IPL 2021 Auction: RCB ಖರೀದಿಸಿದ 7 ಆಟಗಾರರು ಇವರೇ..

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 18, 2021 | 9:03 PM

Royal Challengers Bangalore: ಈ ಬಾರಿ ಆರ್​ಸಿಬಿ ಆಲ್​ರೌಂಡರ್​ಗಳ ಮೇಲೆ ಹೆಚ್ಚು ಒತ್ತು ನೀಡಿದೆ. ಹಾಗಾದರೆ, ಆರ್​ಸಿಬಿ ಸೇರಿದ ಆಟಗಾರರು ಯಾರು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

IPL 2021 Auction: RCB ಖರೀದಿಸಿದ 7 ಆಟಗಾರರು ಇವರೇ..
ಸಂಗ್ರಹ ಚಿತ್ರ
Follow us on

35.90 ಕೋಟಿ ರೂಪಾಯಿಯನ್ನು ಕೈಲಿಟ್ಟುಕೊಂಡು ಹರಾಜಿಗೆ ಇಳಿದಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಘಟಾನುಘಟಿ ಆಟಗಾರರನ್ನು ಖರೀದಿಸಿದೆ. ಇದರ ಜತೆಗೆ, ಹೊಸ ಆಟಗಾರರಿಗೂ ಆದ್ಯತೆ ನೀಡಿದೆ. ಐಪಿಎಲ್​ ಹರಾಜು ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಆರ್​ಸಿಬಿ ಕೂಡ ಕೆಲ ಆಟಗಾರರನ್ನು ಖರೀದಿಸಿದೆ. ಈ ಬಾರಿ ಆರ್​ಸಿಬಿ ಆಲ್​ರೌಂಡರ್​ಗಳ ಮೇಲೆ ಹೆಚ್ಚು ಒತ್ತು ನೀಡಿದೆ. ಹಾಗಾದರೆ, ಆರ್​ಸಿಬಿ ಸೇರಿದ ಆಟಗಾರರು ಯಾರು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಗ್ಲೆನ್​ ಮ್ಯಾಕ್ಸ್​ವೆಲ್: ಈ ಬಾರಿಯ ಐಪಿಎಲ್​ 2021 ಹರಾಜು ಪ್ರಕ್ರಿಯೆಯಲ್ಲಿ ಗ್ಲೆನ್​ ಮ್ಯಾಕ್ಸ್​ವೆಲ್ ಭಾರೀ ಬೇಡಿಕೆ ವ್ಯಕ್ತವಾಗಿದೆ. ಗ್ಲೆನ್​ ಮ್ಯಾಕ್ಸ್​ವೆಲ್​ ಮೂಲ ಬೆಲೆ 2 ಕೋಟಿ ರೂಪಾಯಿ ಇತ್ತು. ಇವರನ್ನು ಖರೀದಿ ಮಾಡಲು ಚೆನ್ನೈ ಹಾಗೂ ಬೆಂಗಳೂರು ನಡುವೆ ಭಾರೀ ಕಾಂಪಿಟೇಷನ್​ ಇತ್ತು. ಕೊನೆಗೆ, 14.25 ಕೋಟಿ ರೂಪಾಯಿಗೆ ರಾಯಲ್​ ಚಾಲೆಂಜರ್ಸ್​ ತಂಡದ ಪಾಲಾಗಿದ್ದಾರೆ. ಇವರು ಆಲ್​ರೌಂಡರ್​ ಎನ್ನುವ ಕಾರಣಕ್ಕೆ ಆರ್​ಸಿಬಿ ಇವರನ್ನು ಖರೀದಿಸಿದೆ.

ಕೈಲ್‌ ಜೇಮಿಸ್ಸನ್: ನ್ಯೂಜಿಲೆಂಡ್​ನ ಕೈಲ್‌ ಜೇಮಿಸ್ಸನ್ ಅವರನ್ನು 15 ಕೋಟಿ ರೂಪಾಯಿಗೆ ಆರ್​ಸಿಬಿ ಖರೀದಿಸಿದೆ. ಪಂಜಾಬ್ ಕಿಂಗ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ತಂಡದ ನಡುವೆ ಬಿಡ್ಡಿಂಗ್‌ ವಾರ್‌ ನಡೆಸಿದ ಆರ್‌ಸಿಬಿ ಭಾರಿ ಪೈಪೋಟಿ ಕೊಟ್ಟು ‌ಕೈಲ್‌ ಜೇಮಿಸ್ಸನ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಡ್ಯಾನಿಯಲ್​ ಕ್ರಿಶ್ಚಿಯನ್: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ 4.80 ಕೋಟಿ ರೂಪಾಯಿ ನೀಡಿ ಡ್ಯಾನಿಯಲ್​ ಕ್ರಿಶ್ಚಿಯನ್​ ಅವರನ್ನು ಖರೀದಿಸಿದೆ ಕೊಲ್ಕತ್ತಾ ಹಾಗೂ ಬೆಂಗಳೂರು ತಂಡ ಡ್ಯಾನಿಯಲ್​ ಅವರಿಗಾಗಿ ಸೆಣಸಾಟ ನಡೆಸಿದ್ದವು. ಆದರೆ ಅಂತಿಮವಾಗಿ ಡ್ಯಾನಿಯಲ್​ ಕ್ರಿಶ್ಚಿಯನ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪಾಲಾದರು.

