ಇಂದಿನಿಂದ ಕ್ರಿಕೆಟ್ ಪ್ರೇಮಿಗಳಿಗೆ ಐಪಿಎಲ್ 2021 ರ ಕ್ರಿಕೆಟ್ ಹಬ್ಬ ಆರಂಭವಾಗುತ್ತಿದೆ. ಪ್ರತಿವರ್ಷವೂ ಅತ್ಯಂತ ದೊಡ್ಡ ಮಟ್ಟದಲ್ಲಿ ಸಂಭ್ರಮ, ಸಡಗರದಿಂದ ನಡೆಯುತ್ತಿದ್ದ ಐಪಿಎಲ್ ಕಳೆದ ಬಾರಿ ಕೊರೊನಾ ಕಾರಣದಿಂದಾಗಿ ಪ್ರೇಕ್ಷಕರಿಲ್ಲದ ಮೈದಾನದಲ್ಲಿ ನೆರವೇರಲ್ಪಟ್ಟಿತು. ಈ ಬಾರಿಯೂ ಕೊರೊನಾ ಇರುವುದರಿಂದ ಮೊದಲಿನ ಮೆರಗು ಮರಕಳಿಸುವುದು ಸುಲಭವಿಲ್ಲ. ಹೀಗಾಗಿ ಈ ವರ್ಷವೂ ಟಿವಿಯಲ್ಲಿ ಪಂದ್ಯ ವೀಕ್ಷಿಸುವುದೇ ಉತ್ತಮ ಎಂಬ ಅಭಿಪ್ರಾಯ ಹಲವರಲ್ಲಿದೆ. ಸಾಧಾರಣವಾಗಿ ಪ್ರತಿ ಬಾರಿಯೂ ಐಪಿಎಲ್ ಸಂದರ್ಭದಲ್ಲಿ ಕ್ರಿಕೆಟ್ ಜೊತೆಗೆ ಒಂದಷ್ಟು ಬೇರೆ ಸಂಗತಿಗಳೂ ಸದ್ದು ಮಾಡುತ್ತಿರುತ್ತವೆ. ಕೆಲವು ವಿಷಯಗಳಂತೂ ಮೊದಲ ಪಂದ್ಯದಿಂದ ಅಂತಿಮ ಪಂದ್ಯದವರೆಗೂ ಪ್ರಚಲಿತದಲ್ಲಿ ಉಳಿದು ಪ್ರಸಿದ್ಧಿ ಪಡೆಯುತ್ತವೆ. ಆದರೆ, ಆ ಪೈಕಿ ಕೆಲವು ವಿವಾದವಾಗಿಯೂ, ಕೆಲವರ ವೈಯಕ್ತಿಕ ತೇಜೋವಧೆ ಮಾಡುವ ಸಂಗತಿಯಾಗಿಯೂ ಬದಲಾಗುವುದು ಖೇದನೀಯ.
2019ನೇ ಐಪಿಎಲ್ ಪಂದ್ಯಾವಳಿಯಲ್ಲಿ ಆರ್ಸಿಬಿ ಹಾಗೂ ಸನ್ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯ ನಡೆಯುವಾಗ ಅಂದಿನ ಕೇಂದ್ರಬಿಂದು ಮೈದಾನದಲ್ಲಿರುವ ಆಟಗಾರರಾಗಿರಲಿಲ್ಲ. ಬದಲಾಗಿ, ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಯುವತಿಯೊಬ್ಬರು ಎಲ್ಲರ ಗಮನ ಸೆಳೆದಿದ್ದರು. ಪ್ರೇಕ್ಷಕರನ್ನು ಸೆರೆ ಹಿಡಿಯುತ್ತಿದ್ದ ಕ್ಯಾಮೆರಾ ಕಣ್ಣಿಗೆ ಕೆಂಪು ಬಟ್ಟೆ ತೊಟ್ಟು ನಿಂತಿದ್ದ ಯುವತಿ ಸಿಕ್ಕಾಗ ಅದು ಅಲುಗಾಡದೇ ಕೆಲ ಸೆಕೆಂಡುಗಳ ಕಾಲ ಆಕೆಯನ್ನೇ ನೋಡುತ್ತಾ ನಿಂತು ಬಿಟ್ಟಿತು. ಆರ್ಸಿಬಿ ತಂಡವನ್ನು ಬೆಂಬಲಿಸುತ್ತಿದ್ದ ಆ ಬೆಡಗಿ ನಂತರದಲ್ಲಿ ಭಾರೀ ಸದ್ದು ಮಾಡಿಬಿಟ್ಟರು.
