ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಸೋಲಿನ ಬಳಿಕ, ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಕೇಳಿ ಬಂದಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ವಿರಾಟ್, ನಾಯಕನಾಗಿ ಹೇಳಬಾರದ ಹೇಳಿಕೆಯೊಂದನ್ನ ನೀಡಿದ್ರು. ಆದ್ರೀಗ ವಿರಾಟ್ ದಿಢೀರ್ ಅಂತ ಉಲ್ಟಾ ಹೊಡೆದು ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದ ಬಳಿಕ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೆಂಡಾಮಂಡಲವಾಗಿಬಿಟ್ರು. ಫೈನಲ್ ಪಂದ್ಯಕ್ಕೆ ಆಯ್ಕೆ ಮಾಡಿದ ತಂಡವೇ ಸರಿಯಾಗಿರಲಿಲ್ಲ ಎನ್ನುವ ಮೂಲಕ ವಿರಾಟ್, ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಬೊಟ್ಟು ಮಾಡಿ ತೋರಿಸಿದ್ರು.
ನಾವೆಲ್ಲಾ ಒಂದೇ ಕುಟುಂಬ ಎಂದ ಕೊಹ್ಲಿ!
ಟೆಸ್ಟ್ ಕ್ರಿಕೆಟ್ಗೆ ಬೇಕಾದ ಸಮಚಿತ್ತದಿಂದ ಆಡುವ ಆಟಗಾರರು ತಂಡದಲ್ಲಿರಬೇಕಿತ್ತು. ಯಾವುದೋ ಒಂದು ನಿಯಮವನ್ನ ಕಣ್ಣುಮುಚ್ಚಿ ಪಾಲಿಸುವುದರಲ್ಲಿ ಅರ್ಥವಿಲ್ಲ. ನಾವು ತಂಡದ ಅವಶ್ಯಕತೆಗಳೇನು ಎನ್ನುವುದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಇನ್ನಷ್ಟು ಚರ್ಚಿಸುತ್ತೇವೆ ಎಂದು ಕೊಹ್ಲಿ ಬಾಂಬ್ ಸಿಡಿಸಿದ್ರು.
ಆಂಗ್ಲರ ನೆಲದಲ್ಲಿ ನಾಯಕ ಕೊಹ್ಲಿ ನೀಡಿದ ಈ ಹೇಳಿಕೆ ಭಾರತೀಯ ಕ್ರಿಕೆಟ್ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಅನುಮಾನ ಹುಟ್ಟುವ ಹಾಕಿತ್ತು. ಜಾಗತಿಕವಾಗಿ ಬಿಸಿಸಿಐಗೂ ಕೊಹ್ಲಿ ನೀಡಿದ ಹೇಳಿಕೆ ಮುಜುಗರವನ್ನುಂಟು ಮಾಡಿತ್ತು. ಎದುರಾಳಿಗಳನ್ನು ಹಿಮ್ಮೆಟ್ಟಸಲು ಮತ್ತು ಹೆದರದೇ ಆಟವಾಡಲು ಸಿದ್ಧರಿರುವವರನ್ನು ಕಣಕ್ಕಿಳಿಸಬೇಕಿತ್ತು ಎನ್ನುವ ಕೊಹ್ಲಿ ಮಾತು, ರೋಹಿತ್ ಶರ್ಮಾ ಜೊತೆಗಿನ ವೈಮನಸ್ಸೇ ಕಾರಣ ಎನ್ನುವ ಗುಸು ಗುಸು ಶುರುವಾಗಿತ್ತು.
ಆದ್ರೀಗ ವಿರಾಟ್ ಕೊಹ್ಲಿ ಇದ್ದಕ್ಕಿದ್ದಂತೆ ಉಲ್ಟಾ ಹೊಡೆದಿದ್ದಾರೆ. ಪಂದ್ಯ ಮುಗಿದ ಬಳಿಕ ತಾನು ನೀಡಿದ ಹೇಳಿಕೆ ಎಡವಟ್ಟು ಸೃಷ್ಟಿಸಿದೆ ಅನ್ನೋದು ವಿರಾಟ್ಗೆ ಅರ್ಥವಾಗಿದೆ. ಹೀಗಾಗೇ ವಿರಾಟ್ ದಿಢೀರ್ ಅಂತ ಯೂ ಟರ್ನ್ ತೆಗೆದುಕೊಂಡಿದ್ದಾರೆ. 20 ಗಂಟೆಗಳ ಬಳಿಕ ಇನ್ಸ್ಟ್ರಾಗ್ರಾಮ್ನಲ್ಲಿ ಟೀಮ್ ಇಂಡಿಯಾ ಗ್ರೂಪ್ ಫೋಟೋ ಹಾಕಿರುವ ವಿರಾಟ್, ನಾವೇಲ್ಲಾ ಒಂದು ಕುಟುಂಬ ಎಂದು ಬರೆದುಕೊಂಡಿದ್ದಾರೆ.
ಇದೊಂದು ಕುಟುಂಬ
‘‘ಇದು ಕೇವಲ ತಂಡವಲ್ಲ. ಇದು ಒಂದು ಕುಟುಂಬ. ನಾವು ಒಟ್ಟಿಗೆ ಮುಂದೆ ಸಾಗುತ್ತೇವೆ.’’
-ವಿರಾಟ್ ಕೊಹ್ಲಿ, ಟೀಮ್ ಇಂಡಿಯಾ ನಾಯಕ
ಕ್ಯಾಪ್ಟನ್ ತೇಪೇ ಹಚ್ಚುವ ಕೆಲಸ ಮಾಡಿದ್ದಾರೆ
ಹೀಗೆ ವಿರಾಟ್ ತಮ್ಮ ಹೇಳಿಕೆಯಿಂದ ಬುಗಿಲೆದ್ದಿದ್ದ ಅಸಮಾಧಾನವನ್ನ ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ. ಎಲ್ಲಿ ವಿವಾದ ಸೃಷ್ಟಿಸುತ್ತೋ ಅನ್ನೋ ಭಯದಿಂದ, ಕ್ಯಾಪ್ಟನ್ ತೇಪೇ ಹಚ್ಚುವ ಕೆಲಸ ಮಾಡಿದ್ದಾರೆ. ಗೆದ್ದಾಗ ಎಗರಾಡುವ ವಿರಾಟ್, ನಾಯಕನಾಗಿ ಸೋಲನ್ನೂ ಸಮಾನ ಭಾವದಿಂದ ಸ್ವೀಕರಿಸುವುದನ್ನ ಕಲಿಯಬೇಕಿದೆ. ಇಲ್ಲಾ ಅಂದ್ರೆ ಪ್ರತಿ ಸೋಲಿಗೂ ತಂಡದ ಆಟಗಾರರತ್ತ ಬೊಟ್ಟು ಮಾಡಿದ್ರೆ, ತಂಡದೊಳಗಿನ ಅಸಮಾಧಾನ ಸ್ಫೋಟಗೊಳ್ಳಲಿದೆ. ಇದು ಪಂದ್ಯದ ಫಲಿತಾಂಶದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹೀಗಾಗಿ ವಿರಾಟ್ ಇನ್ಮುಂದಾದ್ರೂ ಸಿಲ್ಲಿ ಹೇಳಿಕೆಗಳನ್ನ ನೀಡಿ, ಟೀಮ್ ಇಂಡಿಯಾ, ಬಿಸಿಸಿಐ ಘನತೆಗೆ ಚ್ಯುತಿ ತರುವಂತ ಕೆಲಸ ಮಾಡದಿರಲಿ.