ಮೊಹಮ್ಮದ್​ ಅಜರುದ್ದೀನ್​: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ವಿರುದ್ಧ 137 ರನ್​ ಸಿಡಿಸಿ ಮೆಚ್ಚುಗೆಗೆ ಪಾತ್ರರಾಗಿದ್ದವರು ಕೇರಳದ ಮೊಹಮ್ಮದ್ ಅಜರುದ್ದೀನ್​. ಮಧ್ಯಮ ಕ್ರಮಾಂಕದಲ್ಲಿ ಆಡುವ ಚಾಕಚಕ್ಯತೆ ಮೊಹಮ್ಮದ್ ಅಜರುದ್ದೀನ್​ಗೆ ಇದೆ. ಹೀಗಾಗಿ, ಸಂಕಷ್ಟದ ಸಮಯದಲ್ಲಿ ಆಟದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಮೊಹಮ್ಮದ್​ಗೆ ಇದೆ. ಇವರನ್ನು ಆರ್​ಸಿಬಿ 20 ಲಕ್ಷ ರೂಪಾಯಿಗೆ ಕೊಂಡುಕೊಂಡಿದೆ.

ಸುಯಶ್​ ಪ್ರಭುದೇಸಾಯಿ: 1997ರಲ್ಲಿ ಜನಿಸಿದ ಸುಯಶ್​ ಪ್ರಭುದೇಸಾಯಿ 2017ರಲ್ಲಿ ವಿಜಯ್​ ಹಜಾರೆ ಟ್ರೋಫಿಯಲ್ಲಿ ಗೋವಾ ಪರವಾಗಿ ಆಡಿದ್ದರು. 2018-19ರಲ್ಲಿ ರಣಜಿ ಟ್ರೋಫಿ ಆಡಿದ್ದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮೂಲಕ ಟಿ20ಗೆ ಪಾದಾರ್ಪಣೆ ಮಾಡಿದ್ದರು. ಇಂಡು ನಡೆದ ಹರಾಜಿನಲ್ಲಿ, ಪ್ರಭುದೇಸಾಯಿ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಲಕ್ಷ ರೂಪಾಯಿಗೆ ಖರೀದಿಸಿತು.

ಕೆ.ಎಸ್.​ಭರತ್​: ಆಂಧ್ರ ಪ್ರದೇಶ ಕ್ರಿಕೆಟ್​ ತಂಡವನ್ನು ಪ್ರತಿನಿಧಿಸುತ್ತಿರುವ ಕೆ.ಎಸ್​. ಭರತ್​ ಅವರನ್ನು ಆರ್​ಸಿಬಿ ಖರೀದಿಸಿದೆ. ರಣಜಿ ಟ್ರೋಫಿಯಲ್ಲಿ ತ್ರಿಶತಕ ಬಾರಿಸಿದ ಖ್ಯಾತಿ ಇವರಿಗಿದೆ. ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಗೆ ಭಾರತದ ಸ್ಟ್ಯಾಂಡ್​ ಬೈ ಆಟಗಾರರಾಗಿ ಕೆ.ಎಸ್.​ ಭರತ್ ಆಯ್ಕೆಯಾಗಿದ್ದಾರೆ.

ಸಚಿನ್​ ಬೇಬಿ: ಸಚಿನ್​ ಬೇಬಿ ಅವರನ್ನು 20 ಲಕ್ಷ ರೂಪಾಯಿಗೆ ಆರ್​ಸಿಬಿ ಖರೀದಿಸಿದೆ. ವಿವಿಧ ಟೂರ್ನಿಗಳಲ್ಲಿ ಕೇರಳ ತಂಡದ ಪರವಾಗಿ​ ಆಡುತ್ತಿರುವ ಇವರು ಉತ್ತಮ ದಾಖಲೆ ಹೊಂದಿದ್ದಾರೆ. ರಾಜಸ್ಥಾನ್​ ರಾಯಲ್ಸ್​ 2013ರಲ್ಲಿ ಇವರನ್ನು ಖರೀದಿ ಮಾಡಿತ್ತು. ಆದರೆ, ಒಂದು ಪಂದ್ಯ ಆಡಲು ಮಾತ್ರ ಅವಕಾಶ ಸಿಕ್ಕಿತ್ತು. 2016ರಲ್ಲಿ ಆರ್​ಸಿಬಿ ಇವರನ್ನು ಖರೀದಿಸಿತ್ತು. 2018ರಲ್ಲಿ ಹೈದರಾಬಾದ್​ ಖರೀದಿಸಿದರೆ, ಈ ವರ್ಷ ಮತ್ತೆ ಆರ್​ಸಿಬಿ ಇವರನ್ನು ಪಡೆದುಕೊಂಡಿದೆ.

ಇದನ್ನೂ ಓದಿ: IPL Auction 2021; RCB 2 ಆಟಗಾರರಿಗೆ ಖರ್ಚು ಮಾಡಿದ್ದು ಬರೋಬ್ಬರಿ 30 ಕೋಟಿ ರೂಪಾಯಿ!