ಸಿಎಸ್ಕೆ ಸೋಲಿಗೆ ರುತುರಾಜ್ ಗಾಯಕ್ವಾಡ್ ದೂರಿದ್ದು ಯಾರನ್ನ ಗೊತ್ತಾ?
IPL 2026, CSK vs PBKS: ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಐಪಿಎಲ್ನ 7ನೇ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 209 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ 18.4 ಓವರ್ಗಳಲ್ಲಿ 210 ರನ್ಗಳಿಸಿ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 7ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ ತಂಡವು 20 ಓವರ್ಗಳಲ್ಲಿ 209 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ 18.4 ಓವರ್ಗಳಲ್ಲಿ 210 ರನ್ಗಳಿಸಿ 5 ವಿಕೆಟ್ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಸಿಎಸ್ಕೆ ತಂಡವು ಬ್ಯಾಕ್ ಟು ಬ್ಯಾಕ್ 2 ಪಂದ್ಯಗಳಲ್ಲಿ ಸೋಲನುಭವಿಸಿದಂತಾಗಿದೆ.
ಈ ಸೋಲಿನ ಬಳಿಕ ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್, ನಮ್ಮ ತಂಡವು ಕಲೆಹಾಕಿದ ಮೊತ್ತವು ಆ ಪಿಚ್ಗೆ ಅತ್ಯುತ್ತಮವಾಗಿತ್ತು. “ನನ್ನ ಪ್ರಕಾರ ಇದು ನಿಜಕ್ಕೂ ಒಂದು ಒಳ್ಳೆಯ ಸ್ಕೋರ್. ವಿಕೆಟ್ ವೇಗದ ಬೌಲರ್ಗಳಿಗೆ ಸಹಕಾರಿಯಾಗಿದ್ದರೂ, ಸ್ಪಿನ್ನರ್ಗಳಿಗೂ ಚೆಂಡು ಸ್ವಲ್ಪ ಗ್ರಿಪ್ ನೀಡುತ್ತಿತ್ತು. ಮೈದಾನದ ಬೌಂಡರಿಗಳು ದೊಡ್ಡದಾಗಿದ್ದರಿಂದ, ಈ ಮೊತ್ತವನ್ನು ರಕ್ಷಿಸಿಕೊಳ್ಳಬಹುದು ಎಂಬ ನಂಬಿಕೆ ನನಗಿತ್ತು.
ಆದರೆ ನಮ್ಮ ಬೌಲರ್ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಪಂದ್ಯದ ಸೋಲಿಗೆ ಪ್ರಮುಖವಾಗಿ ಬೌಲಿಂಗ್ ವಿಭಾಗದ ಹಿನ್ನಡೆಯೇ ಕಾರಣ. ತಂಡವು ಮೂವರು ವೇಗಿಗಳು ಮತ್ತು ಇಬ್ಬರು ಪ್ರತಿಭಾವಂತ ರಿಸ್ಟ್ ಸ್ಪಿನ್ನರ್ಗಳೊಂದಿಗೆ ಕಣಕ್ಕಿಳಿದಿತ್ತು. ಪವರ್ಪ್ಲೇ ನಂತರ ಮಧ್ಯದ ಓವರ್ಗಳಲ್ಲಿ ಸ್ಪಿನ್ನರ್ಗಳು ಪಂದ್ಯದ ಮೇಲೆ ಹಿಡಿತ ಸಾಧಿಸುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ, “ಇಬ್ಬರೂ ಸ್ಪಿನ್ನರ್ಗಳು ಇಂದು ಸರಿಯಾಗಿ ಬೌಲಿಂಗ್ ಮಾಡಿರಲಿಲ್ಲ/ ಅದು ನಮಗೆ ದೊಡ್ಡ ಹೊಡೆತ ನೀಡಿತು,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಬಗ್ಗೆ ಮಾತನಾಡುತ್ತಾ, “ನಾವು ಸರಿಯಾದ ಸಮಯದಲ್ಲಿ ಒತ್ತಡ ಹೇರಲು ವಿಫಲವಾದೆವು. ಎದುರಾಳಿ ತಂಡದ ರನ್ ರೇಟ್ ಪ್ರತಿ ಓವರ್ಗೆ 11ಕ್ಕೆ ಏರಿದಾಗ, ನಮಗೆ ಒಂದೆರಡು ಒಳ್ಳೆಯ ಓವರ್ಗಳ ಅಗತ್ಯವಿತ್ತು. ಆದರೆ ಅದೇ ಹೊತ್ತಿಗೆ ಬೌಂಡರಿ ಅಥವಾ ಸಿಕ್ಸರ್ ಬಿಟ್ಟುಕೊಟ್ಟಿದ್ದರಿಂದ ಒತ್ತಡ ಕಡಿಮೆಯಾಯಿತು. ಆ ವೇಗವನ್ನು ತಡೆಯಲು ನಮಗೆ ಸಾಧ್ಯವಾಗಲಿಲ್ಲ,” ಎಂದಿದ್ದಾರೆ.
