ್ಲುವ ಮೂಲಕ ರಾಫೆಲ್ ನಡಾಲ್ ನೊವಾಕ್ ಜೊಕೊವಿಚ್ ಅವರನ್ನು ಸೋಲಿಸಿದರು. ಈ ಮೂಲಕ ಒಟ್ಟು 21 ಗ್ರ್ಯಾನ್ ಸ್ಲಾಮ್ ಗೆದ್ದಿರುವ ಕಿಂಗ್ ನಡಾಲ್ 22ನೇ ಗ್ರ್ಯಾನ್ ಸ್ಲಾಮ್ ಕಡೆಗೆ ಹೆಜ್ಜೆಯಿಟ್ಟಿದ್ದಾರೆ.
ವಿಶೇಷ ಎಂದರೆ ಈ ಗೆಲುವಿನೊಂದಿಗೆ ನಡಾಲ್ ತನ್ನನ್ನು ಫ್ರೆಂಚ್ ಓಪನ್ ಕಿಂಗ್ ಎಂದು ಏಕೆ ಕರೆಯುತ್ತಾರೆ ಎಂಬುದನ್ನು ಮತ್ತೊಮ್ಮೆ ಸ್ವತಃ ಸಾಬೀತುಪಡಿಸಿದರು. ಈ ಪಂದ್ಯಕ್ಕೂ ಮುನ್ನ ನಡಾಲ್ ವಿರುದ್ಧ ಜೊಕೊವಿಕ್ ಅವರ ವೃತ್ತಿಜೀವನದ ದಾಖಲೆ 30-28 ಆಗಿತ್ತು. ಫ್ರೆಂಚ್ ಓಪನ್‌ನಲ್ಲಿ ನಡಾಲ್, ಜೊಕೊವಿಚ್ ವಿರುದ್ಧ 9 ಪಂದ್ಯಗಳಲ್ಲಿ 7 ರಲ್ಲಿ ಜಯ ಸಾಧಿಸಿದ್ದಾರೆ.
ಮತ್ತೊಂದೆಡೆ, ಮಹಿಳೆಯರ ಸಿಂಗಲ್ಸ್‌ನಲ್ಲಿ ಇಟಲಿಯ ಮಾರ್ಟಿನಾ ಟ್ರೆವಿಸನ್ ಕ್ವಾರ್ಟರ್ ಫೈನಲ್‌ನಲ್ಲಿ ಕೆನಡಾದ 17ನೇ ಶ್ರೇಯಾಂಕದ ಲೇಯ್ಲಾ ಫರ್ನಾಂಡಿಸ್ ಅವರನ್ನು ಸೋಲಿಸಿ ಫ್ರೆಂಚ್ ಸೆಮಿಫೈನಲ್ ತಲುಪಿದ್ದಾರೆ. ಟ್ರೆವಿಸನ್ ಅವರು ಫರ್ನಾಂಡಿಸ್ ಅವರನ್ನು ಎರಡು ಗಂಟೆ 21 ನಿಮಿಷಗಳ ಆಟದಲ್ಲಿ ಸೋಲಿಸಿ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲಾಮ್ ಪಂದ್ಯಾವಳಿಯ ಸೆಮಿಫೈನಲ್ ತಲುಪಿದರು.
ಸೆಮಿ-ಫೈನಲ್‌ನಲ್ಲಿ ಟ್ರೆವಿಸನ್ 2018 ರ ರನ್ನರ್ ಅಪ್ ಸ್ಲೋನೆ ಸ್ಟೀಫನ್ಸ್ ಅವರನ್ನು ಸೋಲಿಸಿ ಸೆಮಿ-ಫೈನಲ್‌ಗೆ ಪ್ರವೇಶಿಸಿದ ಕೊಕೊ ಗೌಫ್ ಅವರನ್ನು ಎದುರಿಸಲಿದ್ದಾರೆ. ಟ್ರೆವಿಸನ್ ಮತ್ತು 18 ವರ್ಷದ ಕೊಕೊ ಗೌಫ್ ನಡುವಿನ ಪಂದ್ಯದಲ್ಲಿ ಯಾರೇ ಗೆದ್ದರೂ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲಾಮ್ ಫೈನಲ್‌ನಲ್ಲಿ ಆಡುವ ಅವಕಾಶವನ್ನು ಪಡೆಯಲಿದ್ದಾರೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:23 pm, Wed, 1 June 22