ಶುಭ್ಮನ್ ಗಿಲ್ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಆಗಮಿಸಿದ್ದಾರೆ, ಬೌಲರ್ಗಳೇ ಎಚ್ಚರ!
ಬ್ರಿಸ್ಬೇನ್ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ ಗಿಲ್ ತಮ್ಮ ಅಗಾಧ ಪ್ರತಿಭೆ, ಉಕ್ಕಿನಂಥ ಮನೋಬಲ ಪ್ರದರ್ಶಿಸಿ 91 ರನ್ಗಳನ್ನು ಬಾರಿಸುವ ಮೂಲಕ ತಮ್ಮ ಸಾಮರ್ಥ್ಯದ ಬಗ್ಗೆ ಸ್ಪಷ್ಟವಾದ ಸ್ಟೇಟ್ಮೆಂಟ್ ನೀಡಿ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಭಧ್ರಗೊಳಿಸಿಕೊಂಡಿದ್ದಾರೆ.
ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಆವೃತ್ತಿಯಲ್ಲಿ ಶುಭ್ಮನ್ ಗಿಲ್ ಅವರ ಬ್ಯಾಟಿಂಗ್ ವೈಖರಿ ಮತ್ತು ಅವರು ಬಾರಿಸುತ್ತಿದ್ದ ಹೊಡೆತಗಳನ್ನು ನೋಡಿದ ಕಾಮೆಂಟರಿ ಪ್ಯಾನೆಲ್ನಲ್ಲಿದ್ದ ಕೆಲ ಮಾಜಿ ಆಟಗಾರರು, ‘ಇವನು ಭಾರತದ ಭವಿಷ್ಯ!’ ಎಂದು ಉದ್ಗರಿಸಿದ್ದಾರೆ.
ಉದಯೋನ್ಮುಖ ಪ್ರತಿಭೆಗಳ ಪ್ರಗತಿಯ ಮೇಲೆ ಕರ್ನಾಟಕದ ರಾಹುಲ್ ದ್ರಾವಿಡ್ರಂತೆ ಸದಾ ನಿಗಾ ಇಡುವ ಹೈದರಾಬಾದಿನ ವಿ.ವಿ.ಎಸ್.ಲಕ್ಷ್ಮಣ್, ಸುಮಾರು ಎರಡು ವರ್ಷಗಳ ಹಿಂದೆ ಮುಂಬೈನ ಹೋಟೆಲೊಂದರಲ್ಲಿ, ಭಾರತದ ಮಾಜಿ ಆಲ್ರೌಂಡರ್ ಪಂಜಾಬಿನ ಯುವರಾಜ್ ಸಿಂಗ್ ಜೊತೆ ಕೂತು ಕುಳಿತು ಹರಟುತ್ತಿದ್ದಾಗ; ಪ್ರಥಮ ದರ್ಜೆ, ರಣಜಿ ಟ್ರೋಫಿ ಟೂರ್ನಿಯಲ್ಲಿ ಪಂಜಾಬನ್ನು ಪ್ರತಿನಿಧಿಸುವ ಗಿಲ್ ಹೆಸರನ್ನು ಉಲ್ಲೇಖಿಸಿ, ‘ಹುಡುಗನ ಪ್ರಗತಿ ಹೇಗಿದೆ?’ ಎಂದು ಕೇಳಿದ್ದರು.
ಅದಕ್ಕೆ ಯುವರಾಜ್, ‘ಅವನ ಬಗ್ಗೆ ಏನು ಹೇಳಲಿ ಪಾಜಿ? 80ರ ದಶಕದಲ್ಲಿ ವಿವಿಯನ್ ರಿಚರ್ಡ್ಸ್ ಎದುರಾಳಿ ಬೌಲರ್ಗಳ ಎದೆಯಲ್ಲಿ ನಡುಕ ಹುಟ್ಟಿಸಿದಂತೆ ಅವನು ಸಹ ಬೌಲರ್ಗಳಲ್ಲಿ ಭೀತಿ ಮೂಡಿಸಿಬಿಟ್ಟಿದ್ದಾನೆ. ಅವನಿಗೆ ಬೌಲ್ ಮಾಡಲು ಬೇರೆ ರಾಜ್ಯಗಳ ಬೌಲರ್ಗಳು ಅಕ್ಷರಶಃ ಹೆದರುತ್ತಿದ್ದಾರೆ’ ಎಂದು ಹೇಳಿದ್ದರು.