ಈ ಸೋಲಿನ ನಡುವೆಯೂ ತಂಡದ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಗಾಯಕ್ವಾಡ್ ಸಂತಸ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಯುವ ಆಟಗಾರ ಆಯುಷ್ ಮ್ಹಾತ್ರೆ ಮತ್ತು ಶಿವಂ ದುಬೆ ಅವರ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, “ಆಯುಷ್ ಅದ್ಭುತವಾಗಿ ಆಡಿದರು. ಅವರ ಈ ಆತ್ಮವಿಶ್ವಾಸ ಮುಂದಿನ ಪಂದ್ಯಗಳಿಗೆ ತಂಡಕ್ಕೆ ಪ್ಲಸ್ ಪಾಯಿಂಟ್. ಶಿವಂ ದುಬೆ ಕೂಡ ಉತ್ತಮ ಲಯದಲ್ಲಿದ್ದಾರೆ,” ಎಂದು ಹೇಳಿದ್ದಾರೆ.
ಇನ್ನು ತನ್ನ ನಿಧಾನಗತಿಯ ಬ್ಯಾಟಿಂಗ್ ಬಗ್ಗೆ ಸ್ಪಷ್ಟನೆ ನೀಡಿದ ರುತುರಾಜ್ ಗಾಯಕ್ವಾಡ್, ಪಿಚ್ನ ಪರಿಸ್ಥಿತಿಗೆ ತಕ್ಕಂತೆ ಆಂಕರ್ ಪಾತ್ರ ವಹಿಸಲು ಬಯಸಿದ್ದಾಗಿ ತಿಳಿಸಿದರು. ಒಂದು ತುದಿಯಲ್ಲಿ ಆಯುಷ್ ವೇಗವಾಗಿ ರನ್ ಗಳಿಸುತ್ತಿದ್ದಾಗ, ನಾನು ಕ್ರೀಸ್ನಲ್ಲಿ ಗಟ್ಟಿಯಾಗಿ ನಿಂತು ನಂತರ ದೊಡ್ಡ ಹೊಡೆತಗಳಿಗೆ ಮುಂದಾಗುವ ಯೋಜನೆಯಲ್ಲಿದೆ. ಆದರೆ ದುರದೃಷ್ಟವಶಾತ್ ನನ್ನ ಲೆಕ್ಕಾಚಾರ ತಲೆಕೆಳಗಾಯಿತು ಎಂದರು.
ಇದನ್ನೂ ಓದಿ: RCB ಬರೋಬ್ಬರಿ 72 ವರ್ಷ ತೆಗೆದುಕೊಳ್ಳಲಿದೆ… ರಾಯುಡು ವ್ಯಂಗ್ಯ
ಒಟ್ಟಾರೆಯಾಗಿ, ಬ್ಯಾಟಿಂಗ್ನಲ್ಲಿ ಲಯ ಕಂಡುಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್, ಬೌಲಿಂಗ್ ವಿಭಾಗದಲ್ಲಿ ಶಿಸ್ತು ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ನಾಯಕ ರುತುರಾಜ್ ಗಾಯಕ್ವಾಡ್ ಅಭಿಪ್ರಾಯಪಟ್ಟಿದ್ದಾರೆ.




