ಗೋಲುಗಳ ಶತಕ ಬಾರಿಸಿದ ಕ್ರಿಸ್ಟಿಯಾನೊ ರೊನಾಲ್ಡೊ!

ಗೋಲುಗಳ ಶತಕ ಬಾರಿಸಿದ ಕ್ರಿಸ್ಟಿಯಾನೊ ರೊನಾಲ್ಡೊ!

ಫುಟ್​ಬಾಲ್ ಮಾಂತ್ರಿಕ ಕ್ರಿಸ್ಟಿಯಾನೊ ರೊನಾಲ್ಡೊ ಅಪರೂಪದ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಪೋರ್ಚುಗಲ್​ನ ಈ ಅಪ್ರತಿಮ ಆಟಗಾರ ಅಂತರರಾಷ್ಟ್ರೀಯ ಸಾಕರ್ ಪಂದ್ಯಗಳಲ್ಲಿ 100 ಗೋಲುಗಳನ್ನು ಬಾರಿಸಿರುವ ವಿಶ್ವದ ಕೇವಲ ಎರಡನೇ ಆಟಗಾರನೆನಿಸಿಕೊಳ್ಳುವ ಮೂಲಕ ಕ್ರೀಡೆಯ ಇತಿಹಾಸದಲ್ಲಿ ಅಚ್ಚಳಿಯದ ದಾಖಲೆಯನ್ನು ಸ್ಥಾಪಿಸಿದ್ದಾರೆ

ಪ್ರಾಯಶಃ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಶತಕ ಬಾರಿಸುವುದು ಎಷ್ಟು ಕಠಿಣವೋ ಫುಟ್ಬಾಲ್ ಪಂದ್ಯಗಳಲ್ಲಿ ಗೋಲು ಬಾರಿಸುವುದು ಕೂಡ ಅಷ್ಟೇ ಪ್ರಯಾಸಕರ. ಈ ಹಿನ್ನೆಲೆಯಿಂದ ನೋಡಿದರೆ ರೊನಾಲ್ಡೊ ಮಾಡಿರುವ ಸಾಧನೆ ನಮ್ಮ ಗ್ರಹಿಕೆಗೆ ಸಿಗುತ್ತದೆ. ಬುಧವಾರದಂದು ಸ್ವೀಡನ್ ವಿರುದ್ಧ ನಡೆದ ನೇಷನ್ಸ್ ಲೀಗ್ ಪಂದ್ಯದಲ್ಲಿ ಪೋರ್ಚುಗಲ್ 2-0 ಗೋಲುಗಳ ಜಯ ಸಾಧಿಸಿತು. ಆ ಎರಡೂ ಗೋಲುಗಳನ್ನು ಬಾರಿಸಿದ 36 ವರ್ಷ ವಯಸ್ಸಿನ ರೊನಾಲ್ಡೊ, ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ತಾವು ಬಾರಿಸಿದ ಗೋಲುಗಳ ಸಂಖ್ಯೆಯನ್ನು 101ಕ್ಕೇರಿಸಿಕೊಂಡರು. ಇರಾನಿನ ಸರ್ವಶ್ರೇಷ್ಠ ಸಾಕರ್ ಆಟಗಾರ ಅಲಿ ದಾಯಿ ಮಾತ್ರ ರೊನಾಲ್ಡೊಗಿಂತ ಜಾಸ್ತಿ ಗೋಲುಗಳನ್ನು (109) ಬಾರಿಸಿದ್ದಾರೆ.

caption

ಅಲಿ ದಾಯಿ

ಅಂದಹಾಗೆ, ಪ್ರಸಕ್ತ ಆಟಗಾರರ ಪೈಕಿ ಗೋಲು ಗಳಿಕೆಯ ವಿಷಯದಲ್ಲಿ ರೊನಾಲ್ಡೊಗೆ ಹತ್ತಿರವಿರುವ ಆಟಗಾರ ಒಬ್ಬ ಭಾರತೀಯನೆಂದರೆ ನೀವು ನಂಬಲಿಕ್ಕಿಲ್ಲ. ಹೌದು, ಭಾರತೀಯ ತಂಡದ ಕ್ಯಾಪ್ಟನ್ ಸುನಿಲ್ ಛೆತ್ರಿ 72 ಅಂತರರಾಷ್ಟ್ರೀಯ ಗೋಲುಗಳೊಂದಿಗೆ ರೊನಾಲ್ಡೊ ನಂತರದ ಸ್ಥಾನದಲ್ಲಿದ್ದಾರೆ. ಪೋರ್ಚುಗಲ್ ಆಟಗಾರನಷ್ಟೇ ಖ್ಯಾತಿಯ ಅರ್ಜೆಂಟೀನಾದ ಲಿಯೊನೆಲ್ ಮೆಸ್ಸಿ 70 ಗೋಲುಗಳನ್ನು ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಫುಟ್​ಬಾಲ್ ದಂತಕಥೆ ಬ್ರೆಜಿಲ್​ನ ಪೀಲೆ ರೊನಾಲ್ಡೊನನ್ನು ಅಭಿನಂದಿಸಿದವರಲ್ಲಿ ಮೊದಲಿಗರಾಗಿದ್ದಾರೆ. ತನ್ನ ಅಮೋಘ ಸಾಕರ್ ಕರೀಯರನ್ನು 77 ಅಂತರರಾಷ್ಟ್ರೀಯ ಗೋಲುಗಳೊಂದಿಗೆ ನಿವೃತ್ತಿಗೊಳಿಸಿದ ಪೀಲೆ, ‘‘100ನೇ ಗೋಲನ್ನು ನಿರೀಕ್ಷಿಸಲಾಗಿತ್ತು, ಆದರೆ ರೊನಾಲ್ಡೊ ತನ್ನ ಟ್ಯಾಲಿಯನ್ನು 101ಕ್ಕೆ ಏರಿಸಿಕೊಂಡಿದ್ದಾನೆ. ಅವನಿಗೆ ಅಭಿನಂದನೆಗಳು,’’ ಎಂದು ಟ್ವೀಟ್ ಮಾಡಿದ್ದಾರೆ.

caption

ಸುನಿಲ್ ಛೆತ್ರಿ

 

 

 

 

 

 

 

 

 

 

 

 

Click on your DTH Provider to Add TV9 Kannada