India vs Australia Test Series ನಾವು ಪಂತ್ರನ್ನು ಬೆಂಬಲಿಸುವ ಹಿಂದೆ ಕಾರಣವಿದೆ: ರವಿ ಶಾಸ್ತ್ರೀ
ಪಂತ್ ಪ್ರತಿಭಾವಂತನಾಗಿದ್ದದರು ಉಡಾಫೆ ಮನೋಭಾವ, ಶಾಟ್ ಸೆಲೆಕ್ಷನ್ನಲ್ಲಿ ಪದೇಪದೆ ಎಸಗುವ ಪ್ರಮಾದ ಮತ್ತು, ಅಷ್ಠೇನೂ ಉತ್ತಮವಲ್ಲದ ವಿಕೆಟ್ಕೀಪಿಂಗ್ನಿಂದ ಸದಾ ಟೀಕೆಗೊಳಗಾಗುತ್ತಿದ್ದರು.
ಎಲ್ಲ ಭಾರತೀಯರ ನಾಲಗೆ ಮೇಲೆ ಇಂದು ಇಬ್ಬರ ಹೆಸರು; ಕೇವಲ 21ನೆ ವಯಸ್ಸಿಗೆ ಅಗಾಧವೆನಿಸುವ ಪ್ರಬುದ್ಧತೆಯೊಂದಿಗೆ ಅತ್ಯಾಕರ್ಷಕ ಮತ್ತು ಅಧಿಕಾರಯುತ ಬ್ಯಾಟಿಂಗ್ ಪ್ರದರ್ಶನ ನೀಡಿ ಕೇವಲ 9 ರನ್ಗಳಿಂದ ಶತಕ ತಪ್ಪಿಸಿಕೊಂಡ ಶುಭ್ಮನ್ ಗಿಲ್ ಮತ್ತು ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಭಾರತಕ್ಕೆ ರೋಮಾಂಚಕ ಜಯ ದೊರಕಿಸಿಕೊಟ್ಟ ರಿಷಭ್ ಪಂತ್.
ನಾವಿಲ್ಲಿ ಪಂತ್ ಬಗ್ಗೆ ಮಾತ್ರ ಚರ್ಚೆ ಮಾಡುವ. ಅಪಾರ ಪ್ರತಿಭಾವಂತನಾಗಿದ್ದದರು ಉಡಾಫೆ ಮನೋಭಾವ, ಶಾಟ್ ಸೆಲೆಕ್ಷನ್ನಲ್ಲಿ ಪದೇಪದೆ ಎಸಗುವ ಪ್ರಮಾದ ಮತ್ತು, ಅಷ್ಟೇನೂ ಉತ್ತಮವಲ್ಲದ ವಿಕೆಟ್ಕೀಪಿಂಗ್ನಿಂದ ಸದಾ ಟೀಕೆಗೊಳಗಾಗುವ ದೆಹಲಿಯ 23 ವರ್ಷ ವಯಸ್ಸಿನ ಪೋರ, ಪ್ರಾಯಶಃ ತನ್ನ ಟೀಕಾಕಾರರ ಬಾಯಿಯನ್ನು ಇಂದು ಶಾಶ್ವತವಾಗಿ ಮುಚ್ಚಿದ್ದಾರೆ. ಬ್ರಿಸ್ಬೇನ್ನಲ್ಲಿ ಅವರಾಡಿದ ಇನ್ನಿಂಗ್ಸ್ ಅಷ್ಟು ಅಮೋಘವಾಗಿತ್ತು.
ಟೀಮ್ ಇಂಡಿಯಾದ ಕೋಚ್ ರವಿ ಶಾಸ್ತ್ರೀ ಹೇಳುವ ಹಾಗೆ ಪಂತ್ ತಮ್ಮ ಬ್ಯಾಟಿಂಗ್ ಸುಧಾರಿಸಿಕೊಳ್ಳಲು ತುಂಬಾ ಶ್ರಮಪಡುತ್ತಿದ್ದಾರೆ. ಆ ಶ್ರಮವೇ ಅವರನ್ನಿವತ್ತು ಮ್ಯಾಚ್ ವಿನ್ನರ್ ಆಗಿ ಪರಿವರ್ತಿಸಿತು ಎಂದು ಶಾಸ್ತ್ರೀ ಹೇಳುತ್ತಾರೆ. ಅವರನ್ನು ಟೀಮ್ ಮ್ಯಾನೇಜ್ಮೆಂಟ್ ಯಾಕೆ ಅವರ ಬೆನ್ನಿಗೆ ನಿಲ್ಲುತ್ತದೆ ಅಂತಲೂ ಶಾಸ್ತ್ರೀ ಹೇಳಿದರು.
