ದೆಹಲಿ: ಭಾರತೀಯ ಕ್ರಿಕೆಟ್ ಲೋಕ ಕಂಡ ಅತ್ಯುತ್ತಮ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾದ ಸೌರವ್ ಗಂಗೂಲಿ ಇಂದು ತಮ್ಮ 49ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಜುಲೈ 8,1972ರಲ್ಲಿ ಜನಿಸಿದ ಗಂಗೂಲಿ ಅವರಿಗೆ ಮೈದಾನದ ಆಚೆಗೂ ಅಪಾರ ಅಭಿಮಾನಿ ವರ್ಗವಿದೆ. ಸೌರವ್ ಗಂಗೂಲಿ ತನ್ನ ಮುಂದಾಳತ್ವದಲ್ಲಿ ಅನೇಕ ಯುವ ಆಟಗಾರರಿಗೆ ಉತ್ತಮ ಅವಕಾಶ ಕಲ್ಪಿಸಿಕೊಟ್ಟ ಹಿರಿಮೆಯನ್ನೂ ಹೊಂದಿದ್ದಾರೆ. ನಿನ್ನೆಯಷ್ಟೇ (ಜುಲೈ 7) ಹುಟ್ಟುಹಬ್ಬ ಆಚರಿಸಿಕೊಂಡ ಎಂ.ಎಸ್.ಧೋನಿ ಹಾಗೂ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸೌರವ್ ಗಂಗೂಲಿ ಇಬ್ಬರಿಗೂ ಸಂಬಂಧಿಸಿದ ಸ್ವಾರಸ್ಯಕರ ಸಂಗತಿಯೊಂದಿದೆ. ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷ್ರಫ್ ಧೋನಿ ಕುರಿತಾಗಿ ಕೇಳಿದ ಪ್ರಶ್ನೆಗೆ ಸೌರವ್ ಗಂಗೂಲಿ ನೀಡಿದ ಮಜವಾದ ಉತ್ತರವನ್ನು ಇಂದಿಗೂ ಅನೇಕರು ಮೆಲುಕು ಹಾಕುತ್ತಾರೆ.
ಅದು 2000ನೇ ಇಸವಿಯ ಆರಂಭ ಕಾಲ. ಆಗಷ್ಟೇ ಧೋನಿ ಎಂಬ ಉತ್ಸಾಹಿ ಆಟಗಾರ ಉತ್ತುಂಗದತ್ತ ಮುನ್ನುಗ್ಗುತ್ತಿದ್ದ ಕಾಲ. ಭಾರತದಲ್ಲಿ ಮಾತ್ರವಲ್ಲದೇ ಧೋನಿಗೆ ವಿದೇಶಗಳಲ್ಲೂ ಅಭಿಮಾನಿಗಳು ಹುಟ್ಟಿಕೊಂಡಿದ್ದರು, ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷ್ರಫ್ ಕೂಡಾ ಭಾರತಕ್ಕೆ ಬಂದಾಗಲೆಲ್ಲಾ ಧೋನಿಯನ್ನು ಮೆಚ್ಚಿಕೊಂಡು, ಹಾಡಿ ಹೊಗಳುತ್ತಿದ್ದರು. ಭಾರತ-ಪಾಕ್ ನಡುವಿನ ಹೈ ವೋಲ್ಟೇಜ್ ಪಂದ್ಯಗಳ ಸಂದರ್ಭದಲ್ಲಿ ಧೋನಿಗೆ ಅವರ ಎಂದಿನ ಶೈಲಿಯಲ್ಲಿ ಬೀಸಿ ಹೊಡೆಯದಂತೆ ಸಲಹೆಯನ್ನೂ ಕೊಡುತ್ತಿದ್ದರು. ಸೌರವ್ ಗಂಗೂಲಿ ಮುಂದಾಳತ್ವದಲ್ಲೇ ಅಬ್ಬರದ ಆಟ ತೋರಿ ಮುನ್ನೆಲೆಗೆ ಬಂದಿದ್ದ ಧೋನಿಯ ಕುರಿತಾಗಿ ಪರ್ವೇಜ್ ಮುಷ್ರಫ್ ಕೆಲ ಪ್ರಶ್ನೆಗಳನ್ನೂ ಎತ್ತಿದ್ದರು.
2006ನೇ ಇಸವಿಯ ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಧೋನಿಯ ಬಗ್ಗೆ ಪರ್ವೇಜ್ ಮುಷ್ರಫ್ ಒಂದು ನೇರ ಪ್ರಶ್ನೆಯನ್ನು ಎತ್ತಿದ್ದರು. ಧೋನಿಯನ್ನು ಭಾರತ ತಂಡಕ್ಕೆ ಹೇಗೆ ಆಯ್ಕೆ ಮಾಡಿದಿರಿ ಎಂಬರ್ಥದಲ್ಲಿ ಪ್ರಶ್ನೆ ಮಾಡಿದ್ದರು. ಧೋನಿ ನಿಮಗೆ ಎಲ್ಲಿ ಸಿಕ್ಕರು ಎಂಬ ಪರ್ವೇಜ್ ಮುಷ್ರಫ್ ಪ್ರಶ್ನೆಗೆ ತಮಾಷೆಯಾಗಿಯೇ ಚಾಟಿ ಬೀಸಿದ ಗಂಗೂಲಿ, ವಾಘಾ ಗಡಿ ಪ್ರದೇಶದಲ್ಲಿ ಧೋನಿ ಓಡಾಡುತ್ತಿದ್ದರು. ಅವರನ್ನು ನಾವು ಅಲ್ಲಿಂದ ನಮ್ಮ ತಂಡಕ್ಕೆ ಎಳೆದುಕೊಂಡು ಬಂದೆವು ಎಂದು ನಗುನಗುತ್ತಾ ಹೇಳುವ ಮೂಲಕ ಬಾಯಿ ಮುಚ್ಚಿಸಿದ್ದರು.
ಈ ಬಗ್ಗೆ ಒಮ್ಮೆ ಸ್ವತಃ ಸೌರವ್ ಗಂಗೂಲಿಯೇ ನೆನಪು ಹಂಚಿಕೊಂಡಿದ್ದು, ಅಂದು ಪರ್ವೇಜ್ ಮುಷ್ರಫ್ ಅವರು ಧೋನಿಯನ್ನು ಉದ್ದೇಶಿಸಿ ಆತನನ್ನು ನೀವು ಎಲ್ಲಿಂದ ಕರೆದುಕೊಂಡು ಬಂದಿರಿ ಎಂದು ಕೇಳಿದ್ದರು. ಅದಕ್ಕೆ ಧೋನಿ ವಾಘಾ ಬಾರ್ಡರ್ ಸಮೀಪ ವಾಕ್ ಮಾಡುತ್ತಿದ್ದರು. ನಮ್ಮ ಕಣ್ಣಿಗೆ ಬಿದ್ದ ಅವರನ್ನು ಇತ್ತ ಎಳೆದುಕೊಂಡುವೆ ಎಂದು ಉತ್ತರಿಸಿದ್ದೆ ಎಂದು ಹೇಳಿದ್ದರು.
ಇದನ್ನೂ ಓದಿ:
Sourav Ganguly: ಚೊಚ್ಚಲ ಪಂದ್ಯದ ವೇಳೆ ಸಚಿನ್ ನೀಡಿದ ಸಲಹೆ ನೆನೆದ ಗಂಗೂಲಿ! ಆ ದಿನಗಳ ಬಗ್ಗೆ ದಾದಾ ಹೇಳಿದಿಷ್ಟು