Sunil Chhetri: ಫುಟ್ಬಾಲ್ ಲೆಜೆಂಡ್ ಸುನಿಲ್ ಛೆಟ್ರಿಗೆ ರಾಜ್ಯಪಾಲರಿಂದ ಇದೆಂಥಾ ಅಗೌರವ; ವಿಡಿಯೋ ನೋಡಿ

Sunil Chhetri: ಸುನಿಲ್ ಛೆಟ್ರಿ ಅವರು ಮೈದಾನದ ಬಳಿ ನಿಂತು ತಮ್ಮ ಸಹ ಆಟಗಾರರ ಕುಟುಂಬದೊಂದಿಗೆ ಮಾತನಾಡುತ್ತಿದ್ದ ವೀಡಿಯೊ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕುಟುಂಬದ ಸದಸ್ಯರಿಗೆ ಕುರ್ಚಿ ವ್ಯವಸ್ಥೆ ಮಾಡಿಕೊಟ್ಟು, ನೀರಿನ ಬಾಟಲಿಯನ್ನೂ ಸಹ ನೀಡಿದ್ದಾರೆ.

Sunil Chhetri: ಫುಟ್ಬಾಲ್ ಲೆಜೆಂಡ್ ಸುನಿಲ್ ಛೆಟ್ರಿಗೆ ರಾಜ್ಯಪಾಲರಿಂದ ಇದೆಂಥಾ ಅಗೌರವ; ವಿಡಿಯೋ ನೋಡಿ
Edited By:

Updated on: Sep 19, 2022 | 5:48 PM

ಫುಟ್ಬಾಲ್ ಲೆಜೆಂಡ್ ಹಾಗೂ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ (Sunil Chhetri) ತಮ್ಮ ಪ್ರಶಸ್ತಿಗಳ ಖಾತೆಗೆ ಮತ್ತೊಂದು ಪ್ರಶಸ್ತಿಯನ್ನು ಸೇರಿಸಿಕೊಂಡಿದ್ದಾರೆ. ಭಾನುವಾರ ನಡೆದ ಮುಂಬೈ ಸಿಟಿ ಎಫ್‌ಸಿ ಎದುರಿನ ಫೈನಲ್ ಪಂದ್ಯದಲ್ಲಿ ಛೆಟ್ರಿ ನಾಯಕತ್ವದ ಬೆಂಗಳೂರು ಎಫ್‌ಸಿ (Bengaluru FC) ತಂಡ ಮೊದಲ ಬಾರಿಗೆ ಡ್ಯುರಾಂಡ್ ಕಪ್ ಗೆದ್ದುಕೊಂಡಿತು. ಆದರೆ ಪ್ರಶಸ್ತಿ ಸಮಾರಂಭದ ವೇಳೆ ಈ ಫುಟ್ಬಾಲ್ ಲೆಜೆಂಡ್​ಗೆ ಅವಮಾನಿಸುವಂತಹ ಘಟನೆಯೊಂದು ನಡೆದುಹೋಯ್ತು. ಅಷ್ಟಕ್ಕೂ ಈ ಸಮಾರಂಭದಲ್ಲಿ ನಡೆದಿದ್ದೇನೆಂದರೆ, ಪ್ರಶಸ್ತಿ ವಿತರಣೆ ಮಾಡಲು ತಂಡದ ನಾಯಕ ಛೆಟ್ರಿಯೊಂದಿಗೆ ವೇದಿಕೆ ಮೇಲೆ ಬಂದಿದ್ದ ಪಶ್ಚಿಮ ಬಂಗಾಳದ ರಾಜ್ಯಪಾಲರು ಪ್ರಶಸ್ತಿ ನೀಡುವ ವೇಳೆ ಫೋಟೋಗೆ ಪೊಸು ನೀಡುವ ಭರದಲ್ಲಿ ಛೆಟ್ರಿ ಅವರನ್ನು ಹಿಂದಕ್ಕೆ ತಳ್ಳಿದರು. ಈಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ರಾಜ್ಯಪಾಲರ ಈ ಕೃತ್ಯ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

