ಪ್ರಧಾನಿ ಉಡುಗೊರೆಗಳ ಇ- ಹರಾಜಿನಲ್ಲಿ ಕನ್ನಡಿಗ ಸುಹಾಸ್ ಬ್ಯಾಡ್ಮಿಂಟನ್ ರಾಕೆಟ್; ಮೂಲ ಬೆಲೆ ಎಷ್ಟು ಲಕ್ಷ ಗೊತ್ತಾ?
ಇ-ಹರಾಜಿನಲ್ಲಿ ಸಂಗ್ರಹಿಸಿದ ಮೊತ್ತವನ್ನು ನಮಾಮಿ ಗಂಗೆ ಯೋಜನೆಗೆ ಬಳಸಲಾಗುವುದು. ಸುಹಾಸ್ ರಾಕೆಟ್ನ ಮೂಲ ಬೆಲೆಯನ್ನು 50 ಲಕ್ಷ ರೂ.ಗೆ ನಿಗದಿಪಡಿಸಲಾಗಿದೆ.
ಟೋಕಿಯೊ ಪ್ಯಾರಾಲಿಂಪಿಕ್ಸ್ ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ ಸುಹಾಸ್‌ಗೆ ಇಡೀ ದೇಶವೇ ತಲೆಭಾಗಿ ಧನ್ಯವಾದ ಹೇಳಿತ್ತು. ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಆಡಳಿತಾತ್ಮಕ ಅಧಿಕಾರಿಯ ಅತ್ಯುತ್ತಮ ಪ್ರದರ್ಶನ ಎಂತಾದ್ದು ಎಂಬುದು ಈ ಸಾಧನೆಯಿಂದ ಎದ್ದು ಕಾಣುತ್ತದೆ. ಗೌತಮ್ ಬುದ್ಧ ನಗರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರುವ ಸುಹಾಸ್ ಪದಕ ಗೆದ್ದ ದೇಶದ ಮೊದಲ ಐಎಎಸ್ ಅಧಿಕಾರಿಯಾಗಿದ್ದಾರೆ.
ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪುರುಷರ ಸಿಂಗಲ್ಸ್ ಎಸ್‌ಎಲ್ -4 ವಿಭಾಗದ ಫೈನಲ್‌ನಲ್ಲಿ ಸುಹಾಸ್ ಎಲ್. ಯತಿರಾಜ್ ಫ್ರಾನ್ಸ್‌ನ ಲ್ಯೂಕಾಸ್ ಮಜೂರ್ ಅವರನ್ನು ಎದುರಿಸಿದರು. ಸುಹಾಸ್ ಮೊದಲ ಸುತ್ತನ್ನು ಗೆಲ್ಲುವ ಮೂಲಕ ಅದ್ಭುತ ಆರಂಭವನ್ನು ಮಾಡಿದರು. ಆದರೆ ಮುಂದಿನ ಎರಡು ಸುತ್ತುಗಳಲ್ಲಿ ಸೋತು ಚಿನ್ನದ ಪದಕವನ್ನು ಕಳೆದುಕೊಂಡರು. ಆದರೆ ಅವರು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾಗ ಇಡೀ ಭಾರತಕ್ಕೆ ಭಾರತವೇ ಹೆಮ್ಮೆ ಪಡುತ್ತಿತ್ತು.
ಸುಹಾಸ್ ಸಾಧನೆ ಮೆಚ್ಚಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದರು ಮತ್ತು ಟ್ವೀಟ್ ಮಾಡಿ, ಸೇವೆ ಮತ್ತು ಕ್ರೀಡೆಗಳ ಅದ್ಭುತ ಸಂಯೋಜನೆ! ಡಿಎಂ ಗೌತಮ್ ಬುದ್ಧ ನಗರ ಸುಹಾಸ್ ಯತಿರಾಜ್ ಅವರ ಅಸಾಧಾರಣ ಕ್ರೀಡಾ ಪ್ರದರ್ಶನದ ಮೂಲಕ ನಮ್ಮ ಇಡೀ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಬೆಳ್ಳಿ ಪದಕ ಗೆದ್ದ ಅವರಿಗೆ ಅಭಿನಂದನೆಗಳು. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ! ಎಂದು ಬರೆದುಕೊಂಡು ಶುಭ ಹಾರೈಸಿದ್ದರು.
