ಐಸಿಸಿ ಹಾಲ್ ಆಫ್ ಫೇಮ್ ಪಟ್ಟಿಗೆ ಇನ್ನೂ 10 ಲೆಜೆಂಡರಿ ಆಟಗಾರರ ಸೇರ್ಪಡೆ, ಜೂನ್ 13ರಂದು ಆಟಗಾರರ ಹೆಸರು ಪ್ರಕಟ
ಐಸಿಸಿ ವಿಶೇಷ ಆವೃತ್ತಿಯ ಭಾಗವಾಗಿ ಹತ್ತು ಲೆಜೆಂಡರಿ ಆಟಗಾರರನ್ನು ಹಾಲ್ ಆಫ್ ಫೇಮ್ ಪಟ್ಟಿಗೆ ಸೇರಿಸಲಾಗುತ್ತಿದ್ದು ಅವರನ್ನು ಇನ್ನೂ ಜೀವಂತವಿರುವ ಐಸಿಸಿ ಹಾಲ್ ಆಫ್ ಫೇಮ್ ಸದಸ್ಯರನ್ನೊಳಗೊಂಡ ವೋಟಿಂಗ್ ಅಕಾಡೆಮಿ, ಅಂತರರಾಷ್ಟ್ರೀಯ ಕ್ರಿಕೆಟ್ ಆಟಗಾರರ ಸಂಸ್ಥೆಯ (ಎಫ್ಐಸಿಎ) ಒಬ್ಬ ಪ್ರತಿನಿಧಿ, ಖ್ಯಾತ ಕ್ರಿಕೆಟ್ ಪತ್ರಕರ್ತರು ಮತ್ತು ಐಸಿಸಿಯ ಹಿರಿಯ ಗಣ್ಯರು ಆರಿಸಿದ್ದಾರೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಸೌತಾಂಪ್ಟ್ನ ಏಜಿಸ್ ಬೋಲ್ನಲ್ಲಿ ಜೂನ್ 18ರಿಂದ ಮೊಟ್ಟ ಮೊದಲ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಂದ್ಯ ನಡೆಯುವಾಗ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಹಾಲ್ ಆಫ್ ಪೇಮ್ ಲೆಜೆಂಡರಿ ಆಟಗಾರ ಪಟ್ಟಿಗೆ 5 ಬೇರೆ ಬೇರೆ ಶಕೆಗಳ ಇನ್ನೂ 10 ಆಟಗಾರರನ್ನು ಸೇರಿಸುವ ನಿರ್ಧಾರ ತೆಗೆದುಕೊಂಡಿರುವುದಾಗಿ ಪ್ರಕಟಿಸಿದೆ. ಕ್ರಿಕೆಟ್ ಪ್ರೇಮಿಗಳಿಗೆ ಗೊತ್ತಿರಬಹುದು, ಟೆಸ್ಟ್ ಕ್ರಿಕೆಟ್ ಆರಂಭವಾದಾಗಿನಿಂದ ಹಿಡಿದು ಇದುವರೆಗಿನ ಅತಿ ಶ್ರೇಷ್ಠ ಆಟಗಾರರನನ್ನು ಹಾಲ್ ಆಫ್ ಫೇಮ್ ಪಟ್ಟಿ ಮಾಡಲಾಗಿದೆ. ಈ ಪಟ್ಟಿಯಲ್ಲಿ 93 ಲೆಜೆಂಡರಿ ಆಟಗಾರರ ಹೆಸರಿದೆ. ಅವರು ಕ್ರೀಡೆಗೆ ನೀಡಿರುವ ಉತ್ಕೃಷ್ಟ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ. ಈಗ ಇನ್ನೂ 10 ಶ್ರೇಷ್ಠರ ಹೆಸರನ್ನು ಐಸಿಸಿ ಸೇರಿಸಲು ನಿಶ್ಚಯಿಸಿರುವುದರಿಂದ ಪಟ್ಟಿಯಲ್ಲಿನ ಆಟಗಾರರ ಸಂಖ್ಯೆ 103ಕ್ಕೇರಲಿದೆ.
‘ಪ್ರಪ್ರಥಮ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಡೆಯುವ ಸಂದರ್ಭದಲ್ಲಿ ಹತ್ತು ಗ್ರೇಟ್ ಆಟಗಾರರ ಹೆಸರನ್ನು ಐಸಿಸಿ ಹಾಲ್ ಆಫ್ ಫೇಮ್ ಪಟ್ಟಿಗೆ ಸೇರಿಸಲು ನಮಗೆ ಅತೀವ ಹೆಮ್ಮೆಯೆನಿಸುತ್ತಿದೆ,’ ಎಂದು ಐಸಿಸಿಯ ಹಂಗಾಮಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜೆಫ್ ಅಲ್ಲಾರ್ಡೈಸ್ ಹೇಳಿದ್ದಾರೆ.
‘ನಾವು ಕ್ರೀಡೆಯ ಇತಿಹಾಸವನ್ನು ಆಚರಿಸುತ್ತ್ತಿದ್ದೇವೆ ಮತ್ತು ಇತಿಹಾಸದ ಬೇರೆ ಬೇರೆ ಕಾಲಘಟ್ಟದಲ್ಲಿ ಆಡಿದ ಶ್ರೇಷ್ಠರನ್ನು ಗೌರವಿಸಲು ಇದಕ್ಕಿಂತ ಯೋಗ್ಯವಾದ ಸಂದರ್ಭ ಮತ್ತೊಂದಿಲ್ಲ. ಇವರೆಲ್ಲ ಒಂದು ಪರಂಪರೆಯನ್ನು ಸೃಷ್ಟಿಸಿರುವಂಥ ಆಟಗಾರರು. ಆ ಪರಂಪರೆಯು ಭವಿಷ್ಯದ ಎಲ್ಲಾ ಆಟಗಾರರಿಗೆ ಸ್ಫೂರ್ತಿದಾಯಕವಾಗಲಿದೆ,’ ಎಂದು ಅಲ್ಲಾರ್ಡೈಸ್ ಹೇಳಿದ್ದಾರೆ.
