CPL 2020 final: ಕೆರಿಬಿಯನ್ ದ್ವೀಪದಲ್ಲಿ ಶಾರುಕ್ ತಂಡದ ವಿಜಯ ಪತಾಕೆ

  • Publish Date - 8:58 am, Fri, 11 September 20
CPL 2020 final: ಕೆರಿಬಿಯನ್ ದ್ವೀಪದಲ್ಲಿ ಶಾರುಕ್ ತಂಡದ ವಿಜಯ ಪತಾಕೆ

ಸೇಂಟ್ ಲೂಸಿಯಾ ಮತ್ತು ಟ್ರಿನಿಬಾಗೋ ನೈಟ್ ರೈಡರ್ಸ್ ನಡುವಿನ ಕೆರಿಬಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯ ರಣರೋಚಕತೆಯಿಂದ ಕೂಡಿತ್ತು.

ಬ್ರಿಯಾನ್ ಲಾರಾ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಟ್ರಿನಿಗೊ ನೈಟ್ ರೈಡರ್ಸ್, ಸೇಂಟ್ ಲೂಸಿಯಾ ತಂಡವನ್ನ ಬ್ಯಾಟಿಂಗ್​ಗೆ ಆಹ್ವಾನಿಸಿತು. ಮೊದಲು ಬ್ಯಾಟಿಂಗ್​ಗಿಳಿದ ಸೇಂಟ್ ಲೂಸಿಯಾ ಪರ ಆರಂಭಿಕ ಬ್ಯಾಟ್ಸ್​ಮನ್ ರಖೀಮ್ ಕಾರ್ನವಾಲ್ ಕೇವಲ 8 ರನ್​ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ರು.

2ನೇ ವಿಕೆಟ್​ಗೆ ಜೊತೆಯಾದ ಮಾರ್ಕ್ ಡಯಾಲ್ ಮತ್ತು ಆಂಡ್ರೂ ಫ್ಲೆಚರ್ ತಂಡಕ್ಕೆ ಚೇತರಿಕೆ ನೀಡಿದ್ರು. ಡಯಾಲ್ 29 ರನ್​ಗಳಿಸಿದ್ರೆ, ಫ್ಲೆಚರ್ 39 ರನ್​ಗಳಿಸಿದ್ರು. ನಂತರ ಬಂದ ರೋಸ್ಟನ್ ಚೇಸ್ 22 ರನ್ ಮತ್ತು ನಜೀಬುಲ್ಲಾ 24 ರನ್​ಗಳಿಸಿ, ಸೇಂಟ್ ಲೂಸಿಯಾ ತಂಡಕ್ಕೆ ಚೇತರಿಕೆ ನೀಡಿದ್ರು.

ಸೇಂಟ್ ಲೂಸಿಯಾ ಪರ ಆರಂಭದಲ್ಲಿ ನಾಲ್ವರು ಬ್ಯಾಟ್ಸ್​ಮನ್​ಗಳು ಮಿಂಚಿದ್ದು ಬಿಟ್ರೆ, ನಂತರ ಬಂದ ಆರು ಬ್ಯಾಟ್ಸ್​ಮನ್​ಗಳು ಒಂದಂಕಿ ಮೊತ್ತಕ್ಕೆ ಔಟಾದ್ರು. ನಾಯಕ ಕೆರಾನ್ ಪೊಲ್ಲಾರ್ಡ್, ಘಾತಕ ಬೌಲಿಂಗ್​ಗೆ ಡ್ಯಾರೇನ್ ಸ್ಯಾಮಿ ಪಡೆ 19.1 ಓವರ್​ಗಳಿಗೆ 154 ರನ್​ಗಳಿಗೆ ಆಲೌಟ್ ಆಯ್ತು.

155 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಟ್ರನಿಬಾಗೋ ನೈಟ್ ರೈಡರ್ಸ್ ಆರಂಭದಲ್ಲೇ 5 ರನ್​ಗಳಿಸಿದ್ದ ವೆಬ್​ಸ್ಟರ್ ಮತ್ತು 4 ರನ್​ಗಳಿಸಿದ್ದ ಸೀಫರ್ಟ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯ್ತು. ಆದ್ರೆ 3ನೇ ವಿಕೆಟ್​ಗೆ ಜೊತೆಯಾದ ಡ್ಯಾರೇನ್ ಬ್ರ್ಯಾವೋ ಮತ್ತು ಲಿಂಡ್ಲ್ ಸಿಮನ್ಸ್, ಸೇಂಟ್ ಲೂಸಿಯಾ ಬೌಲರ್​ಗಳನ್ನ ಲಾರಾ ಮೈದಾನದಲ್ಲಿ ಚೆಂಡಾಡಿ ತಲಾ ಅರ್ಧಶತಕ ಸಿಡಿಸಿ ಸಂಭ್ರಮಿಸಿದ್ರು.

ಶಾರುಕ್ ಮಾಲೀಕತ್ವದ ಟ್ರಿನಿಬಾಗೋ ತಂಡವನ್ನ ಚಾಂಪಿಯನ್ ಮಾಡೋದು ನಾವಿಬ್ರೆ ಅನ್ನೋ ಹಾಗೇ ಬ್ಯಾಟಿಂಗ್ ಮಾಡಿದ ಈ ಜೋಡಿ, 18.1ನೇ ಓವರ್​ಗಳಲ್ಲೇ ಗೆಲುವು ತಂದುಕೊಟ್ರು. ಭರ್ಜರಿ 8 ವಿಕೆಟ್​ಗಳ ಗೆಲುವಿನೊಂದಿಗೆ ಶಾರುಕ್ ಮಾಲೀಕತ್ವದ ನೈಟ್ ರೈಡರ್ಸ್ ತಂಡ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ 4ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಸಾಧನೆ ಮಾಡಿತು.

Click on your DTH Provider to Add TV9 Kannada