ಭಾನುವಾರ ನಡೆದ ಸ್ವಿಸ್ ಓಪನ್‌ನ (Swiss Open) ಪುರುಷರ ಡಬಲ್ಸ್ ಫೈನಲ್‌ನಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರರಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ (Satwiksairaj Rankireddy and Chirag Shetty) ಅವರು ಚೀನಾದ ರೆನ್ ಕ್ಸಿಯಾಂಗ್ ಯು ಮತ್ತು ತಾನ್ ಕಿಯಾಂಗ್ ಅವರನ್ನು ಸೋಲಿಸುವುದರೊಂದಿಗೆ ವರ್ಷದ ಮೊದಲ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಫೈನಲ್‌ನಲ್ಲಿ ಈ ಜೋಡಿ 21-19, 24-22 ನೇರ ಸೇಟ್ಗಳಿಂದ ಚೀನಾದ ಜೋಡಿಯನ್ನು ಸೋಲಿಸಿತು. ಒಂದು ಗಂಟೆಗೂ ನಡೆದ ಈ ಮಿನಿ ಸಮರದಲ್ಲಿ ವಿಶ್ವದ 6ನೇ ಶ್ರೇಯಾಂಕದ ಈ ಜೋಡಿಯು ವಿಶ್ವದ 21ನೇ ಶ್ರೇಯಾಂಕದ ಜೋಡಿಯನ್ನು ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಇದು ರಾಂಕಿರೆಡ್ಡಿ ಚಿರಾಗ್ ಶೆಟ್ಟಿಯ ಈ ವರ್ಷ ಮೊದಲ ಬಿಡಬ್ಲ್ಯುಎಫ್ ಡಬಲ್ಸ್ ಪ್ರಶಸ್ತಿಯಾಗಿದೆ. ಅಲ್ಲದೆ ಈ ಪ್ರಶಸ್ತಿಯೊಂದಿಗೆ ಈ ಜೋಡಿಯ ಪ್ರಶಸ್ತಿಗಳ ಸಂಖ್ಯೆ ಐದಕ್ಕೇರಿದೆ. ಅದರಲ್ಲೂ ಪ್ರಶಸ್ತಿಗಾಗಿ ಬಹಳ ದಿನಗಳಿಂದ ಕಾಯುತ್ತಿದ್ದ ಈ ಜೋಡಿಗೆ ಈ ಪ್ರಶಸ್ತಿ ಕೊಂಚ ಸಮಾಧಾನದ ವಿಷಯವಾಗಿದೆ. ಏಕೆಂದರೆ ಈ ವರ್ಷ ಈ ಇಬ್ಬರೂ ಆಡಿರುವ ಪಂದ್ಯಾವಳಿಗಳಲ್ಲಿ ಒಮ್ಮೆ ಮಾತ್ರ ಕ್ವಾರ್ಟರ್‌ಫೈನಲ್ ಮೀರಿ ಹೋಗಿದ್ದರು. ಆದರೆ, ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿರಲಿಲ್ಲ. ರಾಂಕಿರೆಡ್ಡಿ ಗಾಯಗೊಂಡಿದ್ದರಿಂದ ಚಾಂಪಿಯನ್‌ಶಿಪ್ ಆಡಲು ಸಾಧ್ಯವಾಗಿರಲಿಲ್ಲ.
WPL Prize Money: ಪಿಎಸ್ಎಲ್ಗಿಂತ ಎರಡು ಪಟ್ಟು; ಚಾಂಪಿಯನ್ಗೆ ಸಿಗುವ ಬಹುಮಾನವೆಷ್ಟು ಗೊತ್ತಾ?