ಆದರೆ, ಅದಾಗಿ ಕೆಲ ದಿನಗಳಲ್ಲಿ ಆಕೆ ಇಡೀ ಸಾಮಾಜಿಕ ಜಾಲತಾಣವನ್ನು ಅಕ್ಷರಶಃ ವ್ಯಾಪಿಸಿಕೊಂಡುಬಿಟ್ಟರು. ಪ್ರೇಕ್ಷಕರ ಹಾವಭಾವವನ್ನು ಸೆರೆ ಹಿಡಿಯುತ್ತಿದ್ದ ಕ್ಯಾಮೆರಾ ಆಕೆಯನ್ನು ಕೆಲ ಕ್ಷಣಗಳ ಕಾಲ ಸೆರೆ ಹಿಡಿದಿದ್ದೇ ಹಿಡಿದಿದ್ದು. ಹೋದಲ್ಲಿ, ಬಂದಲ್ಲಿ ಆಕೆಯ ವಿಷಯವೇ ಮಾತಿನ ವಸ್ತುವಾಯಿತು. ಬೇಸರದ ಸಂಗತಿ ಎಂದರೆ ಆ ಘಟನೆ ಅದೆಷ್ಟೋ ಜನರು ಯುವತಿಯನ್ನು ಗುರುತಿಸುವಂತೆ ಮಾಡಿತಾದರೂ ಅದಕ್ಕೂ ಮಿಗಿಲಾದ ಕೀಳು ಮಟ್ಟದ ಹೇಳಿಕೆ, ಟೀಕೆ ಆಕೆಯನ್ನರಸಿ ಬಂದವು.
ಈ ಬಗ್ಗೆ ನಂತರ ಹೇಳಿಕೊಂಡಿದ್ದ ಯುವತಿ ನಾನು ಆರ್ಸಿಬಿ ತಂಡವನ್ನು ಬೆಂಬಲಿಸುವ ಹುಡುಗಿ ಇರಬಹುದು. ಆದರೆ, ಅದರ ಹೊರತಾಗಿಯೂ ನನಗೊಂದು ಅಸ್ತಿತ್ವ ಇದೆ. ನಾನಾಗಿಯೇ ಈ ಪ್ರಚಾರವನ್ನು ಖಂಡಿತಾ ಬಯಸಿರಲಿಲ್ಲ. ಇಷ್ಟಕ್ಕೂ ನಾನು ಅಲ್ಲಿ ಗಮನ ಸೆಳೆಯುವಂತಹದ್ದೇನೂ ಮಾಡಿರಲಿಲ್ಲ ಅಥವಾ ಅವರು ದೃಶ್ಯಾವಳಿಗಳನ್ನು ಸೆರೆ ಹಿಡಿಯುವಾಗ ತಪ್ಪೆಸಗಿಯೂ ಇರಲಿಲ್ಲ. ಇಷ್ಟಾದರೂ ನನ್ನನ್ನು ವಿನಾಕಾರಣ ದೂಷಿಸಲಾಯಿತು. ಜರಿದು ಅಪಮಾನಿಸಲಾಯಿತು. ರಾತ್ರಿ ಬೆಳಗಾಗುವುದರೊಳಗೆ ಎಲ್ಲರೂ ನನ್ನ ಬಗ್ಗೆ ಮಾತಾಡಲಾರಂಭಿಸಿದರು. ಜನರು ಅಷ್ಟು ಬೇಗ ನನ್ನನ್ನು ಪತ್ತೆ ಹಚ್ಚಿ, ನನ್ನ ಸಾಮಾಜಿಕ ಜಾಲತಾಣಗಳಿಂದ ಹಿಡಿದು, ನನ್ನ ವೈಯಕ್ತಿಕ ಜೀವನದ ಬಗ್ಗೆಯೂ ಮಾಹಿತಿ ಹಂಚಲಿಕ್ಕೆ ಆರಂಭಿಸಿದರು. ಇದೆಲ್ಲಾ ಹೇಗೆ ಸಾಧ್ಯವಾಯ್ತು ಎಂಬ ಬಗ್ಗೆ ನನ್ನಲ್ಲಿ ಈಗಲೂ ಗೊಂದಲವಿದೆ ಎಂದು ಹೇಳಿಕೊಂಡಿದ್ದಾರೆ.
