The Great Wall ರಾಹುಲ್ ದ್ರಾವಿಡ್ಗೂ ನಿವೃತ್ತಿಯ ನಂತರ ಮುಂದೇನು ಅನ್ನೋ ಆತಂಕದ ಪ್ರಶ್ನೆ ಕಾಡಿತ್ತಂತೆ. ಈ ವಿಚಾರವನ್ನ ಈಗ ರಾಹುಲ್ ದ್ರಾವಿಡ್ ಬಾಯ್ಬಿಟ್ಟಿದ್ದಾರೆ. ಭಾರತ-A ತಂಡ ಹಾಗೂ ಅಂಡರ್ 19 ಕ್ರಿಕೆಟ್ ತಂಡದ ಕೋಚಿಂಗ್ ಜವಾಬ್ದಾರಿಯನ್ನ ವಹಿಸಿಕೊಳ್ಳುವ ಮುನ್ನ ನಿವೃತ್ತಿಯ ನಂತರ ಮುಂದೇನು ಮಾಡಬೇಕು ಎಂಬುದಕ್ಕೆ ಅವರ ಸ್ಪಷ್ಟ ಉತ್ತರ ಇರಲಿಲ್ಲ. ಈ ಅವಧಿಯಲ್ಲಿ IPLಗಾಗಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಹಾಗೂ ಕೋಚ್ ಆಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ನನ್ನ ಅದೃಷ್ಟ ಎಂದು ದ್ರಾವಿಡ್ ಹೇಳಿದ್ದಾರೆ.
ನಾನು ಆಟ ಮುಗಿಸಿದ ನಂತರ ನನ್ನ ಮುಂದೆ ಕೆಲವು ಆಯ್ಕೆಗಳಿದ್ದವು. ಆದ್ರೆ ಏನನ್ನ ಆಯ್ಕೆ ಮಾಡಿಕೊಳ್ಳಬೇಕು ಅನ್ನೋದ್ರ ಬಗ್ಗೆ ಖಚಿತ ನಿಲುವಿರಲಿಲ್ಲ. ಆದ್ರೆ ನನ್ನ ವೃತ್ತಿಜೀವನದ ಅಂತ್ಯಕ್ಕೆ ಬರುವಾಗ ಕಪಿಲ್ ದೇವ್ ನನಗೆ ಈ ಸಲಹೆಯನ್ನು ನೀಡಿದ್ದರು ಎಂದು ದ್ರಾವಿಡ್ ಹಂಚಿಕೊಂಡಿದ್ದಾರೆ.
ಕಪಿಲ್ ದೇವ್ ನೀಡಿದ ಸಲಹೆ ಏನೆಂದರೆ, ರಾಹುಲ್ ಯಾವುದೇ ಕೆಲಸಕ್ಕೆ ಮೊದಲು ನೇರವಾಗಿ ಧುಮುಕಬೇಡಿ. ಒಂದಷ್ಟು ವರ್ಷ ಬೇರೆ ಬೇರೆ ವಿಭಾಗಗಳಲ್ಲಿ ನಿಮ್ಮನ್ನ ತೊಡಗಿಸಿಕೊಳ್ಳಿ. ಆ ನಂತರ ನಿಮಗೇನು ಇಷ್ಟವಾಗುತ್ತೋ ಅದನ್ನು ಆಯ್ಕೆ ಮಾಡಿಕೊಳ್ಳಿ ಎಂದು ಕಪಿಲ್ ದೇವ್ ಸಲಹೆ ನೀಡಿದ್ರು. ನಿಜಕ್ಕೂ ಕಪಿಲ್ ಪಾಜಿ ನೀಡಿದ ಸಲಹೆ ಒಳ್ಳೆಯದಾಗಿತ್ತು ಎಂದಿದ್ದಾರೆ Jammy.
ನನಗೆ ಹೆಚ್ಚು ತೃಪ್ತಿಯನ್ನು ನೀಡಿದ ವಿಷಯವೆಂದರೆ ನಿಜವಾಗಿಯೂ ನಾನು ಮತ್ತೆ ಆಟದಲ್ಲಿ ತೊಡಗಿಸಿಕೊಳ್ಳುವುದು. ಆಟಗಾರರೊಂದಿಗೆ ಸಂಪರ್ಕದಲ್ಲಿರೋದು. ನಾನು ಕೋಚಿಂಗ್ ವಿಭಾಗವನ್ನ ನಿಜವಾಗಿಯೂ ಇಷ್ಟಪಟ್ಟೆ. ಹೀಗಾಗಿ, ಭಾರತ A ಮತ್ತು ಅಂಡರ್ 19 ತಂಡಕ್ಕೆ ಕೋಚ್ ಆಗೋ ಅವಕಾಶ ಬಂದಾಗ ಖುಷಿಯಿಂದ ಅದನ್ನ ಒಪ್ಪಿಕೊಂಡೆ ಎಂದು ದ್ರಾವಿಡ್ ಹೇಳಿಕೊಂಡಿದ್ದಾರೆ.