ಸಾಮಾನ್ಯವಾಗಿ ಬ್ಯಾಟ್ಸ್ಮನ್ಗಳನ್ನು ಉತ್ತಮ, ಶ್ರೇಷ್ಠ ಮತ್ತು ವಿಶ್ವಶ್ರೇಷ್ಠ ಅಥವಾ ವಿಶ್ವದರ್ಜೆಯ ಆಟಗಾರರನ್ನಾಗಿ ವರ್ಗೀಕರಿಸಲಾಗುತ್ತದೆ. ಇದಕ್ಕೂ ಮಿಗಿಲಾಗಿ ರಿಚರ್ಡ್ಸ್ ಮತ್ತು ನಮ್ಮವರೇ ಆಗಿರುವ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್ರಂಥ ಬ್ಯಾಟ್ಸ್ಮನ್ಗಳಿರುತ್ತಾರೆ. ಅವರು ಬ್ಯಾಟಿಂಗ್ ಕ್ರೀಸಿಗೆ ಬರುವಾಗಲೇ ಬೌಲರ್ಗಳ ಎದೆ ಡವಗುಟ್ಟಲಾರಂಭಿಸುತ್ತದೆ. ಇವರಿಗೆ ಹೇಗಪ್ಪಾ ಬೌಲಿಂಗ್ ಮಾಡೋದು ಅಂತ ಅವರು ಭೀತಿಗೊಳಗಾಗುತ್ತಾರೆ.
ಯುವರಾಜ್ ಸಿಂಗ್ ಹಲವಾರು ವರ್ಷಗಳ ಕಾಲ ಕೆಲ ದಿಗ್ಗಜ ಆಟಗಾರರೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದವರು, ಅವರಿಗೆ ಕ್ರೀಡೆಯ ಎಲ್ಲ ಆಯಾಮಗಳು ಗೊತ್ತು. ಅವರ ಬಾಯಿಂದ ಗಿಲ್ ಬಗ್ಗೆ ಅಂಥ ಉದ್ಗಾರ ಬಂದಿದೆಯೆಂದರೆ ಈ ಯುವ ಆಟಗಾರನ ಸಾಮರ್ಥ್ಯವೇನು ಅಂತ ಗೊತ್ತಾಗುತ್ತದೆ. ದೇಶೀಯ ಕ್ರಿಕೆಟ್ ಆಡುವಾಗ ಗಿಲ್ ಬಗ್ಗೆ ಬೌಲರ್ಗಳು ಏನು ಅಂದುಕೊಳ್ಳುತ್ತಾರೋ, ನಿನ್ನೆ ಬ್ರಿಸ್ಬೇನ್ನ ಗಬ್ಬಾ ಮೈದಾನದಲ್ಲಿ ಆಸ್ಟ್ರೇಲಿಯಾದ ಬೌಲರ್ಗಳು ಸಹ ಅದೇ ಅಂದುಕೊಂಡಿರುತ್ತಾರೆ.
ನಿನ್ನೆ ಪಂದ್ಯವಿನ್ನೂ ನಡೆಯುತ್ತಿದ್ದಾಗ ಆಸ್ಸೀ ಬೌಲರ್ಗಳ ಮನಸ್ಥಿತಿಯನ್ನು ಸೆಹ್ವಾಗ್ ತಮ್ಮ ಎಂದಿನ ವಿಡಂಬನೆಯ ಶೈಲಿಯಲ್ಲಿ ಅತ್ಯಂತ ಮಾರ್ಮಿಕವಾಗಿ ಹೇಳಿದ್ದರು.
