ಆರಂಭ ಆಟಗಾರನಾಗಿ ಆಡಲು ಸಿದ್ಧ: ಸ್ಟೀವ್ ಸ್ಮಿತ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 10, 2020 | 10:43 PM

ಆರಂಭ ಆಟಗಾರರಿಬ್ಬರೂ ಗಾಯಗೊಂಡಿರುವುದರಿಂದ ಅಸ್ಟ್ರೇಲಿಯಾಗೆ ಯಾರನ್ನು ಇನ್ನಿಂಗ್ಸ್ ಓಪನ್ ಮಾಡಲು ಕಳಿಸುವುದು ಎಂಬ ಚಿಂತೆ ಶುರುವಾಗಿದೆ. ಏತನ್ಮಧ್ಯೆ, ಮೂರನೇ ಕ್ರಮಾಂಕದಲ್ಲಿ ಆಡುವ ಸ್ಟೀವ್ ಸ್ಮಿತ್ ಇನ್ನಿಂಗ್ಸ್ ಆರಂಭಿಸಲು ತಾನು ತಯಾರಿರುವುದಾಗಿ ಹೇಳಿದ್ದಾರೆ.

ಆರಂಭ ಆಟಗಾರನಾಗಿ ಆಡಲು ಸಿದ್ಧ: ಸ್ಟೀವ್ ಸ್ಮಿತ್
ಸ್ಟೀವ್ ಸ್ಮಿತ್
Follow us on

ಭಾರತದ ವಿರುದ್ಧ ಟೆಸ್ಟ್ ಸರಣಿ ಶುರುವಾಗಲು ಸರಿಯಾಗಿ ಒಂದು ವಾರ ಕೂಡ ಉಳಿದಿಲ್ಲ, ಆದರೆ ಅತಿಥೇಯರಿಗೆ ಆರಂಭಿಕ ಅಟಗಾರರ ಚಿಂತೆ ಕಾಡಲಾರಂಭಿಸಿದೆ. ಅಸ್ಟ್ರೇಲಿಯಾದ ಇಬ್ಬರು ನಿಯಮಿತ ಓಪನರ್​ಗಳಾಗಿರುವ ಡೇವಿಡ್ ವಾರ್ನರ್ ಮತ್ತು ವಿಲ್ ಪುಕೊವ್​ಸ್ಕಿ ಇಬ್ಬರೂ ಗಾಯಾಳುಗಳ ಪಟ್ಟಿಗೆ ಸೇರಿದ್ದಾರೆ. ವಾರ್ನರ್ ತೊಡೆಸಂಧಿ ನೋವಿಗೊಳಗಾಗಿದ್ದರೆ ಪುಕೊವ್​ಸ್ಕಿ ಅವರಿಗೆ ಭಾರತದ ವಿರುದ್ಧ ಅಡಿದ ಮೂರು ದಿನಗಳ ಪಂದ್ಯದಲ್ಲಿ ವೇಗದ ಬೌಲರ್ ಉಮೇಶ್ ಯಾದವ್ ಅವರ ಬೌನ್ಸರೊಂದು ತಲೆಗೆ ಅಪ್ಪಳಿಸಿತು. ಕನ್ಕಶನ್​ಗೆ ಒಳಗಾಗಿರುವ ಅವರಿನ್ನೂ ಚೇತರಿಸಿಕೊಳ್ಳುವ ಹಂತದಲ್ಲಿದ್ದು ಅಡಿಲೇಡ್ ಟೆಸ್ಟ್ ಆಡುವ ಸ್ಥಿತಿಯಲ್ಲಿಲ್ಲವೆಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.

ಮತ್ತೊಬ್ಬ ರೆಗ್ಯುಲರ್ ಓಪನರ್ ಜೋ ಬರ್ನ್ಸ್ ಕಳಪೆ ಫಾರ್ಮ್​ಲ್ಲಿದ್ದಾರೆ, ಅವರನ್ನು ಆಡಿಸುವುದು ಅನುಮಾನಾಸ್ಪದವಾಗಿದೆ. ಭಾರತದ ವಿರುದ್ಧ ಟಿ20ಐ ಕ್ರಿಕೆಟ್​ನಲ್ಲಿ ಎರಡು ಅರ್ಧ ಶತಕಗಳನ್ನು ಬಾರಿಸಿದ ಮ್ಯಾಥ್ಯೂ ವೇಡ್ ಮತ್ತು ಆಲ್​ರೌಂಡರ್ ಕೆಮೆರಾನ್ ಗ್ರೀನ್ ಅವರನ್ನು ಆರಂಭ ಆಟಗಾರರನ್ನಾಗಿ ಆಡಿಸುವುದು ಒಳ್ಳೆಯ ಆಪ್ಷನ್ ಎಂದು ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಹೇಳಿದ್ದಾರೆ.

ಆದರೆ, ಟೆಸ್ಟ್​ಗಳಲ್ಲಿ ಮೂರನೇ ಕ್ರಮಾಂಕದಲ್ಲಾಡುವ ಸ್ಟಾರ್ ಬ್ಯಾಟ್ಸ್​ಮನ್ ಸ್ಟೀವ್ ಸ್ಮಿತ್ ಅವರನ್ನು ಆರಂಭಿಕನಾಗಿ ಆಡಿಸುವ ಬಗ್ಗೆ ಟೀಮ್ ಮ್ಯಾನೇಜ್ಮೇಂಟ್ ಗಂಭೀರ ಚಿಂತನೆ ನಡೆಸಿದ್ದು ಹೊಸ ಜವಾಬ್ದಾರಿ ನಿಭಾಯಿಸಲು ಸಿದ್ಧನಿರುವುದಾಗಿ ಸ್ಮಿತ್ ಹೇಳಿದ್ದಾರೆ.

‘ಅದು (ಇನ್ನಿಂಗ್ಸ್ ಆರಂಭಿಸುವುದು) ನನಗೆ ಸಮಸ್ಯೆಯೇನೂ ಅಲ್ಲ. ಸಾಮಾನ್ಯವಾಗಿ ನಾನು ಮೂರು ಇಲ್ಲವೇ ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತೇನೆ. ಮೂರನೆ ಕ್ರಮಾಂಕದಲ್ಲಿ ಆಡುವ ಆಟಗಾರ ಕೆಲವು ಸಲ ಇನ್ನಿಂಗ್ಸ್​ನ ಮೊದಲ ಇಲ್ಲವೇ ಎರಡನೇ ಓವರ್​ನಲ್ಲಿ ಕ್ರೀಸಿಗೆ ಹೋಗಬೇಕಾಗುತ್ತದೆ. ನನ್ನ ಕರೀಯರ್​ನಲ್ಲಿ ಅಂಥ ಸಂದರ್ಭಗಳು ಎದುರಾಗಿರುವುದರಿಂದ ಇನ್ನಿಂಗ್ಸ್ ಓಪನ್ ಮಾಡುವುದು ನನಗೆ ಸಮಸ್ಯೆಯೇನೂ ಅಲ್ಲ’ ಎಂದು ಸ್ಮಿತ್ ಹೇಳಿದ್ದಾರೆ.

 

Published On - 10:38 pm, Thu, 10 December 20