ಟೆನಿಸ್ (Tennis) ದಿಗ್ಗಜ ರೋಜರ್ ಫೆಡರರ್ ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಸೆರೆನಾ ವಿಲಿಯಮ್ಸ್ (Serena Williams) ನಿವೃತ್ತಿಯ ಶಾಕ್ನಿಂದ ಇನ್ನೂ ಸಂಪೂರ್ಣವಾಗಿ ಹೊರಬರದ ಟೆನಿಸ್ ಅಭಿಮಾನಿಗಳಿಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ಪುರುಷರ ಟೆನಿಸ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ (Roger Federer) ತಮ್ಮ ವೃತ್ತಿಪರ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಘೋಷಿಸಿದ್ದಾರೆ. ಮುಂದಿನ ವಾರದ ಲೇವರ್ ಕಪ್ ತನ್ನ ವೃತ್ತಿಜೀವನದ ಕೊನೆಯ ಎಟಿಪಿ ಪಂದ್ಯಾವಳಿಯಾಗಿದ್ದು, ಅದರ ನಂತರ ಯಾವುದೇ ಗ್ರ್ಯಾಂಡ್ ಸ್ಲಾಮ್ (Grand Slam) ಅಥವಾ ಟೂರ್ ಈವೆಂಟ್‌ಗಳಲ್ಲಿ ಭಾಗವಹಿಸುವುದಿಲ್ಲ ಎಂದು ಫೆಡರರ್ ಹೇಳಿಕೊಂಡಿದ್ದಾರೆ. ಲೇವರ್ ಕಪ್ ಮುಂದಿನ ವಾರ ಲಂಡನ್‌ನಲ್ಲಿ ಸೆಪ್ಟೆಂಬರ್ 23 ರಿಂದ 25 ರವರೆಗೆ ನಡೆಯಲಿದೆ.
ಟೆನಿಸ್ ಜಗತ್ತಿನ ಶ್ರೇಷ್ಠ ಆಟಗಾರ ಎನಿಸಿಕೊಂಡಿದ್ದ ಸ್ವಿಸ್ ಸೂಪರ್‌ಸ್ಟಾರ್ ತನ್ನ ಎರಡು ದಶಕಗಳ ವೃತ್ತಿಪರ ವೃತ್ತಿಜೀವನದಲ್ಲಿ 20 ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದರು. ಅಲ್ಲದೆ ಈ ಮೈಲಿಗಲ್ಲನ್ನು ತಲುಪಿದ ವಿಶ್ವದ ಮೊದಲ ಪುರುಷ ಆಟಗಾರ ಎನಿಸಿಕೊಂಡಿದ್ದರು. ಜೊತೆಗೆ ಫೆಡರರ್ಗೂ ಮುನ್ನ ಅತ್ಯಧಿಕ 14 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದ ಪೀಟ್ ಸಾಂಪ್ರಾಸ್ ಅವರ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ರೋಜರ್ ಇತಿಹಾಸವನ್ನು ಸೃಷ್ಟಿಸಿದ್ದರು. ಫೆಡರರ್ ತನ್ನ ವೃತ್ತಿಜೀವನದಲ್ಲಿ ಒಟ್ಟು 103 ಎಟಿಪಿ ಈವೆಂಟ್‌ಗಳನ್ನು ಗೆಲ್ಲುವ ಮೂಲಕ ಜಿಮ್ಮಿ ಕಾನರ್ಸ್ (109) ನಂತರ ಈ ಸಾಧನೆ ಮಾಡಿದ ಎರಡನೇ ಆಟಗಾರ ಎನಿಸಿಕೊಂಡರು.