Australia gave it everything in the session, but they must be saying " Gill hai ki Maanta Nahi".Great start to the day for India, two more of such sessions and we retain the Border Gavaskar Trophy for the 3rd time in succession. #INDvsAUS pic.twitter.com/tqMgw269sC
— Virender Sehwag (@virendersehwag) January 19, 2021
ಬಾರ್ಡರ್-ಗಾವಸ್ಕರ್ ಟ್ರೋಫಿಯ ಎರಡನೆ ಟೆಸ್ಟ್ನಲ್ಲಿ ಪಾದಾರ್ಪಣೆ ಮಾಡಿದ ಗಿಲ್ ಆ ಪಂದ್ಯದಲ್ಲಿ 45 ಮತ್ತು ಅಜೇಯ 45 ರನ್ಗಳನ್ನು ಬಾರಿಸಿ ತಮ್ಮ ಕ್ಲಾಸ್ ಪ್ರದರ್ಶಿಸಿದರು. ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್ನಲ್ಲಿ ಅವರ ಕರೀಯರ್ನ ಮೊದಲ ಅರ್ಧ ಶತಕ ಸಿಡಿಯಿತು. ಹೊಡೆತಗಳನ್ನು ನಿರ್ವಹಿಸುವ ಅವರ ಶೈಲಿ, ಹೊಡೆತ ಬಾರಿಸಲು ಅವರು ಆರಿಸಿಕೊಳ್ಳುವ ಎಸೆತಗಳು ಮತ್ತು ಹೊಡೆತಗಳನ್ನು ಎಕ್ಸಿಕ್ಯೂಟ್ ಮಾಡುವ ಆಕರ್ಷಕ ಶೈಲಿ ಆಸ್ಟ್ರೇಲಿಯಾದ ಕಾಮೆಂಟೇಟರ್ಗಳನ್ನೂ ನಿಬ್ಬೆರಗಾಗಿಸಿದೆ. ‘This lad certainly has class’ ಅಂತ ಮೈಕೆಲ್ ಕ್ಲಾರ್ಕ್, ಆ್ಯಡಂ ಗಿಲ್ಕ್ರಿಸ್ಟ್, ಶೇನ್ ವಾರ್ನ್ ಮೊದಲಾದವರು ಉದ್ಗರಿಸಿದ್ದರು.
ಬ್ರಿಸ್ಬೇನ್ ಟೆಸ್ಟ್ನ ಎರಡನೆ ಇನ್ನಿಂಗ್ಸ್ನಲ್ಲಿ ಗಿಲ್ ತಮ್ಮ ಅಗಾದ ಪ್ರತಿಭೆ, ಉಕ್ಕಿನಂಥ ಮನೋಬಲ ಪ್ರದರ್ಶಿಸಿ 91 ರನ್ಗಳನ್ನು ಬಾರಿಸುವ ಮೂಲಕ ತಮ್ಮ ಸಾಮರ್ಥ್ಯದ ಬಗ್ಗೆ ಸ್ಪಷ್ಟವಾದ ಸ್ಟೇಟ್ಮೆಂಟ್ ನೀಡಿ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಭಧ್ರಗೊಳಿಸಿಕೊಂಡರು. ಗಬ್ಬಾ ಮೈದಾನದಲ್ಲಿ ಪಂದ್ಯದ ಕೊನೆ ದಿನ ವಿಶ್ವದರ್ಜೆಯ ಬೌಲಿಂಗ್ ಆಕ್ರಮಣದೆದುರು ಒಂದಿಷ್ಟೂ ಅಳುಕದೆ ಲೀಲಾಜಾಲವಾಗಿ ಹೊಡೆತಗಳನ್ನು ಬಾರಿಸುತ್ತಾ, ಭಾರತವನ್ನು ಗೆಲುವಿನೆಡೆಗೆ ನಡೆಸಿದರು.
