ಗುಕೇಶ್ ಗೆಲುವನ್ನು ಅರಗಿಸಿಕೊಳ್ಳಲಾಗದವರಿಂದ ಫಿಕ್ಸಿಂಗ್ ಆರೋಪ..!
World Chess Championship 2024: ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಡಿ.ಗುಕೇಶ್ ವಿಶ್ವ ಚೆಸ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಗೆಲುವು ಸಾಧಿಸುವ ಮೂಲಕ ವಿಶ್ವ ಚೆಸ್ ಲೋಕಕ್ಕೆ ಸಾಮ್ರಾಟನಾಗಿದ್ದಾರೆ. ಆದರೆ, ಚೀನಾದ ಆಟಗಾರ ಡಿಂಗ್ ಲಿರೆನ್ ಉದ್ದೇಶಪೂರ್ವಕವಾಗಿ ಸೋತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ರಷ್ಯಾದ ಚೆಸ್ ಫೆಡರೇಶನ್ ಅಧ್ಯಕ್ಷರು ಈ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ.
ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಡಿ.ಗುಕೇಶ್ ಅವರು ಡಿಸೆಂಬರ್ 12 ರ ಶುಕ್ರವಾರದಂದು ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಗೆಲುವು ಸಾಧಿಸುವ ಮೂಲಕ ವಿಶ್ವ ಚೆಸ್ ಲೋಕಕ್ಕೆ ಸಾಮ್ರಾಟನಾಗಿದ್ದಾರೆ. ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿದ 18 ವರ್ಷದ ಗುಕೇಶ್ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದಾರೆ. ಆದರೆ, ಇದೀಗ ಗುಕೇಶ್ ಅವರ ಐತಿಹಾಸಿಕ ಗೆಲುವಿನ ಬಗ್ಗೆ ಫಿಕ್ಸಿಂಗ್ ಆರೋಪ ಕೇಳಿ ಬರುತ್ತಿದೆ. ರಷ್ಯಾದ ಚೆಸ್ ಫೆಡರೇಶನ್ ಅಧ್ಯಕ್ಷ ಆಂಡ್ರೆ ಫಿಲಾಟೆವ್ ಅವರು ಲಿರೆನ್ ಉದ್ದೇಶಪೂರ್ವಕವಾಗಿ ಫೈನಲ್ ಪಂದ್ಯದಲ್ಲಿ ಸೋತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಅಂತರಾಷ್ಟ್ರೀಯ ಚೆಸ್ ಫೆಡರೇಶನ್ (FIDE) ಈ ಬಗ್ಗೆ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಉದ್ದೇಶಪೂರ್ವಕವಾಗಿ ಸೋತಿದ್ದಾರೆ
ಡಿಂಗ್ ಲಿರೆನ್ ಅವರ ಉದ್ದೇಶಪೂರ್ವಕ ಸೋಲಿನ ಬಗ್ಗೆ ತನಿಖೆ ನಡೆಸಬೇಕೆಂದು ರಷ್ಯಾದ ಚೆಸ್ ಫೆಡರೇಶನ್ ಅಧ್ಯಕ್ಷ ಆಂಡ್ರೆ ಫಿಲಾಟೆವ್ ಒತ್ತಾಯಿಸಿದ್ದಾರೆ. ಆಂಡ್ರೆ ಫಿಲಾಟೆವ್ ಮಾಡಿರುವ ಆರೋಪವನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಉಕ್ರೇನಿಯನ್ ಚೆಸ್ ಕೋಚ್ ಪೀಟರ್ ಹೆನ್ ನೀಲ್ಸನ್ ಹಂಚಿಕೊಂಡಿದ್ದಾರೆ. ಅದರಲ್ಲಿರುವುದೇನೆಂದರೆ, ‘ವಿಶ್ವ ಚೆಸ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಫಲಿತಾಂಶದಿಂದ ವೃತ್ತಿಪರರು ಮತ್ತು ಚೆಸ್ ಅಭಿಮಾನಿಗಳು ತೃಪ್ತರಾಗಿಲ್ಲ. ಗುಕೇಶ್ ವಿರುದ್ಧದ ಕೊನೆಯ ಗೇಮ್ನಲ್ಲಿ ಡಿಂಗ್ ಲಿರೆನ್ ಮಾಡಿದ ಕೆಲವು ಮೂವ್ಗಳು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಹೀಗಾಗಿ FIDE ಅದನ್ನು ಪ್ರತ್ಯೇಕವಾಗಿ ತೆಗೆದುಕೊಂಡು ತನಿಖೆ ನಡೆಸಬೇಕು. ಚೀನಾದ ಆಟಗಾರ ಉದ್ದೇಶಪೂರ್ವಕವಾಗಿ ಪಂದ್ಯವನ್ನು ಸೋತಿರುವಂತೆ ತೋರುತ್ತಿದೆ. ಇದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅವರು ಆರೋಪಿಸಿದ್ದಾರೆ.
The President of the Chess Federation of Russia🇷🇺, FIDE honorary member Andrei Filatov, accuses Ding Liren🇨🇳 of losing on purpose, and asks @FIDE_chess to start an investigation:@FIDE_chess @tassagency_en https://t.co/mPpSjwj2xK pic.twitter.com/SANqHdhVEI
— Peter Heine Nielsen (@PHChess) December 12, 2024
ಕೊನೆಯ ಸುತ್ತಿನಲ್ಲಿ ಗೆಲುವು
ಚೀನಾದ ಡಿಂಗ್ ಲಿರೆನ್ ಕಳೆದ ವರ್ಷ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದಿದ್ದರು. ಹಾಲಿ ಚಾಂಪಿಯನ್ ಆಗಿ ಮತ್ತೊಮ್ಮೆ ಚಾಂಪಿಯನ್ಶಿಪ್ಗೆ ಎಂಟ್ರಿಕೊಟ್ಟಿದ್ದರು. ಅದರಂತೆ ಸಿಂಗಾಪುರದಲ್ಲಿ 14 ದಿನಗಳಿಂದ ನಡೆದ ಈ ಸ್ಪರ್ಧೆಯಲ್ಲಿ ಉಭಯ ಆಟಗಾರರಿಂದಲೂ ತೀವ್ರ ಪೈಪೋಟಿ ಕಂಡುಬಂದಿತ್ತು. ಹೀಗಾಗಿ 13ನೇ ಸುತ್ತಿನ ಅಂತ್ಯಕ್ಕೆ ಇಬ್ಬರೂ ಆಟಗಾರರು ತಲಾ 2 ಗೆಲುವಿನೊಂದಿಗೆ ಸಮಬಲ ಸಾಧಿಸಿದರೆ 9 ಪಂದ್ಯಗಳು ಡ್ರಾಗೊಂಡಿದ್ದವು. ಚಾಂಪಿಯನ್‌ಶಿಪ್‌ನ 14 ನೇ ಮತ್ತು ಅಂತಿಮ ಸುತ್ತು ಗುರುವಾರ 12 ನೇ ಡಿಸೆಂಬರ್‌ನಲ್ಲಿ ನಡೆಯಿತು. ಈ ನಿರ್ಣಾಯಕ ಪಂದ್ಯದಲ್ಲಿ 18ರ ಹರೆಯದ ಗುಕೇಶ್ ಅವರು ಚೀನಾದ ಗ್ರ್ಯಾಂಡ್ ಮಾಸ್ಟರ್ ಅವರನ್ನು ಸೋಲಿಸಿ 7.5-6.5 ಅಂಕಗಳ ಅಂತರದಿಂದ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