ಅದ್ಭುತ ಪ್ರಯಾಣ ಅಂತ್ಯ
ಫೆಡರರ್ ಅವರು ತಮ್ಮ ಅಭಿಮಾನಿಗಳಿಗೆ ವೀಡಿಯೊ ಮತ್ತು ನಾಲ್ಕು ಪುಟಗಳ ಭಾವನಾತ್ಮಕ ಹೇಳಿಕೆಯೊಂದಿಗೆ ನಿವೃತ್ತಿ ಘೋಷಿಸಿದ್ದಾರೆ. ನಿರಂತರ ಗಾಯ, ಫಿಟ್‌ನೆಸ್ ಮತ್ತು ವಯಸ್ಸು ತನ್ನ ಈ ನಿರ್ಧಾರದ ಹಿಂದಿನ ಕಾರಣ ಎಂಬುದನ್ನು ರೋಜರ್ ಉಲ್ಲೇಖಿಸಿದ್ದಾರೆ. “ನನಗೆ ಈಗ 41 ವರ್ಷ ವಯಸ್ಸಾಗಿದ್ದು, ನಾನು 24 ವರ್ಷಗಳ ವೃತ್ತಿಜೀವನದಲ್ಲಿ 1500 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದೇನೆ. ಟೆನಿಸ್ ಆಟವನ್ನು ನಾನು ಯಾವಾಗಲೂ ನನ್ನ ನಿರೀಕ್ಷೆಗಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದೆ. ಈಗ ನನ್ನ ಸ್ಪರ್ಧಾತ್ಮಕ ವೃತ್ತಿಜೀವನವನ್ನು ಕೊನೆಗೊಳಿಸುವ ಸಮಯ ಬಂದಿದೆ ಎಂದು ಒಪ್ಪಿಕೊಳ್ಳಬೇಕು ಎಂದು ಫೆಡರರ್ ಹೇಳಿಕೊಂಡಿದ್ದಾರೆ.
To my tennis family and beyond,
With Love,
Roger pic.twitter.com/1UISwK1NIN— Roger Federer (@rogerfederer) September 15, 2022
— Roger Federer (@rogerfederer) September 15, 2022
24 ವರ್ಷಗಳ ವೃತ್ತಿಜೀವನದಲ್ಲಿ 1500 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿರುವ ಫೆಡರರ್, ತನ್ನ ಕೇವಲ 21 ನೇ ವಯಸ್ಸಿನಲ್ಲೇ 2003 ರಂದು ನಡೆದ ವಿಂಬಲ್ಡನ್‌ನಲ್ಲಿ ತಮ್ಮ ಮೊದಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದಿದ್ದರು. ಈಗ 41 ನೇ ವಯಸ್ಸಿನ ಅಂತ್ಯಕ್ಕೆ ಒಟ್ಟು 20 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳೊಂದಿಗೆ ಅವರು ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳುತ್ತಿದ್ದಾರೆ. ಕಳೆದ ಸುಮಾರು ಮೂರು ವರ್ಷಗಳಿಂದ ಗಾಯದಿಂದ ಬಳಲುತ್ತಿರುವ ಫೆಡರರ್, ಕೊನೆಯ ಬಾರಿಗೆ 2021 ರ ಫ್ರೆಂಚ್ ಓಪನ್‌ನಲ್ಲಿ ಭಾಗವಹಿಸಿದ್ದರು. ಆದರೆ ಅಲ್ಲೂ ಕೂಡ ಇಂಜುರಿಗೆ ತುತ್ತಾದ ಫೆಡರರ್ ಮೂರನೇ ಸುತ್ತನ್ನು ಗೆದ್ದು, ಟೂರ್ನಿಯಿಂದ ಹಿಂದೆ ಸರಿದಿದ್ದರು. ಅಂದಿನಿಂದ, ನಿರಂತರವಾಗಿ ಕೋರ್ಟ್ಗೆ ಮರಳಲು ಪ್ರಯತ್ನಿಸುತ್ತಿದ್ದರಾದರೂ ಈ ಪ್ರಯತ್ನದಲ್ಲಿ ರೋಜರ್ ಯಶಸ್ವಿಯಾಗಲಿಲ್ಲ.
ಫೆಡರರ್ 2018 ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ತಮ್ಮ ಕೊನೆಯ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಗೆದ್ದಿದ್ದರು. ಇದರ ನಂತರ ಅವರು 2019 ರ ವಿಂಬಲ್ಡನ್‌ನ ಫೈನಲ್ ತಲುಪಿದರದಾರೂ, ಅಲ್ಲಿ ನೊವಾಕ್ ಜೊಕೊವಿಕ್ ಎದುರಿನ ರೋಚಕ ಪಂದ್ಯದಲ್ಲಿ ಸೋಲನುಭವಿಸಬೇಕಾಯಿತು.
Published On - 7:09 pm, Thu, 15 September 22