ಆಂಗ್ಲರ ನಾಡಿನಿಂದ ಬಹಳ ದಿನಗಳ ಭಾರತಕ್ಕೆ ಒಂದು ಸಂತೋಷದ ಸುದ್ದಿ ಲಭ್ಯವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅವಮಾನಕರ ಸೋಲು ಅನುಭವಿಸಿದ ನಂತರ ಇಂಗ್ಲೆಂಡ್ ವಿರುದ್ಧ ಆಗಸ್ಟ್ 4 ರಿಂದ ನಡೆಯಲಿರುವ 5-ಪಂದ್ಯಗಳ ಟೆಸ್ಟ್ ಸರಣಿ ಆಡಲು ಅಲ್ಲೇ ಉಳಿದುಕೊಂಡಿರುವ ಟೀಮ್ ಇಂಡಿಯಾದ ಆಟಗಾರರು ತಮ್ಮ ಪತ್ನಿಯರೊಂದಿಗೆ ಇಲ್ಲವೇ ಗರ್ಲ್ಫ್ರೆಂಡ್ಳೊಂದಿಗೆ ಮಜವಾಗಿ ಕಾಲ ಕಳೆಯುತ್ತಾ ಅಲ್ಲಿಲ್ಲಿ ತಿರುಗಾಡುವಾಗ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಇಮೇಜುಗಳನ್ನು ನೋಡುವುದು ಬಿಟ್ಟರೆ ಅಲ್ಲಿಂದ ಮನಸ್ಸಿಗೆ ಮುದ ನೀಡುವಂಥ ಯಾವುದೇ ಸುದ್ದಿ ಭಾರತದ ಕ್ರಿಕೆಟ್ ಪ್ರೇಮಿಗೆ ಲಭ್ಯವಾಗಿರಲಿಲ್ಲ. ಆದರೆಮ ಬುದವಾರದಂದು ಅಂಥದೊಂದು ಸುದ್ದಿಯನ್ನು ಭಾರತದ ಅಗ್ರಮಾನ್ಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನೀಡಿದ್ದಾರೆ. ಇಂಗ್ಲಿಷ್ ಕೌಂಟಿ ಕ್ರಿಕೆಟ್ನಲ್ಲಿ ಸರ್ರೆ ಪರ ಆಡುವ ಅಶ್ವಿನ್ ಸಾಮರ್ಸೆಟ್ ವಿರುದ್ಧ ನಡೆಯುತ್ತಿರುವ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 25 ರನ್ ನೀಡಿ 6 ವಿಕೆಟ್ ಪಡೆದು ತಾನು ಟೆಸ್ಟ್ ಸರಣಿಗೆ ತಯಾರಾಗಿರುವ ಸಂದೇಶ ನೀಡಿದ್ದಾರೆ .
ಸಾಮರ್ಸೆಟ್ ಮೊದಲ ಇನ್ನಿಂಗ್ಸ್ನಲ್ಲಿ 99ರನ್ ನೀಡಿ ಕೇವಲ 1 ವಿಕೆಟ್ ಪಡೆದು, ಬ್ಯಾಟಿಂಗ್ನಲ್ಲಿ ಸೊನ್ನೆಗೆ ಔಟಾಗಿ ಟೀಮಿನ ಶಿಬಿರದಲ್ಲಿ ನಿರಾಶೆ ಮೂಡಿಸಿದ್ದ ಆಶ್ವಿನ್ ಎರಡನೇ ಇನ್ನಿಂಗ್ಸ್ ಚಮತ್ಕಾರಿಕ ಬೌಲಿಂಗ್ ಪ್ರದರ್ಶನ ನೀಡಿದರು. ಬುಧವಾರದಂದು ಲಂಚ್ ವಿರಾಮದ ವೇಳೆ ಸಾಮರ್ಸೆಟ್ 60/7 ಕುಸಿಯುಲು ಅಶ್ವಿನ್ ಪ್ರಮುಖ ಪಾತ್ರ ನಿರ್ವಹಿಸಿದರು. ಆಗ ಅವರು 13 ಓವರ್ಗಳಲ್ಲಿ 23ರನ್ಗೆ 5 ವಿಕೆಟ್ ಪಡೆದಿದ್ದರು. ಊಟದ ನಂತರ ಆಟ ಆರಂಭಗೊಂಡಾಗ ಅವರು ಮತ್ತೊಂದು ವಿಕೆಟ್ ಕಬಳಿಸಿದರು. ಜೊತೆ ಆಟಗಾರ ಡ್ಯಾನ್ ಮೊರಿಯಾರ್ಟಿ (4/20) ಅವರೊಂದಿಗೆ ಸಾಮರ್ಸೆಟ್ ಬ್ಯಾಟಿಂಗ್ ಧೂಳೀಪಟ ಮಾಡಿದ ಅಶ್ವಿನ್ ಎದುರಾಳಿಗಳ ಮೊತ್ತವನ್ನು ಕೇವಲ 69 ಕ್ಕೆ ಸೀಮಿತಗೊಳ್ಳವುದನ್ನು ನೋಡಿಕೊಂಡರು.
