ಭಾರತದ ವಿಕೆಟ್-ಕೀಪರ್/ಬ್ಯಾಟ್ಸ್ಮನ್ ರಿಷಭ್ ಪಂತ್ 2020ರವರೆಗೆ ಭಾರತೀಯ ಟೀಮಿನ ಖಾಯಂ ಸದಸ್ಯರಾಗಿರಲಿಲ್ಲ. ಟೀಮಿಗೆ ಆಯ್ಕೆ ಮಾಡಿ ಒಂದೆರಡು ಪಂದ್ಯಗಳು ಆಡಿಸಿದ ನಂತರ ಅವರನ್ನು ಕೈಬಿಡಲಾಗುತ್ತಿತ್ತು. ಅವರ ಕಳಾಹೀನ ಪ್ರದರ್ಶನಗಳು ರಾಷ್ಟ್ರೀಯ ಅಯ್ಕೆ ಸಮಿತಿ ಸದಸ್ಯರನ್ನು ಇಂಪ್ರೆಸ್ ಮಾಡುವುದು ಸಾಧ್ಯವಿರಲಿಲ್ಲ. ಅಲ್ಲದೆ ವಿಕೆಟ್ ಹಿಂದೆಯೂ ಅವರು ಮಹೇಂದ್ರಸಿಂಗ್ ಧೋನಿ ಅಥವಾ ವೃದ್ಧಿಮಾನ್ ಸಹಾರಂತೆ ಪರಿಣಾಮಕಾರಿಯಾಗಿರಲಿಲ್ಲ. ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಕರ್ನಾಟಕದ ಕೆ ಎಲ್ ರಾಹುಲ್ ಅವರು ಪಂತ್ರನ್ನು ರಿಪ್ಲೇಸ್ ಮಾಡಿದರು. ಅವರ ಬ್ಯಾಟಿಂಗ್ ಶೈಲಿ ಸೀಮಿತ ಓವರ್ಗಳ ಕ್ರಿಕೆಟ್ ಹೇಳಿ ಮಾಡಿಸಿದಂತಿದ್ದರೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅವರನ್ನು ಆ ಆವೃತ್ತಿಯ ಪಂದ್ಯಗಳಿಗೆ ಆಯ್ಕೆ ಮಾಡಲಿಲ್ಲ. ಪ್ರಾಯಶ: ಇಂಡಿಯನ್ ಪ್ರಿಮೀಯರ್ ಲೀಗ್ ನಲ್ಲಿ ಅವರಿಂದ ಹೇಳಿಕೊಳ್ಳುವಂಥ ಪ್ರದರ್ಶನಗಳು ಬಾರದೇ ಹೋಗಿದ್ದು ಕಾರಣವಾಗಿರಬಹುದು.
ಆದರೆ, ಆಸ್ಟ್ರೇಲಿಯಾ ವಿರುದ್ಧ ಆಡಿದ ಟೆಸ್ಟ್ ಪಂದ್ಯಗಳಲ್ಲಿ ಅವರು ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತು ಮಾಡಿದರು. ಸಿಡ್ನಿಯಲ್ಲಿ ಅವರ ದಿಟ್ಟ ಮತ್ತು ಹೋರಾಟದ ಇನ್ನಿಂಗ್ಸ್ ಭಾರತ ಸೋಲಿನಿಂದ ತಪ್ಪಿಸಿಕೊಳ್ಳಲು ನೆರವಾದರೆ ಬ್ರಿಸ್ಬೇನ್ ಟೆಸ್ಟ್ನಲ್ಲಿ ಅವರ ಮ್ಯಾಚ್-ವಿನ್ನಿಂಗ್ ಇನ್ನಿಂಗ್ಸ್ ಪಂತ್ ವೃತ್ತಿಬದುಕಿನಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿತು. 23 ವರ್ಷ ವಯಸ್ಸಿನ ಈ ಎಡಚ ಸ್ವದೇಶದಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ಟೆಸ್ಟ್ ಮತ್ತು ಒಡಿಐ ಪಂದ್ಯಗಳಲ್ಲೂ ಆದೇ ಫಾರ್ಮ್ ಮುಂದುವರೆಸಿ ಭಾರತ ಸರಣಿಗಳನ್ನು ಗೆಲ್ಲುವಲ್ಲಿ ಮಹತ್ತರದ ಪಾತ್ರ ನಿರ್ವಹಿಸಿದರು. ಲಿಮಿಟೆಡ್ ಓವರ್ಸ್ ಕ್ರಿಕೆಟ್ನಲ್ಲಂತೂ ಅವರು ಬೌಲರ್ಗಳ ಎದೆಯಲ್ಲಿ ನಡುಕ ಹುಟ್ಟಿಸುವ ಬ್ಯಾಟ್ಸ್ಮನ್ ಆಗಿಬಿಟ್ಟಿದ್ದಾರೆ. ಪಾಕಿಸ್ತಾನ ಮಾಜಿ ಕ್ಯಾಪ್ಟನ್ ಇಂಜಮಾಮ್-ಉಲ್-ಹಕ್ ಅವರ ಪ್ರಕಾರ ಒಂದು ದಿನದ ಸರಣಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ವ್ಯತ್ಯಾಸ ಪಂತ್ ಆಗಿದ್ದರು.
