ವಿರಾಟ್ ಕೊಹ್ಲಿಗೆ ಇದುವರೆಗೆ ಒಮ್ಮೆಯೂ ಐಸಿಸಿ ಪ್ರಾಯೋಜಿಸುವ ಟ್ರೋಫಿಯೊಂದನ್ನು ಗೆಲ್ಲಲು ಸಾಧ್ಯವಾಗಿಲ್ಲ ಎಂಬ ಅಂಶವನ್ನೇ ಮುಂದಿಟ್ಟುಕೊಂಡು ಅವರ ನಾಯಕತ್ವವನ್ನು ಟೀಕಿಸುತ್ತಿರುವವರ ಯೋಗ್ಯತೆಯನ್ನು ಪಾಕಿಸ್ತಾನದ ಮಾಜಿ ವಿಕೆಟ್-ಕೀಪರ್/ಬ್ಯಾಟ್ಸ್ಮನ್ ಕಮ್ರಾನ್ ಅಕ್ಮಲ್ ಅವರು ಪ್ರಶ್ನಿಸಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ನಂತರ ಕೊಹ್ಲಿ ನಾಯಕತ್ವ ಟೀಕಿಸುವುದನ್ನೇ ಚಟವಾಗಿಸಿಕೊಂಡಿರುವ ಕೆಲವರು, ಅವರು 2017ರ ಚಾಂಪಿಯನ್ಸ್ ಟ್ರೋಫಿ ಮತ್ತು 2019 ವಿಶ್ವಕಪ್ ಸೇರಿದಂತೆ ಯಾವುದೆ ಐಸಿಸಿ ಟೂರ್ನಿಯನ್ನು ಗೆದ್ದಿಲ್ಲ ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಅಕ್ಮಲ್ ಹೇಳಿದ್ದಾರೆ. ಕ್ರಿಕೆಟ್ ಬಗ್ಗೆ ಗೊತ್ತಿಲ್ಲದವರೂ ಮನಬಂದಂತೆ ಟೀಕೆ ಮಾಡುತ್ತಿದ್ದಾರೆ ಎಂದು ಪಾಕಿಸ್ತಾನಿ ಆಟಗಾರ ಹೇಳಿದ್ದಾರೆ.
ಮಹೇಂದ್ರಸಿಂಗ್ ಧೋನಿ ಅವರ ನಂತರ ಭಾರತ ಕಂಡಿರುವ ಅತ್ಯುತ್ತಮ ಕ್ಯಾಪ್ಟನ್ ಎಂದರೆ ಕೊಹ್ಲಿ ಎಂದು ಹೇಳಿರುವ ಅಕ್ಮಲ್, ಭಾರತದ ನಾಯಕನಿಗೆ ತಾನು ನಿರ್ವಹಿಸುತ್ತಿರುವ ಜವಾಬ್ದಾರಿಯ ಸಂಪೂರ್ಣ ಅರಿವಿದೆ ಮತ್ತು ಅವರ ನಾಯಕತ್ವದ ಬಗ್ಗೆ ಮಾತಾಡುವವರು ಕೊಹ್ಲಿ ಟೀಮಿಗೆ ಮತ್ತು ಟೀಮಿನ ಸದಸ್ಯರಲ್ಲಿ ಆತ್ಮವಿಶ್ವಾಸ ತುಂಬಲು ನೀಡಿರುವ ಕಾಣಿಕೆಯನ್ನು ಕಡೆಗಣಿಸಬಾರದು ಎಂದು ಹೇಳಿದ್ದಾರೆ.