ಈ ಪಂದ್ಯದಲ್ಲಿ ಎರಡನೇ ಬಾರಿಗೆ ಬೌಲಿಂಗ್ ದಾಳಿ ಆರಂಭಿಸಿದ ಆಶ್ವಿನ್, ಸ್ಟಿವೆನ್ ಡೇವಿಸ್ (7), ಟಾಮ್ ಲಮ್ಮೋನ್ಬಿ (3), ನಾಯಕ ಜೇಮ್ಸ್ ಹಿಲ್ಡ್ರೆತ್ (14), ಜಾರ್ಜ್ ಬಾರ್ಲೆ (12) ರಾಲ್ಫ್ ವ್ಯಾನ್ ಡರ್ ಮರ್ವ (7) ಮತ್ತು ಬೆನ್ ಗ್ರೀನ್ (3) ಅವರ ವಿಕೆಟ್ಗಳನ್ನು ಪಡೆದರು. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅಶ್ವಿನ್ 49 ನೇ ಬಾರಿ ಇನ್ನಿಂಗ್ಸೊಂದರಲ್ಲಿ 5 ಇಲ್ಲವೇ ಅದಕ್ಕಿಂತ ಹೆಚ್ಚು ವಿಕೆಟ್ ಪಡೆಯುವ ಸಾಧನೆ ಮಾಡಿದ್ದಾರೆ. ಕೌಂಟಿ ಕ್ರಿಕೆಟ್ನಲ್ಲಿ 7 ಬಾರಿ ಈ ಸಾಧನೆ ಮಾಡಿದ್ದಾರೆ.
ಅಶ್ವಿನ್ ಇದಕ್ಕೆ ಮೊದಲು ನಾಟಿಂಗ್ಹ್ಯಾಮ್ಶೈರ್ ಮತ್ತು ವೋರ್ಸೆಸ್ಟರ್ಶೈರ್ ಪರ ಆಡಿದ್ದಾರೆ. ಈ ಕ್ಲಬ್ಗಳಿಗೆ ಅವರು ಕ್ರಮವಾಗಿ 4 ಮತ್ತು 2 ಬಾರಿ 5 ವಿಕೆಟ್ ಪಡೆಯುವ ಸಾಧನೆ ಮಾಡಿದ್ದಾರೆ.
ಎರಡು ವಾರಗಳ ರಜೆಯ ನಂತರ ಟೀಮ್ ಇಂಡಿಯಾ ಸದಸ್ಯರು ಬಯೊ-ಬಬಲ್ಗೆ ವಾಪಸ್ಸಾದ ದಿನವೇ ಆಶ್ವಿನ್ 6ವಿಕೆಟ್ ಪಡೆದಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ನಂತರ ಇತರ ಆಟಗಾರರೆಲ್ಲ ಇಂಗ್ಲೆಂಡ್ನಲ್ಲಿ ಸುತ್ತಾಡಲು ತೆರಳಿದರೆ, ಅಶ್ವಿನ್ ಮಾತ್ರ ಕೌಂಟಿ ಕ್ರಿಕೆಟ್ ಆಡಲು ಹಿಂದುಳಿದರು.
ಅವರ ನಿರ್ಧಾರ ಫಲ ನೀಡಿದೆ ಅಂತಲೇ ಹೇಳಬಹುದು. ಇಂಗ್ಲೆಂಡ್ ವಿರುದ್ಧ ಸರಣಿ ಆರಂಭವಾಗಲು ಕೇವಲ 20 ದಿನ ಮಾತ್ರ ಉಳಿದಿರುವುದರಿಂದ ಬುಧವಾರದ ಸಾಧನೆ ಅವರ ಆತ್ಮವಿಶ್ವಾಸವನ್ನು ದ್ವಿಗುಣಗೊಳಿಸಿರುತ್ತದೆ.
ಇದನ್ನೂ ಓದಿ: Ravichandran Ashwin Profile: ಭಾರತದಲ್ಲಿ ಆಂಗ್ಲರ ವಿರುದ್ಧ ಮಿಂಚಿದ್ದ ಅಶ್ವಿನ್ ಅವರ ನೆಲದಲ್ಲಿ ಭಾರತಕ್ಕೆ ನೆರವಾಗುತ್ತಾರಾ?