‘ಎಂಥ ಅಮೋಘ ಆಟಗಾರ ಈ ಪಂತ್! ನಾವು ಅಂದುಕೊಂಡಿರುವುದಕ್ಕಿಂತಲೂ ಉತ್ತಮವಾಗಿ ಆಡುವ ಆಟಗಾರನೊಬ್ಬನನ್ನು ನಾನು ಬಹಳ ಸಮಯದ ನಂತರ ನೋಡುತ್ತಿದ್ದೇನೆ. ಆವರನ್ನು ಆಸ್ಟ್ರೇಲಿಯಾದಲ್ಲಿ ಭಾರತ ಆಡಿದ ಟೆಸ್ಟ್ ಸರಣಿಯಿಂದ ಗಮನಿಸುತ್ತಿದ್ದೇನೆ. ಒತ್ತಡ ಅವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ,’ ಎಂದು ತಮ್ಮ ಯೂಟ್ಯೂಬ್ ಚ್ಯಾನೆಲ್ನಲ್ಲಿ ಅಪ್ಲೋಡ್ ಮಾಡಿರುವ ವಿಡಿಯೊವೊಂದರಲ್ಲಿ ಹಕ್ ಹೇಳಿದ್ದಾರೆ.
‘ಆಸ್ಟ್ರೇಲಿಯಾದಲ್ಲಿ ಭಾರತದ ಸೀನಿಯರ್ ಆಟಗಾರರೆಲ್ಲ ಗಾಯಗೊಂಡು ಸರಣಿಯಿಂದ ಹೊರಬಿದ್ದ ನಂತರ ಪಂತ್ ಮಿಡ್ಲ್ ಆರ್ಡರ್ನಲ್ಲಿ ಲೀಲಾಜಾಲವಾಗಿ ಬ್ಯಾಟ್ ಮಾಡುತ್ತಿದ್ದುದನ್ನು ನೋಡಿದಾಗ ಭಾರತ ಯಾವುದೇ ವಿಕೆಟ್ ಕಳೆದುಕೊಂಡಿಲ್ಲ ಮತ್ತು ಅವರು ಆಸ್ಟ್ರೇಲಿಯಾದ ಪಿಚ್ಗಳ ಮೇಲೆಲ್ಲದೆ ಬೇರೆಲ್ಲೋ ಅಡುತ್ತಿರುವಂತೆ ಭಾಸವಾಯಿತು. ಹಿಂದೆ, ಆಸ್ಟ್ರೇಲಿಯಾದ ಪಿಚ್ಗಳ ಮೇಲೆ ಬ್ಯಾಟ್ ಮಾಡಲು ಆಟಗಾರರು ಹೆದರುತ್ತಿದ್ದರು. ಅದರೆ, ಪಂತ್ ಅವರಲ್ಲಿ ಅಂಥ ಆತಂಕ ಗೋಚರಿಸಲೇ ಇಲ್ಲ. 70 ರ ದಶಕದಲ್ಲಿ ವೆಸ್ಟ್ ಇಂಡೀಸ್ ಮತ್ತು ಇತರ ತಂಡಗಳ ನಡುವಿನ ವ್ಯತ್ಯಾಸ ವಿವ್ ರಿಚರ್ಡ್ಸ್ ಆಗಿರುತ್ತಿದ್ದರು. ಹಾಗೆಯೆ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಸರಣಿಯಲ್ಲಿ ಎರಡು ತಂಡಗಳ ನಡುವಿನ ವ್ಯತ್ಯಾಸ ಪಂತ್ ಆಗಿದ್ದರು,’ ಎಂದು ವಿಡಿಯೊದಲ್ಲಿ ಹಕ್ ಹೇಳಿದ್ದಾರೆ.
