
ಟೆನಿಸ್ ಲೋಕದ ದೈತ್ಯ ರೋಜರ್ ಫೆಡರರ್ ಸೋಲಿನೊಂದಿಗೆ ತಮ್ಮ ಟೆನಿಸ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಭಾರತದಲ್ಲಿನ ಅವರ ಅಭಿಮಾನಿಗಳು ಗಾಢ ನಿದ್ರೆಯಲ್ಲಿದ್ದಾಗ ತಮ್ಮ ಕೊನೆಯ ಪಂದ್ಯವನ್ನಾಡಿದ ಫೆಡರರ್ಗೆ ಗೆಲುವಿನ ವಿದಾಯ ಸಿಗಲೇ ಇಲ್ಲ. ವಿಶೇಷವೆಂದರೆ ಪುರುಷರ ಸಿಂಗಲ್ಸ್‌ನ ಅನಭಿಶಕ್ತ ದೊರೆ ಫೆಡರರ್ ತಮ್ಮ ಕೊನೆಯ ಪಂದ್ಯವನ್ನು ಡಬಲ್ಸ್‌ನಲ್ಲಿ ಆಡಿದ್ದು, ಇದರಲ್ಲಿ ಅವರು ಸ್ಪೇನ್‌ನ ರಾಫೆಲ್ ನಡಾಲ್ ಅವರೊಂದಿಗೆ ಅಖಾಡಕ್ಕಿಳಿದಿದ್ದರು.

ಕೊನೆಯ ಪಂದ್ಯದಲ್ಲಿ ರೋಜರ್ ಫೆಡರರ್ ಸೋಲು ಕಂಡರೂ, ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾದರು. ಸೋಲಿನೊಂದಿಗೆ ಫೆಡರರ್ ಕೋರ್ಟ್ನಿಂದ ಹೊರನಡೆಯುವಾಗ ಅಲ್ಲಿ ನೆರೆದಿದ್ದ ಪ್ರತಿಯೊಬ್ಬರ ಕಣ್ಣಲ್ಲೂ ಕಣ್ಣೀರಧಾರೆ ಹರಿದಿತ್ತು. ಇಡೀ ಕ್ರೀಡಾಂಗಣವೇ ಮೌನದ ತವರುಮನೆಯಾಗಿತ್ತು. ಜೊತೆಗೆ ಈ ಅಂತಿಮ ಪಂದ್ಯದಲ್ಲಿ ಫೆಡರರ್ ಜೊತೆಗಾರನಾಗಿದ್ದ ನಡಾಲ್ ಕೂಡ ಬಿಕ್ಕಿ ಬಿಕ್ಕಿ ಅತ್ತರು. ಅವರನ್ನು ಹೊರತುಪಡಿಸಿ, ಜೊಕೊವಿಕ್, ಮರ್ರೆ ಮತ್ತು ಇತರ ಎಲ್ಲ ಆಟಗಾರರು ಈ ಭಾವನಾತ್ಮಕ ಕ್ಷಣದಲ್ಲಿ ಕಣ್ಣೀರು ಸುರಿಸಿದರು.

20 ಬಾರಿಯ ಗ್ರ್ಯಾಂಡ್ ಸ್ಲಾಮ್ ವಿಜೇತ ರೋಜರ್ ಫೆಡರರ್ ತಮ್ಮ ಕೊನೆಯ ಪಂದ್ಯದಲ್ಲಿ ಜ್ಯಾಕ್ ಸಾಕ್ ಮತ್ತು ಫ್ರಾನ್ಸಿಸ್ ಟಿಯಾಫೊ ಜೋಡಿಯನ್ನು ಎದುರಿಸಿದ್ದರು. ಈ ಜೋಡಿಯ ವಿರುದ್ಧ ಮೊದಲ ಸೆಟ್ ಅನ್ನು 6-4 ರಿಂದ ಸುಲಭವಾಗಿ ಗೆಲ್ಲುವಲ್ಲಿ ಫೆಡರರ್- ರಫೆಲ್ ನಡಾಲ್ ಯಶಸ್ವಿಯಾಯಿತು.

