ನಾವು ಬೌಲರ್ ಯಾರೆಂದು ಯೋಚಿಸಲ್ಲ, ಚೆಂಡನ್ನು ಮಾತ್ರ ನೋಡುತ್ತೇವೆ: ಪತ್ರಿಕಾಗೋಷ್ಠಯಲ್ಲಿ ಶುಭ್​​ಮನ್ ಗಿಲ್

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 13, 2024 | 12:27 PM

ಬಾರ್ಡರ್- ಗವಾಸ್ಕರ್ ಸರಣಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್​ನ ದಿ ಗಬ್ಬಾದಲ್ಲಿ ನಾಳೆ (ಡಿ. 14) ಯಿಂದ ಪ್ರಾರಂಭವಾಗಲಿದೆ. ಇದೀಗ ಶುಭ್​ಮನ್ ಗಿಲ್ ಸುದ್ದಿಗೋಷ್ಠಿಯಲ್ಲಿ ತಂಡದ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಗಿಲ್ ಏನೆಲ್ಲ ಹೇಳಿದ್ದಾರೆ?. ಇಲ್ಲಿದೆ ಸಂಪೂರ್ಣ ಮಾಹಿತಿ.

ನಾವು ಬೌಲರ್ ಯಾರೆಂದು ಯೋಚಿಸಲ್ಲ, ಚೆಂಡನ್ನು ಮಾತ್ರ ನೋಡುತ್ತೇವೆ: ಪತ್ರಿಕಾಗೋಷ್ಠಯಲ್ಲಿ ಶುಭ್​​ಮನ್ ಗಿಲ್
ಶುಭ್​ಮನ್ ಗಿಲ್
Follow us on

ಭಾರತ ಕ್ರಿಕೆಟ್ ತಂಡ ಸದ್ಯ ಕಾಂಗರೂಗಳ ನಾಡಿನಲ್ಲಿ ಬೀಡುಬಿಟ್ಟಿದೆ. ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಸರಣಿ ಆಡುತ್ತಿದೆ. ಇಲ್ಲಿಯವರೆಗೆ ಎರಡು ಟೆಸ್ಟ್ ಪಂದ್ಯಗಳು ನಡೆದಿದ್ದು, ಸದ್ಯ ಸರಣಿ 1-1 ರಲ್ಲಿ ಸಮಬಲಗೊಂಡಿದೆ. ಪರ್ತ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಗೆದ್ದರೆ, ಅಡಿಲೇಡ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿದೆ. ಇದೀಗ ಮೂರನೇ ಟೆಸ್ಟ್ ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗುತ್ತಿವೆ. ಇದಕ್ಕೂ ಮುನ್ನ ಭಾರತದ ಯುವ ಆಟಗಾರ ಶುಭ್​ಮನ್ ಗಿಲ್ ಪತ್ರಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್​ನ ದಿ ಗಬ್ಬಾದಲ್ಲಿ ನಾಳೆ (ಡಿ. 14) ಯಿಂದ ಪ್ರಾರಂಭವಾಗಲಿದೆ. ಇದೀಗ ಶುಭ್​ಮನ್ ಗಿಲ್ ಸುದ್ದಿಗೋಷ್ಠಿಯಲ್ಲಿ ತಂಡದ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಆಟಗಾರರ ಮನಸ್ಥಿತಿ ಬಗ್ಗೆ ಮಾತನಾಡಿದ ಗಿಲ್, ‘ಈ ಪೀಳಿಗೆಯ ಬ್ಯಾಟರ್​ಗಳು ಯಾರು ಬೌಲಿಂಗ್ ಮಾಡುತ್ತಾರೆ ಎಂದು ಯೋಚಿಸುವುದಿಲ್ಲ, ಕೇವಲ ಚೆಂಡನ್ನು ಮಾತ್ರ ನೋಡುತ್ತಾರೆ’ ಎಂದು ಹೇಳಿ ಎದುರಾಳಿಗರಿಗೆ ಎಚ್ಚರಿಕೆ ನೀಡಿದ್ದಾರೆ.

ಅಡಿಲೇಡ್ ಟೆಸ್ಟ್‌ನಲ್ಲಿ 10 ವಿಕೆಟ್‌ಗಳ ಸೋಲು ಅನುಭವಿಸಿದ ಬಗ್ಗೆ ಮಾತನಾಡಿದ ಗಿಲ್, ಭಾರತ ತಂಡಕ್ಕೆ ಗುಲಾಬಿ ಚೆಂಡಿನ ಪರಿಚಯವಿಲ್ಲದಿರುವುದೇ ಕಾರಣ ಎಂದು ಹೇಳಿದ್ದಾರೆ. ‘‘ಗುಲಾಬಿ ಬಣ್ಣದ ಚೆಂಡನ್ನು ವಿಶೇಷವಾಗಿ ರಾತ್ರಿಯಲ್ಲಿ ಗುರುತಿಸುವುದು ನಮಗೆ ಕಷ್ಟಕರವಾಗಿತ್ತು. ನಾವು ಕೆಂಪು ಚೆಂಡಿಗೆ ಹೆಚ್ಚು ಒಗ್ಗಿಕೊಂಡಿದ್ದೇವೆ. ಈಗ 2021 ರ ನಂತರ ಗಬ್ಬಾ ಕ್ರೀಡಾಂಗಣಕ್ಕೆ ಕಾಲಿಡುವುದು ಖುಷಿ ನೀಡಿದೆ. ಇಲ್ಲಿ ವಿಕೆಟ್ ಚೆನ್ನಾಗಿ ಕಾಣುತ್ತದೆ, ನಾವು ನಾಳೆಗೆ ಸಿದ್ಧವಾಗಿದ್ದೇವೆ’’ ಎಂದು ಹೇಳಿದ್ದಾರೆ.

