IND vs PAK: ಪಾಕ್ ವಿರುದ್ಧದ ಪಂದ್ಯಕ್ಕೆ ಟೀಮ್ ಇಂಡಿಯಾದ ಪ್ರಮುಖ ಬೌಲರ್ ಅನುಮಾನ..!
India vs Pakistan: ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಿಂದ ಕೈ ಬಿಡುವ ಸಾಧ್ಯತೆ ಹೆಚ್ಚು. ಅದರಂತೆ ಭಾರತ ತಂಡವು 2 ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬರಲಿದೆ.
Asia Cup 2022: ಏಷ್ಯಾಕಪ್ನಲ್ಲಿ ಇಂದು (ಸೆ.4) ನಡೆಯಲಿರುವ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ (India vs Pakistan) ತಂಡಗಳು ಮುಖಾಮುಖಿಯಾಗಲಿವೆ. ಆಗಸ್ಟ್ 28 ರಂದು ನಡೆದ ರೋಚಕ ಪಂದ್ಯದಲ್ಲಿ ಭಾರತ ತಂಡವು ಕೊನೆಯ ಓವರ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ 5 ವಿಕೆಟ್ಗಳಿಂದ ಜಯ ಸಾಧಿಸಿತ್ತು. ಇದೀಗ ಸೂಪರ್-4 ಹಂತದಲ್ಲೂ ಕೂಡ ಉಭಯ ತಂಡಗಳಿಂದ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು. ಆದರೆ ಈ ಬಾರಿ ಟೀಮ್ ಇಂಡಿಯಾಗೆ ಸಂಕಷ್ಟ ಎದುರಾಗಿದೆ. ಅದೇನೆಂದರೆ ತಂಡದ ಪ್ರಮುಖ ಆಲ್ರೌಂಡರ್ ರವೀಂದ್ರ ಜಡೇಜಾ ಗಾಯಗೊಂಡು ಹೊರಗುಳಿದಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಬದಲಿ ಆಟಗಾರ ಕಣಕ್ಕಿಳಿಯುವುದು ಖಚಿತ.
ಮತ್ತೊಂದೆಡೆ ತಂಡದ ವೇಗ ಬೌಲರ್ ಅವೇಶ್ ಖಾನ್ ಕೂಡ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಹೀಗಾಗಿಯೇ ಅವರು ಶನಿವಾರ ಅಭ್ಯಾಸದಲ್ಲಿ ಕಾಣಿಸಿಕೊಂಡಿರಲಿಲ್ಲ. ಅಲ್ಲದೆ ಅವೇಶ್ ಖಾನ್ ಸಂಪೂರ್ಣವಾಗಿ ಚೇತರಿಸಿಕೊಂಡರೆ ಮಾತ್ರ ಪಾಕಿಸ್ತಾನ್ ವಿರುದ್ದ ಕಣಕ್ಕಿಳಿಯಲಿದ್ದಾರೆ ಎಂದು ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಸ್ಪಷ್ಟಪಡಿಸಿದ್ದಾರೆ.
ಹೀಗಾಗಿ ಪಾಕ್ ವಿರುದ್ದದ ಇಂದಿನ ಪಂದ್ಯದಲ್ಲಿ ಅವೇಶ್ ಖಾನ್ ಕೂಡ ಆಡುವುದು ಅನುಮಾನ ಎನ್ನಬಹುದು. ಏಕೆಂದರೆ ಮಹತ್ವದ ಪಂದ್ಯಕ್ಕೂ ಮುನ್ನ ಅವೇಶ್ ಮೈದಾನದಲ್ಲಿ ಅಭ್ಯಾಸಕ್ಕಿಳಿದಿಲ್ಲ. ಹಾಗಾಗಿ ಅವರನ್ನು ಪ್ಲೇಯಿಂಗ್ ಇಲೆವೆನ್ನಿಂದ ಕೈ ಬಿಡುವ ಸಾಧ್ಯತೆ ಹೆಚ್ಚು. ಅದರಂತೆ ಟೀಮ್ ಇಂಡಿಯಾ 2 ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬರಲಿದೆ.
ಇಲ್ಲಿ ಟೀಮ್ ಇಂಡಿಯಾ ರವೀಂದ್ರ ಜಡೇಜಾ ಸ್ಥಾನದಲ್ಲಿ ಅಕ್ಷರ್ ಪಟೇಲ್ ಅಥವಾ ದೀಪಕ್ ಹೂಡಾರನ್ನು ಕಣಕ್ಕಿಳಿಸಬಹುದು. ಹಾಗೆಯೇ ಅವೇಶ್ ಖಾನ್ ಬದಲು ರವಿಚಂದ್ರನ್ ಅಶ್ವಿನ್ಗೆ ಸ್ಥಾನ ನೀಡಬಹುದು. ಈ ಮೂಲಕ ಒಟ್ಟು 6 ಬೌಲರ್ಗಳನ್ನು ಕಣಕ್ಕಿಳಿಸಲು ಟೀಮ್ ಇಂಡಿಯಾ ಪ್ಲ್ಯಾನ್ ರೂಪಿಸಬಹುದು.
ಅದರಂತೆ ವೇಗಿಗಳಾಗಿ ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್ ಹಾಗೂ ಹಾರ್ದಿಕ್ ಪಾಂಡ್ಯ ಇರಲಿದ್ದಾರೆ. ಇನ್ನು ಸ್ಪಿನ್ನರ್ಗಳಾಗಿ ಯುಜ್ವೇಂದ್ರ ಚಹಾಲ್, ಅಶ್ವಿನ್ ಹಾಗೂ ದೀಪಕ್ ಹೂಡಾರನ್ನು ಆಡಿಸುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಪಾಕ್ ವಿರುದ್ದದ ಮಹತ್ವದ ಪಂದ್ಯಕ್ಕೂ ಮುನ್ನ ಪ್ರಮುಖ ವೇಗಿ ಅನಾರೋಗ್ಯಕ್ಕೆ ಒಳಗಾಗಿರುವುದು ಟೀಮ್ ಇಂಡಿಯಾ ಪಾಲಿಗೆ ಹಿನ್ನಡೆಯಾಗಲಿದೆಯಾ ಕಾದು ನೋಡಬೇಕಿದೆ.
ಟೀಮ್ ಇಂಡಿಯಾ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್ (ವಿಕೆಟ್‌ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಯುಜ್ವೇಂದ್ರ ಚಹಲ್, ಆರ್ ಅಶ್ವಿನ್, ರವಿ ಬಿಷ್ಣೋಯ್.
ಮೀಸಲು ಆಟಗಾರರು: ದೀಪಕ್ ಚಹರ್ ಮತ್ತು ಶ್ರೇಯಸ್ ಅಯ್ಯರ್.