ಕ್ರಿಕೆಟ್ ಶಕೆಯ ಮೊದಲಿನ ಹಂತ ( 1918ಕ್ಕಿಂತ ಮುಂಚಿನ ವರ್ಷಗಳು), ಜಾಗತಿಕ ಯುದ್ಧಗಳ ನಡುವಿನ ಶಕೆ (1918 ರಿಂದ 1945), ಯುದ್ಧಗಳ ನಂತರದ ಶಕೆ (1946ರಿಂದ 1070), ಒಂದು ದಿನ ಪಂದ್ಯಗಳ ಶಕೆ (1971ರಿಂದ 1995) ಮತ್ತ ಆಧುನಿಕ ಶಕೆ- (1996-2016) ಈ ಐದು ಶಕೆಗಳಿಂದ ಇಬ್ಬಿಬ್ಬರು ಆಟಗಾರರನ್ನು ಹಾಲ್ ಆಫ್ ಫೇಮ್ ಪಟ್ಟಿಗೆ ಸೇರಿಸಲಾಗುವುದು.
ಐಸಿಸಿ ವಿಶೇಷ ಆವೃತ್ತಿಯ ಭಾಗವಾಗಿ ಹತ್ತು ಲೆಜೆಂಡರಿ ಆಟಗಾರರನ್ನು ಹಾಲ್ ಆಫ್ ಫೇಮ್ ಪಟ್ಟಿಗೆ ಸೇರಿಸಲಾಗುತ್ತಿದ್ದು ಅವರನ್ನು ಇನ್ನೂ ಜೀವಂತವಿರುವ ಐಸಿಸಿ ಹಾಲ್ ಆಫ್ ಫೇಮ್ ಸದಸ್ಯರನ್ನೊಳಗೊಂಡ ವೋಟಿಂಗ್ ಅಕಾಡೆಮಿ, ಅಂತರರಾಷ್ಟ್ರೀಯ ಕ್ರಿಕೆಟ್ ಆಟಗಾರರ ಸಂಸ್ಥೆಯ (ಎಫ್ಐಸಿಎ) ಒಬ್ಬ ಪ್ರತಿನಿಧಿ, ಖ್ಯಾತ ಕ್ರಿಕೆಟ್ ಪತ್ರಕರ್ತರು ಮತ್ತು ಐಸಿಸಿಯ ಹಿರಿಯ ಗಣ್ಯರು ಆರಿಸಿದ್ದಾರೆ.
ಐಸಿಸಿಯ ಡಿಜಿಟಲ್ ಮಿಡಿಯಾ ಚ್ಯಾನೆಲ್ಗಳಲ್ಲಿ ಸ್ಟ್ರೀಮ್ ಮಾಡಲಾಗುವ ನೇರ ಪ್ರಸಾರದಲ್ಲಿ ಈ ಹತ್ತು ಲೆಜಂಡರಿ ಆಟಗಾರರ ಹೆಸರುಗಳನ್ನು ಪ್ರಕಟಿಸಲಾಗುವುದು. ಖ್ಯಾತ ಕ್ರೀಡಾ ನಿರೂಪಕ ಆಲನ್ ವಿಲ್ಕಿನ್ಸ್ ಐಸಿಸಿ ಹಾಲ್ ಆಫ್ ಫೇಮ್ ಕಾರ್ಯಕ್ರಮವನ್ನು ಹೋಸ್ಟ್ ಮಾಡಲಿದ್ದಾರೆ. ಸದರಿ ಕಾರ್ಯಕ್ರಮವು ಜೂನ್ 13ರಂದು ಐಸಿಸಿ ಡಿಜಿಟಲ್ ಚ್ಯಾನೆಲ್ಗಳಲ್ಲದೆ ಫೇಸ್ಬುಕ್ ಮತ್ತು ಯೂಟ್ಯೂಬ್ಗಳಲ್ಲೂ ನೇರಪ್ರಸಾರಗೊಳ್ಳಲಿದೆ.
ಐಸಿಸಿ ಹಾಲ್ ಆಫ್ ಪೇಮ್ನಲ್ಲಿ ಭಾರತದ ಆರು ಮಹಾನ್ ಆಟಗಾರರಿದ್ದಾರೆ. ಬಿಷನ್ಸಿಂಗ್ ಬೇಡಿ, ಸುನಿಲ್ ಗಾವಸ್ಕರ್, ಕಪಿಲ್ ದೇವ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್.
ಇದನ್ನೂ ಓದಿ: ICC Test Rankings: ಆಲ್‌ರೌಂಡರ್ ವಿಭಾಗದಲ್ಲಿ 2ನೇ ಸ್ಥಾನಕ್ಕೇರಿದ ಜಡೇಜಾ; ಬ್ಯಾಟಿಂಗ್ ಕೋಟಾದಲ್ಲಿ ಭಾರತೀಯರದ್ದೆ ಹವಾ