ಇನ್ನು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಕ್ರಿಕೆಟ್ ಆಡುವುದು ಏಕೆ ದೊಡ್ಡ ಸವಾಲು ಎಂಬುದನ್ನು ವಿವರಿಸಿದ ಗಿಲ್, ‘‘ಇಲ್ಲಿನ ಟೆಸ್ಟ್ ಪಂದ್ಯಗಳ ತೀವ್ರತೆಯು ಆಸ್ಟ್ರೇಲಿಯಾ ಪ್ರವಾಸವನ್ನು ಕಷ್ಟಕರವಾಗಿಸುತ್ತದೆ. ಇಲ್ಲಿ ನಮ್ಮ ಮನಸ್ಥಿತಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಪಿಚ್‌ಗಳು ವೇಗವಾಗಿ ಮತ್ತು ಬೌನ್ಸಿ ಆಗಿದೆ’’ ಎಂದರು.

ಇದನ್ನೂ ಓದಿ: ಹೀರೋ ಟು ವಿಲನ್; ವಿಶ್ವಕಪ್ ಹೀರೋ ಯುವಿ ಮನೆ ಮೇಲೆ ನಡೆದಿತ್ತು ಕಲ್ಲು ತೂರಾಟ

ಕಳೆದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ನಾನು ಎಡವಿದ್ದೆ. 3-4 ಓವರ್‌ ನನಗೆ ಸ್ಟ್ರೈಲ್ ಸಿಕ್ಕಿರಲಿಲ್ಲ. ಈಗ ನಾವು ಸಾಕಷ್ಟು ಆತ್ಮವಿಶ್ವಾಸದಲ್ಲಿದ್ದೇವೆ. ಹಾಗೆಯೆ ದೊಡ್ಡ ಸವಾಲು ಕೂಡ ಇದೆ. ಒಬ್ಬ ಬೌಲರ್ ನಿಮ್ಮನ್ನು ಹಿಂದಿನ ಪಂದ್ಯದಲ್ಲಿ ಔಟ್ ಮಾಡಿದ್ದರೆ, ಮುಂದಿನ ಪಂದ್ಯದಲ್ಲೂ ನೀವು ಅವರನ್ನು ಮತ್ತೆ ಎದುರಿಸುತ್ತೀರಿ. ಆದರೆ, ಆಗ ನಮಗೆ ಅವರ ಯೋಜನೆಗಳು ತಿಳಿದಿರುತ್ತದೆ. ಅವರು ಯಾವ ರೀತಿ ಬೌಲಿಂಗ್ ಮಾಡಬಹುದು ಎಂಬ ಅರಿವು ನಮಗೆ ಇರುತ್ತದೆ’’ ಎಂದು ಹೇಳಿದ್ದಾರೆ.

‘‘ಭಾರತ ಹಾಗೂ ಆಸ್ಟ್ರೇಲಿಯಾ ಹೆಚ್ಚಾಗಿ ಪಂದ್ಯಗಳನ್ನು ಆಡುತ್ತಾ ಇರುತ್ತದೆ. ಹೀಗಾಗಿ ಆಸ್ಟ್ರೇಲಿಯಾಕ್ಕೆ ನಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯ ತಿಳಿದಿದೆ. ಜೊತೆಗೆ ನಾವು ಪರಸ್ಪರರ ಯೋಜನೆಗಳ ಬಗ್ಗೆ ತಿಳಿದಿರುತ್ತೇವೆ. ನಾವು ಕಳೆದ ಕೆಲವು ಸರಣಿಗಳನ್ನು ಗೆದ್ದಿದ್ದೇವೆ. ಹೀಗಾಗಿ ಯಾವುದೇ ಭಯವಿಲ್ಲ. ನಾವು ಯಾರು ಬೌಲಿಂಗ್ ಮಾಡುತ್ತಾರೆ ಎಂಬುದನ್ನು ಮಾತ್ರ ನೋಡುತ್ತೇವೆ, ಬೌಲರ್ ಯಾರೆಂದು ಅಲ್ಲ. ನಾವು ಹೆಚ್ಚು ಆಕ್ರಮಣಕಾರಿ, ನಮ್ಮನ್ನು ನಾವು ಕಾಪಾಡಿಕೊಳ್ಳುವತ್ತ ಗಮನಹರಿಸುತ್ತೇವೆ’’ ಎಂಬುದು ಗಿಲ್ ಮಾತು.

ಹಾಗೆಯೆ ಇಂದಿನ ಪತ್ರಿಕಾಗೋಷ್ಠಿಗೆ ಟೀಮ್ ಇಂಡಿಯಾದ ಖಾಯಂ ಟೆಸ್ಟ್ ನಾಯಕ ರೋಹಿತ್ ಶರ್ಮಾ ಏಕೆ ಹಾಜರಾಗಲಿಲ್ಲ ಎಂಬುದಕ್ಕೆ ಗಿಲ್ ಸ್ಪಷ್ಟನೆ ಕೊಟ್ಟಿದ್ದಾರೆ. ಇಂದು ನಮಗೆ ಐಚ್ಛಿಕ ನೆಟ್ ಸೆಷನ್ ಆಗಿತ್ತು. ಹೀಗಾಗಿ ನಾನು ಇಲ್ಲಿದ್ದೇನೆ. ರೋಹಿತ್ ಅವರು ಇಂದು ಅಭ್ಯಾಸಕ್ಕೆ ಬಂದಿಲ್ಲ ಎಂದು ಹೇಳಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