ಸುನಿಲ್ ಛೆಟ್ರಿ ಅವರನ್ನು ತಳ್ಳಿದ ರಾಜ್ಯಪಾಲರು

ಫೈನಲ್ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ತಂಡವನ್ನು ಸೋಲಿಸುವ ಮೂಲಕ ಬೆಂಗಳೂರು ಎಫ್‌ಸಿ ತಂಡ ಮೊದಲ ಬಾರಿಗೆ ಡ್ಯುರಾಂಡ್ ಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಪಂದ್ಯದ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭವೂ ನಡೆಯಿತು. ಹೀಗಾಗಿ ಚಾಂಪಿಯನ್ ಪಟ್ಟಕ್ಕೇರಿದ ಸುನಿಲ್ ಛೆಟ್ರಿ ತಂಡಕ್ಕೆ ಟ್ರೋಫಿಯನ್ನು ನೀಡಲು ಹಲವಾರು ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಛೆಟ್ರಿ ಪಕ್ಕದಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲ ಎಲ್‌ಎ ಗಣೇಶನ್ ಕೂಡ ಉಪಸ್ಥಿತರಿದ್ದರು. ಈ ವೇಳೆ ಟ್ರೋಫಿಯನ್ನು ಛೆಟ್ರಿಗೆ ನೀಡಿದ ಪಶ್ಚಿಮ ಬಂಗಾಳದ ರಾಜ್ಯಪಾಲರು ಫೋಟೋದಲ್ಲಿ ಕಾಣಿಸಿಕೊಳ್ಳುವ ಆಸೆಯಿಂದ ಸುನಿಲ್ ಛೆಟ್ರಿಯನ್ನು ಬದಿಗೆ ತಳ್ಳಿದರು. ಆ ಸಮಯದಲ್ಲಿ ಛೆಟ್ರಿ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ, ಭಾರತೀಯ ನಾಯಕನೊಂದಿಗಿನ ರಾಜ್ಯಪಾಲರ ಇಂತಹ ವರ್ತನೆಯನ್ನು ನೋಡಿದ ಅಭಿಮಾನಿಗಳು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಈಗ ಭಾರತದ ಫುಟ್ಬಾಲ್ ಅಭಿಮಾನಿಗಳು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅಧಿಕಾರಿಗಳು ಕ್ಷಮೆಯಾಚಿಸುವಂತೆ ಕೋರಿದ್ದಾರೆ. ಅಲ್ಲದೆ ಈ ರೀತಿಯ ಅಗೌರವದ ಘಟನೆ ಕೇವಲ ಛೆಟ್ರಿಯವರೊಂದಿಗೆ ಮಾತ್ರ ನಡೆಯಲಿಲ್ಲ. ಛೆಟ್ರಿ ಜೊತೆಗೆ ಬೆಂಗಳೂರು ಪರ ಗೋಲು ಗಳಿಸಿದ ಶಿವಶಕ್ತಿ ನಾರಾಯಣ್‌ಗೂ ಈ ರೀತಿಯ ಅಗೌರವ ತೋರಿಸಲಾಯಿತು.

ಹೃದಯ ಗೆದ್ದ ಛೆಟ್ರಿ

ಈ ಹಿಂದೆ ಛೆಟ್ರಿಯ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಅವರ ಔದಾರ್ಯವನ್ನು ಕಂಡ ಅಭಿಮಾನಿಗಳು ಛೆಟ್ರಿಯವರ ಹೃದಯ ವೈಶಾಲ್ಯತೆಯನ್ನು ಗುಣಗಾನ ಮಾಡಿದ್ದಾರೆ. ಪಂದ್ಯದ ನಂತರ, ಸುನಿಲ್ ಛೆಟ್ರಿ ಅವರು ಮೈದಾನದ ಬಳಿ ನಿಂತು ತಮ್ಮ ಸಹ ಆಟಗಾರರ ಕುಟುಂಬದೊಂದಿಗೆ ಮಾತನಾಡುತ್ತಿದ್ದ ವೀಡಿಯೊ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕುಟುಂಬದ ಸದಸ್ಯರಿಗೆ ಕುರ್ಚಿ ವ್ಯವಸ್ಥೆ ಮಾಡಿಕೊಟ್ಟು, ನೀರಿನ ಬಾಟಲಿಯನ್ನೂ ಸಹ ನೀಡಿದ್ದಾರೆ.

Published On - 5:45 pm, Mon, 19 September 22

TV9 Web

TV9 Kannada

Read More
Loading...
Unable to load recommendations.
Follow Us