ಮೂರನೇ ಒಡಿಐನಲ್ಲಿ ಪಂತ್ ಅವರ 78 ರನ್ ಗಳ ಇನ್ನಿಂಗ್ಸ್ ಅಪ್ರತಿಮವಾಗಿತ್ತು ಎಂದು ಹಕ್ ಹೇಳಿದ್ದಾರೆ. ಬಾರತದ ಇತರ ಬ್ಯಾಟ್ಸ್ಮನ್ಗಳು ಇಂಗ್ಲೆಂಡ್ ಸ್ಪಿನ್ ಬೌಲರ್ಗಳ ವಿರುದ್ಧ ರನ್ ಗಳಿಸಲು ಪರದಾಡುತ್ತಿದ್ದಾಗ ಪಂತ್ ನಿರಾಯಾಸವಾಗಿ ಗಳಿಸಿದರು ಎಂದು ಹಕ್ ಹೇಳಿದ್ದಾರೆ.
‘ಸ್ಪಿನ್ನರ್ಗಳ ವಿರುದ್ಧ ಆ ಪಿಚ್ನಲ್ಲಿ ರನ್ ಗಳಿಸುವುದು ಬಹಳ ಪ್ರಯಾಸಕರವಾಗಿತ್ತು, ವಿರಾಟ್ ಕೊಹ್ಲಿ ಅವರು ಮೊಯೀನ್ಗೆ ಕ್ಲೀನ್ ಬೌಲ್ಡ್ ಅಗಿದ್ದನ್ನು ನಾನು ನೋಡಿದೆ. ಆದರೆ ಅದೇ ಪಿಚ್ನಲ್ಲಿ ಪಂತ್ ಕೇವಲ 62 ಎಸೆತಗಳಲ್ಲಿ 100 ಕ್ಕಿಂತ ಹೆಚ್ಚಿನ ಸ್ಟ್ರೈಕ್ರೇಟ್ನೊಂದಿಗೆ 78 ರನ್ ಬಾರಿಸಿದರು. ಬೇರೆ ಯಾವುದೇ ಆಟಗಾರ100 ರ ಸ್ಟ್ರೈಕ್ರೇಟ್ನೊಂದಿಗೆ ರನ್ ಗಳಿಸಲಿಲ್ಲ,‘ ಎಂದು ಹಕ್ ಹೇಳಿದ್ದಾರೆ.
‘ಬ್ಯಾಟಿಂಗ್ನಲ್ಲಿ ಪಂತ್ಗೆ ಬಡ್ತಿ ನೀಡುವ ಕೊಹ್ಲಿಯ ನಿರ್ಧಾರ ಸ್ಪಾಟ್ ಆನ್ ಆಗಿತ್ತು. ಭಾರತ ಮೂವರ ಸೀನಿಯರ್ ಆಟಗಾರರನ್ನು (ರೋಹಿತ್ ಶರ್ಮ, ಶಿಖರ್ ಧವನ್ ಮತ್ತು ಕೊಹ್ಲಿ) ಕಳೆದುಕೊಂಡಿದ್ದರಿಂದ ಉಳಿದ ಆಟಗಾರರ ಮೇಲೆ ಒತ್ತಡ ಹೆಚ್ಚುತ್ತಲೇ ಇತ್ತು. ಆದರೆ ಪಂತ್ ಅವರ ಅದ್ಭುತವಾದ ಸ್ಟ್ರೋಕ್ ಪ್ಲೇ ಒತ್ತಡವನ್ನು ಸಂಪೂರ್ಣವಾಗಿ ಇಲ್ಲವಾಗಿಸಿತು,’ ಎಂದು ಹಕ್ ಹೇಳಿದ್ದಾರೆ.
ಇದನ್ನೂ ಓದಿ: India vs Australia Test Series ನಾವು ಪಂತ್ರನ್ನು ಬೆಂಬಲಿಸುವ ಹಿಂದೆ ಕಾರಣವಿದೆ: ರವಿ ಶಾಸ್ತ್ರೀ
Published On - 8:47 pm, Tue, 30 March 21