‘ನಾವು ಪಂತ್ರನ್ನು ಯಾಕೆ ಆಡಿಸಲು ಬಯಸುತ್ತೇವೆಂದರೆ, ನಿಸ್ಸಂದೇಹವಾಗಿ ಅವರೊಬ್ಬ ಮ್ಯಾಚ್ ವಿನ್ನರ್. ಅವರು ವಿಕೆಟ್ಕೀಪಿಂಗ್ ಚೆನ್ನಾಗಿ ಮಾಡದಿದ್ದರೆ ಜನ ಅವರನ್ನು ಟೀಕಿಸುತ್ತಾರೆ. ಆದರೆ ಅವರು ಟೀಮಿಗೆ ಪಂದ್ಯಗಳನ್ನು ಗೆದ್ದುಕೊಡಬಲ್ಲ ಸಾಮರ್ಥ್ಯದ ಆಟಗಾರರಾಗಿದ್ದಾರೆ. ಸಿಡ್ನಿಯಲ್ಲಿ ಇನ್ನೂ ಸ್ವಲ್ಪ ಹೊತ್ತು ಆಡಿದ್ದರೆ ಆ ಪಂದ್ಯವನ್ನೂ ಭಾರತಕ್ಕೆ ಗೆದ್ದುಕೊಡುತ್ತಿದ್ದರು, ಅವರೊಬ್ಬ ಉತ್ಕೃಷ್ಟ ಬ್ಯಾಟ್ಸ್ಮನ್ ಆಗಿರುವುದರಿಂದ ನಾವು ಅವರ ಬೆನ್ನಿಗೆ ನಿಲ್ಲುತ್ತೇವೆ,’ ಎಂದು ಶಾಸ್ತ್ರೀ ಬ್ರಿಸ್ಬೇನ್ನಲ್ಲಿ ಇಂದು ಪಂದ್ಯ ಮುಗಿದ ನಂತರ ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ನೊಂದಿಗೆ ಮಾತಾಡುವಾಗ ಹೇಳಿದರು.
ಟೀಮಿನ 6-7 ಪ್ರಮುಖ ಆಟಗಾರರ ಅನುಪಸ್ಥಿತಯಲ್ಲೂ ಭಾರತೀಯ ಟೀಮು ತೋರಿದ ಪ್ರದರ್ಶನವನ್ನು ಶಾಸ್ತ್ರೀ ಪ್ರಶಂಸಿದರು.
‘ನಮ್ಮ ಹುಡುಗರ ಮನಸ್ಥೈರ್ಯ, ಶೌರ್ಯ ಮತ್ತು ಸಂಕಲ್ಪಗಳ ಬಗ್ಗೆ ವರ್ಣಿಸಲು ನನ್ನಲ್ಲಿ ಪದಗಳೇ ಇಲ್ಲ. ಅಡಿಲೇಡ್ನಲ್ಲಿ ಕೇವಲ 36 ರನ್ಗಳಿಗೆ ಔಟಾದ ನಂತರ ಅವರು ತೋರಿದ ಪರಾಕ್ರಮ ಅಭೂತಪೂರ್ವವಾದದ್ದು. ಈ ಟೀಮನ್ನು ರಾತ್ರೋರಾತ್ರಿ ಕಟ್ಟಿದ್ದಲ್ಲ. ವಿರಾಟ್ ಭೌತಿಕವಾಗಿ ನಮ್ಮೊಂದಿಗಿರದಿದ್ದರೂ ನಿರಂತರವಾಗಿ ಸಂಪರ್ಕದಲ್ಲಿದ್ದರು. ಅವರು ಮೈದಾನದಲ್ಲಿ ತೋರುವ ತೀವ್ರತೆಯನ್ನು ಉಳಿದ ಆಟಗಾರರೂ ಮೈಗೂಡಿಸಿಕೊಂಡಿದ್ದಾರೆ. ಅಜಿಂಕ್ಯಾ ರಹಾನೆ ನೋಡಲು ಮೃದುವಾಗಿ ಕಾಣಬಹುದು, ಆದರೆ ಆಂತರಿಕವಾಗಿ ಅವರು ತುಂಬಾ ಸ್ಟ್ರಾಂಗ್ ಆಗಿದ್ದಾರೆ,’ ಎಂದು ಶಾಸ್ತ್ರೀ ಹೇಳಿದರು.