ಆದರೆ ಮೊದಲ ಸೆಟ್ ಸೋಲಿನಿಂದ ಫಿನಿಕ್ಸ್ ಹಕ್ಕಿಯಂತೆ ಮೇಲೆದ್ದು ಬಂದ ಜಾಕ್ ಮತ್ತು ಫ್ರಾನ್ಸಿಸ್ ಜೋಡಿಯು ಎರಡನೇ ಸೆಟ್‌ನಲ್ಲಿ ಪ್ರಚಂಡ ಪುನರಾಗಮನವನ್ನು ಮಾಡಿ, 2ನೇ ಸೆಟ್ಟನ್ನು 6-7 ರಲ್ಲಿ ಗೆದ್ದುಕೊಂಡಿತು.

ಹೀಗಾಗಿ ಮೂರನೇ ಸೆಟ್‌ನಲ್ಲಿ ರೋಚಕತೆ ಹೆಚ್ಚಾಗಿತ್ತಾದರೂ. ಅಂತಿಮವಾಗಿ ಜ್ಯಾಕ್ ಮತ್ತು ಫ್ರಾನ್ಸಿಸ್ ಜೋಡಿ ಫೆಡರರ್ ಮತ್ತು ನಡಾಲ್ ವಿರುದ್ಧ ಮೂರನೇ ಸೆಟ್ ಅನ್ನು 9-11 ರಿಂದ ಗೆದ್ದುಕೊಂಡಿತು.

ತಮ್ಮ ವಿದಾಯದ ಪಂದ್ಯದ ಬಳಿಕ ಮಾತನಾಡಿದ ಫೆಡರರ್, ಇದು ನನಗೆ ಬಿಗ್ ಡೇ ಆಗಿದ್ದು, ನನಗೆ ಯಾವುದೇ ದುಃಖವಿಲ್ಲ. ನಾನು ಸಂತೋಷವಾಗಿದ್ದೇನೆ. ಈ ಕ್ಷಣದಲ್ಲಿ ಇಲ್ಲಿ ನಿಂತಿರುವುದು ತುಂಬಾ ಖುಷಿಕೊಡುತ್ತಿದೆ. ಎಲ್ಲಾ ಪಂದ್ಯಗಳಲ್ಲಿ ಸಂತೋಷದ ಸಂದರ್ಭ ಎದುರಾಗಿದೆ. ನಮ್ಮ ಹುಡುಗರು, ಫ್ಯಾನ್ಸ್, ಕುಟುಂಬಸ್ಥರು, ಸ್ನೇಹಿತರು ಎಲ್ಲರೂ ನನ್ನೊಂದಿಗಿದ್ದಾರೆ. ಹೀಗಾಗಿ ನಾನು ಯಾವತ್ತೂ ಹೆಚ್ಚು ಒತ್ತಡ ಅನುಭವಿಸಿಲ್ಲ. ನಾನು ಇಷ್ಟು ಸಾಧನೆ ಮಾಡಿದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದು ಕಣ್ಣೀರಿಟ್ಟರು.

41 ವರ್ಷದ ಫೆಡರರ್ ಕಳೆದ ವಾರವಷ್ಟೇ ಸಾಮಾಜಿಕ ಮಾಧ್ಯಮಗಳ ಮೂಲಕ ನಿವೃತ್ತಿ ಘೋಷಿಸಿದ್ದರು. ಲೇವರ್ ಕಪ್‌ಗೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಫೆಲ್ ನಡಾಲ್ ಜೊತೆ ಡಬಲ್ಸ್ ಆಡುವುದು ನನ್ನ ಕನಸು ಎಂದು ಹೇಳಿದ್ದ ಫೆಡರರ್, ವಿದಾಯದ ಪಂದ್ಯದಲ್ಲಿ ನಡಾಲ್ ಜೊತೆ ಟೆನಿಸ್ ಕೋರ್ಟ್ಗೆ ಇಳಿದಿದ್ದರು.