ಬಾಸೆಲ್ನಲ್ಲಿ ನಡೆದ ಫೈನಲ್‌ನಲ್ಲಿ ಈ ಜೋಡಿ, ಚೀನಾದ ಜೋಡಿಯ ವಿರುದ್ಧ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಇಬ್ಬರೂ ಆರಂಭಿಕ ಮುನ್ನಡೆ ಕಾಯ್ದುಕೊಂಡರಾದರೂ, ಆನಂತರ ಸ್ವಲ್ಪ ಲಯ ಕಳೆದುಕೊಂಡಿತು. ಹೀಗಾಗಿ ಒಂದು ಹಂತದಲ್ಲಿ ಸ್ಕೋರ್ 6-6 ರಿಂದ ಸಮಬಲಗೊಂಡಿತು. ಇದಾದ ಬಳಿಕ ರಾಂಕಿರೆಡ್ಡಿ ಅದ್ಭುತ ಶಾಟ್ ಬಾರಿಸಿ ಒಂದು ಪಾಯಿಂಟ್ನಿಂದ ಮುನ್ನಡೆ ಸಾಧಿಸಿದರು. ಹೀಗಾಗಿ ವಿರಾಮದ ವೇಳೆಗೆ ಸ್ಕೋರ್ 11-8 ಆಯಿತು. ವಿರಾಮದ ನಂತರ ಮತ್ತೆ ಲಯಕ್ಕೆ ಮರಳಿದ ಈ ಜೋಡಿ 17-12 ರಿಂದ ಮುನ್ನಡೆ ಕಾಯ್ದುಕೊಂಡರು. ಕೊನೆಯ ಕ್ಷಣಗಳಲ್ಲಿ ಚೀನಾ ಜೋಡಿ ಒಂದಷ್ಟು ಅಂಕ ಗಳಿಸಿ ಭಾರತದ ಜೋಡಿಯನ್ನು ಸಂಕಷ್ಟಕ್ಕೆ ಸಿಲುಕಿಸಿತು. ಆದರೆ ಮೊದಲ ಗೇಮ್ ಗೆಲ್ಲುವಲ್ಲಿ ಭಾರತದ ಜೋಡಿ ಯಶಸ್ವಿಯಾಗಿತ್ತು.
ಈ ಜೋಡಿ ಎರಡನೇ ಸುತ್ತಿನಲ್ಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿ ಆರಂಭಿಕ ಮುನ್ನಡೆ ಸಾಧಿಸಿತು. ಆದರೆ ನಂತರ ಚೀನಾದ ಜೋಡಿ ಕೂಡ ಪುನರಾಗಮನ ಮಾಡಿ 4-2 ಸೆಟ್ಗಳ ಮೂಲಕ ಮುನ್ನಡೆ ಸಾಧಿಸಿತು. ಆದರೆ ಇದಾದ ನಂತರ ರಾಂಕಿರೆಡ್ಡಿ ಮತ್ತು ಶೆಟ್ಟಿ 6-4 ಅಂಕ ಗಳಿಸುವುದರೊಂದಿಗೆ ಪಂದ್ಯದಲ್ಲಿ ಪುನರಾಗಮನ ಮಾಡಿತು. ಎರಡನೇ ಸುತ್ತಿನ ವಿರಾಮದ ವೇಳೆಗೆ ಈ ಜೋಡಿ 11-9 ಅಂಕಗಳಿಂದ ಮುನ್ನಡೆ ಕಾಯ್ದುಕೊಂಡಿತು. ವಿರಾಮದ ನಂತರ, ಚೀನಾದ ಜೋಡಿ ಸ್ಕೋರ್ ಅನ್ನು ಸಮಬಲಗೊಳಿಸುವುದರೊಂದಿಗೆ ಭಾರತದ ಜೋಡಿಯನ್ನು ಸಂಕಷ್ಟಕ್ಕೆ ಸಿಲುಕಿಸಲು ಪ್ರಯತ್ನಿಸಿತು. ಆದರೆ ಚೀನಾದ ಜೋಡಿಗೆ ಭಾರತದ ಜೋಡಿ ಅವಕಾಶ ನೀಡದೆ ಸ್ಕೋರ್ ಅನ್ನು 14-11 ಕ್ಕೆ ಕೊಂಡೊಯ್ಯಿತು. ಇಲ್ಲಿಂದ ಮತ್ತೆ ಹಿಂತಿರುಗಿ ನೋಡದ ಈ ಜೋಡಿ ಪಂದ್ಯದ ಜೊತೆಗೆ ಗೇಮ್ ಗೆದ್ದು ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:12 pm, Sun, 26 March 23