ಇಂತಹ ಹಲವು ಘಟನೆಗಳಿಗೆ ಐಪಿಎಲ್ ಸಾಕ್ಷಿಯಾಗಿದೆ
ಇದು 2019ರಲ್ಲಿ ನಡೆದ ಒಂದು ಘಟನೆಯ ಮೆಲುಕಷ್ಟೇ. ಪ್ರತಿವರ್ಷವೂ ಐಪಿಎಲ್ ವೇಳೆಗೆ ಇಂತಹ ಸುದ್ದಿಗಳು ಆಗುತ್ತಲೇ ಇರುತ್ತವೆ. ವೀಕ್ಷಕರಲ್ಲಿ ಆಕರ್ಷಕರಾಗಿ ಇರುವವರನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುವುದು ಹಾಗೂ ನಂತರ ಅವರು ಸುದ್ದಿಯಾಗುವುದು ಇದೆಲ್ಲಾ ಐಪಿಎಲ್ನ ಭಾಗ ಎನ್ನುವಂತೆ ಆಗಿದೆ. ಬೇಸರದ ಸಂಗತಿ ಎಂದರೆ ಈ ವಿಚಾರದ ಬಗ್ಗೆ ವಾಹಿನಿಯವರಾಗಲೀ, ಆಯೋಜಕರಾಗಲೀ ಸೂಕ್ಷ್ಮವಾಗಿ ಯೋಚಿಸುವ ಗೋಜಿಗೆ ಹೋದಂತಿಲ್ಲ. ನೋಡುಗರಿಗೆ ಆಕರ್ಷಣೀಯವಾಗಿ ಕಾಣಲಿ ಎಂಬ ಒಂದೇ ಕಾರಣಕ್ಕೆ ಟಿವಿ ಪರದೆಯ ಮೇಲೆ ಚೆಂದದ ಹುಡುಗಿಯರನ್ನು ಬಿಂಬಿಸಿ ಅವರನ್ನು ಸಂಕಷ್ಟಕ್ಕೆ ಸಿಲುಕಿಸುವುದು ನಿಜಕ್ಕೂ ಉತ್ತಮ ಬೆಳವಣಿಗೆಯಲ್ಲ.
ಹಾಗಂತ ಇಲ್ಲಿ ತಪ್ಪು ವಾಹಿನಿಯವರದ್ದಾಗಲೀ, ವಿಡಿಯೋ ಚಿತ್ರೀಕರಿಸಿದವರದ್ದಾಗಲೀ ಎಂದು ಬೊಟ್ಟು ಮಾಡಿ ಹೇಳುವಂತಿಲ್ಲ. ಏಕೆಂದರೆ ಪ್ರಸ್ತುತ ಸಾಮಾಜಿಕ ಜಾಲತಾಣಗಳ ಬಳಕೆದಾರರು, ಟ್ರೋಲ್ ಪೇಜ್ಗಳು ಇಂತಹ ವಿಷಯವನ್ನೇ ದೊಡ್ಡ ಸಂಗತಿಯಂತೆ ಬಿಂಬಿಸಿ ಕ್ಷಣಾರ್ಧದಲ್ಲಿ ಅದು ಎಲ್ಲೆಡೆ ಹಬ್ಬಲು ಕಾರಣವಾಗುತ್ತವೆ. ಆದರೆ, ಅದು ಯಾವುದೇ ತಪ್ಪು ಮಾಡದೇ, ಪರದೆ ಮೇಲೆ ಕಾಣಿಸಿಕೊಂಡವರು ವಿನಾಕಾರಣ ವಿವಾದಕ್ಕೆ ಸಿಲುಕಬೇಕಾಗುತ್ತದೆ. ಅದರಲ್ಲೂ ಯುವತಿಯರಿಗೆ ಇದು ತುಸು ಹೆಚ್ಚೇ ಕಾಡುತ್ತದೆ. ಹೀಗಾಗಿ ಈ ಬಾರಿಯಾದರೂ ಐಪಿಎಲ್ನಲ್ಲಿ ಇಂತಹ ಘಟನೆಗಳಿಗೆ ಆದ್ಯತೆ ಸಿಗದಿರಲಿ, ಮನರಂಜನೆಯ ಜೊತೆ ಸೂಕ್ಷ್ಮತೆಗೂ ಜಾಗ ಸಿಗಲಿ ಎಂಬುದೇ ಆಶಯ.
IPL 2021: ನಾಳಿನ ಪಂದ್ಯದಲ್ಲಿ ಮುಂಬೈ ಎದುರು ಗೆದ್ದು ಬೀಗಲಿದೆ ಆರ್ಸಿಬಿ! ಇದು ಅಂಕಿ- ಅಂಶಗಳು ನುಡಿದಿರುವ ಭವಿಷ್ಯ
(The other face of IPL Which harms some individuals and become the reason for Harassment)