ಕರ್ನಾಟಕದ ಶಿವಮೊಗ್ಗದಲ್ಲಿ ಜನಿಸಿದ ದಿವ್ಯಾಂಗ್ ಸುಹಾಸ್ ಆರಂಭದಲ್ಲಿ ಐಎಎಸ್ ಅಧಿಕಾರಿಯಾಗಲು ಬಯಸಿರಲಿಲ್ಲ. ಅವರು ಬಾಲ್ಯದಿಂದಲೂ ಕ್ರೀಡೆಗಳಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದರು. ಅವರ ಕುಟುಂಬದಿಂದ, ವಿಶೇಷವಾಗಿ ತಂದೆಯಿಂದ ಸಾಕಷ್ಟು ಬೆಂಬಲ ಮತ್ತು ಪ್ರೋತ್ಸಾಹವನ್ನು ಪಡೆದರು. ಅವರು 2007 ರಲ್ಲಿ ಉತ್ತರ ಪ್ರದೇಶ ಕೇಡರ್‌ನಿಂದ ಐಎಎಸ್ ಅಧಿಕಾರಿಯಾದ ನಂತರ ಹಲವಾರು ವಿಶ್ವ ದರ್ಜೆಯ ಸ್ಪರ್ಧೆಗಳಲ್ಲಿ ದೇಶಕ್ಕಾಗಿ ಅನೇಕ ಪದಕಗಳನ್ನು ಗೆದ್ದರು. ಅವರು ಮೊದಲು ಪ್ರಯಾಗರಾಜ್ ಮತ್ತು ಈಗ ಗೌತಮ್ ಬುದ್ಧ ನಗರದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ತಮ್ಮ ಸೇವೆಗಾಗಿ ಪ್ರಶಂಸೆಯನ್ನು ಪಡೆದಿದ್ದಾರೆ.
ಒಲಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ನಲ್ಲಿ ಅದ್ಭುತ ಪ್ರದರ್ಶನ ನೀಡಿದವರಿಗಾಗಿ ಪ್ರಧಾನಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸುಹಾಸ್ ತಮ್ಮ ಬ್ಯಾಡ್ಮಿಂಟನ್ ರಾಕೆಟ್ ಅನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಉಡುಗೊರೆಯಾಗಿ ನೀಡಿದ್ದರು. ಈಗ ಸುಹಾಸ್ ಅವರ ಬ್ಯಾಡ್ಮಿಂಟನ್ ರಾಕೆಟ್ ಕೂಡ ಪ್ರಧಾನ ಮಂತ್ರಿ ಸ್ವೀಕರಿಸಿದ ಉಡುಗೊರೆಗಳ ಇ-ಹರಾಜಿನಲ್ಲಿರುವ ವಸ್ತುಗಳ ಭಾಗವಾಗಿದೆ. ಸೆಪ್ಟೆಂಬರ್ 17 ರಂದು ಆರಂಭವಾದ ಈ ಇ-ಹರಾಜು ಅಕ್ಟೋಬರ್ 7 ರವರೆಗೆ ಮುಂದುವರಿಯುತ್ತದೆ.
ನೀವು ಸುಹಾಸ್‌ನ ಸಾಧನೆಯ ಭಾಗವಾಗಲು ಬಯಸಿದರೆ, ನೀವು ಅವರ ಬ್ಯಾಡ್ಮಿಂಟನ್ ರಾಕೆಟ್‌ಗೆ ಬಿಡ್ ಮಾಡಬಹುದು. ಇ-ಹರಾಜಿನಲ್ಲಿ ಸಂಗ್ರಹಿಸಿದ ಮೊತ್ತವನ್ನು ನಮಾಮಿ ಗಂಗೆ ಯೋಜನೆಗೆ ಬಳಸಲಾಗುವುದು. ಸುಹಾಸ್ ರಾಕೆಟ್ನ ಮೂಲ ಬೆಲೆಯನ್ನು 50 ಲಕ್ಷ ರೂ.ಗೆ ನಿಗದಿಪಡಿಸಲಾಗಿದೆ.