ಎರಡು ದಶಕಗಳಿಗೂ ಹೆಚ್ಚು ಕಾಲ ಟೆನಿಸ್ ಅಂಗಳದಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿರುವ ಸೆರೆನಾ ವಿಲಿಯಮ್ಸ್ (Serena Williams) ಸೋಲಿನೊಂದಿಗೆ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಯುಎಸ್ ಓಪನ್ನ ಮೂರನೇ ಸುತ್ತಿನಲ್ಲಿ ಅಜ್ಲಾ ಟೊಮ್ಲಜಾನೊವಿಕ್ ಸೋಲನುಭವಿಸಿದರು. ಇದರೊಂದಿಗೆ ಟೆನಿಸ್ ಅಂಗಳದ ರಾಣಿಯಾಗಿ ಮೆರೆದಿದ್ದ 23 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಕಣ್ಣೀರಿನೊಂದಿಗೆ ವಿದಾಯ ಹೇಳಿದರು.
ಮೂರು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಈ ಪಂದ್ಯದಲ್ಲಿ ಅನುಭವಿ ಸೆರೆನಾ ವಿಲಿಯಮ್ಸ್ ವಿರುದ್ದ ಅಜ್ಲಾ ಟೊಮ್ಲಜಾನೊವಿಕ್ ಉತ್ತಮ ಪ್ರದರ್ಶನ ನೀಡಿದರು. 7-5, 6-7(4), 6-1 ಸೆಟ್‌ಗಳಿಂದ ಮಣಿಸುವ ಮೂಲಕ ಅಂತಿಮವಾಗಿ ಅಜ್ಲಾ ಗೆಲುವಿನ ನಗೆ ಬೀರಿದರು.
ಪಂದ್ಯದ ಬಳಿಕ ಮಾತನಾಡಿದ ಸೆರೆನಾ ವಿಲಿಯಮ್ಸ್, ಇದು ನನ್ನ ಪಾಲಿಗೆ ಅತ್ಯಂತ ಅದ್ಭುತವಾದ ಪ್ರಯಾಣವಾಗಿದೆ. ಸೆರೆನಾ, ಕಮಾನ್ ಎಂದು ನನ್ನನ್ನು ಪ್ರೋತ್ಸಾಹಿಸಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಎಲ್ಲರಿಗೂ ಧನ್ಯವಾದ ಎಂದೇಳುತ್ತಾ ಕಣ್ಣೀರಿನೊಂದಿಗೆ ಟೆನಿಸ್ ಅಂಗಳದ ರಾಣಿ ಅಭಿಮಾನಿಗಳತ್ತ ಕೈ ಬೀಸಿದರು.
1999 ರಲ್ಲಿ ಮೊದಲ ಬಾರಿಗೆ US ಓಪನ್‌ನಲ್ಲಿ ಆಡಿದ್ದಾಗ ಸೆರೆನಾ ವಿಲಿಯಮ್ಸ್ ಅವರಿಗೆ ಕೇವಲ 17 ವರ್ಷ ವಯಸ್ಸಾಗಿತ್ತು. ಇದೀಗ ಇದೇ ತಿಂಗಳು ಸೆರೆನಾ 41ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಇದರ ನಡುವೆ 23 ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಗುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದರು ಎಂಬುದು ವಿಶೇಷ.