The way @RealShubmanGill batted today he definitely deserved a century- but I’m sure there are many that lie ahead in his future. Amazing talent and more importantly has the mental strength to handle pressure. #future #class #AUSvIND pic.twitter.com/D1tqCr1x2r
— VVS Laxman (@VVSLaxman281) January 19, 2021
ಪಂಜಾಬ್ ಪರ ರಣಜಿಯಲ್ಲಿ ಆಡುವಾಗ ಬೌಲರ್ಗಳನ್ನು ಹೇಗೆ ಟ್ರೀಟ್ ಮಾಡುತ್ತಾರೋ ಅದೇ ತೆರನಾದ ಟ್ರೀಟ್ಮೆಂಟ್ ಆಸ್ಸೀ ಬೌಲರ್ಗಳಿಗೆ ನೀಡಿದರು. ‘ಇಟ್ ವಾಸ್ ಎನ್ ಇನ್ನಿಂಗ್ಸ್ ಆಫ್ ಪ್ಯೂರ್ ಕ್ಲಾಸ್’ ಎಂದು ಭಾರತದ ಲೆಜೆಂಡರಿ ಓಪನರ್ ಸುನಿಲ್ ಗಾವಸ್ಕರ್ ಹೇಳಿದರು. ಅತಿಥೇಯ ಬೌಲರ್ಗಳು 145 ಕಿ. ಮೀ ಕ್ಕಿಂತ ಹೆಚ್ಚಿನ ವೇಗದಲ್ಲಿ ಬೌಲ್ ಮಾಡುತ್ತಿದ್ದರೂ, ಹೊಡೆತ ಬಾರಿಸಲು ಗಿಲ್ ಬಳಿ ಸಾಕಷ್ಟು ಸಮಯವಿದ್ದಿದ್ದು, ನೋಡುಗರನ್ನು ದಂಗಾಗಿಸಿತ್ತು.
ನಿನ್ನೆ ಗಿಲ್ ಆಡುವುದನ್ನು ನೋಡುತ್ತಿದ್ದ ಲಕ್ಷ್ಮಣ್, ‘ಇಂದು ಅದ್ಭುತವಾಗಿ ಆಡಿದ ಗಿಲ್ಗೆ ಅರ್ಹವಾಗಿದ್ದ ಶತಕ ದಕ್ಕದೆ ಹೋಗಿದ್ದು ದುರಾದೃಷ್ಟ. ಆದರೆ ಭವಿಷ್ಯದಲ್ಲಿ ಅವನ ಬ್ಯಾಟ್ನಿಂದ ಬಹಳಷ್ಟು ಸಿಡಿಯಲಿವೆ ಅನ್ನೋದು ನನಗೆ ಗೊತ್ತಿದೆ. ಅವನಲ್ಲಿರುವ ಪ್ರತಿಭೆ ಮತ್ತು ಒತ್ತಡವನ್ನು ನಿರ್ವಹಿಸುವ ಮಾನಸಿಕ ಬಲ ದಿಗ್ಭ್ರಮೆ ಮೂಡಿಸುತ್ತದೆ‘ ಎಂದು ಟ್ವೀಟ್ ಮಾಡಿದ್ದಾರೆ.
ಕೇವಲ 21 ವರ್ಷ ವಯಸ್ಸಿನ ಗಿಲ್ ಅಂತರಾಷ್ಟ್ರೀಯ ಕ್ರಿಕೆಟ್ಗೆ ತಮ್ಮ ಆಗಮನವನ್ನು ಸಾರಿದ್ದಾರೆ. ಬೌಲರ್ಗಳೇ ಎಚ್ಚರ!!
India vs England Test Series | ಇಂಗ್ಲೆಂಡ್ ವಿರುದ್ಧ ಮೊದಲೆರಡು ಟೆಸ್ಟ್ಗಳಿಗೆ ನಟರಾಜನ್ ಡ್ರಾಪ್!
Published On - 2:06 pm, Wed, 20 January 21