‘ವಿರಾಟ್ ಕೊಹ್ಲಿ ಅವರು ಮಹೇಂದ್ರಸಿಂಗ್ ನಂತರ ಭಾರತದ ಅತ್ಯುತ್ತಮ ನಾಯಕನಾಗಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅವರು 70ಶತಕಗಳನ್ನು ಬಾರಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಮತ್ತು 2019ರ ವಿಶ್ವಕಪ್ನಲ್ಲಿ ಅವರು ಇಂಡಿಯಾ ಟೀಮಿನ ನಾಯಕರಾಗಿದ್ದರು ಅನ್ನೋದು ಸತ್ಯ. ಆ ಟೂರ್ನಿಗಳನ್ನು ಭಾರತ ಸೋತದ್ದಕ್ಕೆ ಕೊಹ್ಲಿ ಹೇಗೆ ತಪ್ಪಿತಸ್ಥರಾಗುತ್ತಾರೆ? ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ 5 ವರ್ಷಗಳಿಂದ ನಂಬರ್ ವನ್ ಸ್ಥಾನದಲ್ಲಿದೆ. ಅವರ ಸಾಧನೆಯನ್ನೊಮ್ಮೆ ನೋಡಿ. ಅವರೊಬ್ಬ ಅಪ್ರತಿಮ ನಾಯಕ. ಅಸಾಧಾರಣ ಆಟಗಾರರೂ ಆಗಿರುವ ಅವರು ತಮ್ಮನ್ನು ತಾವು ಆ ಹಂತಕ್ಕೆ ತೆಗೆದುಕೊಂಡು ಹೋಗಿರುವುದು ಒಂದು ವಿಸ್ಮಯವಲ್ಲದೆ ಮತ್ತೇನೂ ಅಲ್ಲ,’ ಎಂದು ಸವೇರ ಪಾಶಾ ಅವರ ಯೂಟ್ಯೂಬ್ ಕಾರ್ಯಕ್ರಮದಲ್ಲಿ ಅಕ್ಮಲ್ ಹೇಳಿದ್ದಾರೆ.
ಐಸಿಸಿ ಟ್ರೋಫಿಗಳನ್ನು ಗೆಲ್ಲುವ ವಿಚಾರಕ್ಕೆ ಸಂಬಂದಿಸಿದಂತೆ ಹೇಳುವುದಾದರೆ, ಪಂದ್ಯಗಳ ಫಲಿತಾಂಶಗಳು ಆ ನಿರ್ದಿಷ್ಟ ದಿನದ ವಾತಾವರಣ, ಟೀಮಿನ ಕಂಪೋಸಿಷನ್ ಮೊದಲಾದವುಗಳ ಮೇಲೆ ಅವಲಂಬಿತವಾಗಿರುತ್ತದೆ. ಒಂದು ಪಕ್ಷ ಕೊಹ್ಲಿ ಸ್ಥಾನಕ್ಕೆ ಬೇರೆಯವರನ್ನು ತಂದರೂ ಅವರು ಟ್ರೋಫಿ ಗೆಲ್ಲುತ್ತಾರೆನ್ನುವುದಕ್ಕೆ ಏನು ಖಾತರಿ?’ ಎಂದಿ ಆಕ್ಮಲ್ ಕೇಳಿದ್ದಾರೆ.
‘ಅವರೊಬ್ಬ ಅದ್ಭುತ ಆಟಗಾರ ಮತ್ತು ಅದ್ಭುತ ನಾಯಕ. ಅವರನ್ನು ಬದಲಾಯಿಸಿದರೆ ಬಾರತ ಐಸಿಸಿ ಟ್ರೋಫಿಗಳನ್ನು ಗೆದ್ದೀತು ಅಂತ ಯಾರೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಅದಕ್ಕೆ ಅದೃಷ್ಟದ ಬೆಂಬಲವೂ ಬೇಕು. ಕ್ರಿಕೆಟ್ ಬಗ್ಗೆ ಗೊತ್ತಿಲ್ಲದವರಿಗೆ ಬೊಟ್ಟು ಮಾಡಿ ತೋರಿಸುವುದು ಸುಲಭ. ಒಂದು ಗಲ್ಲಿ ಟೀಮಿನ ನಾಯಕತ್ವ ವಹಿಸದವರೂ ಕೊಹ್ಲಿಗೆ ಸಲಹೆ ನೀಡುತ್ತಿದ್ದಾರೆ ಮತ್ತು ಅವರನ್ನು ನಾಯಕತ್ವದಿಂದ ಕೆಳಗಿಳಿಸಬೇಕು ಎಂದು ಹೇಳುತ್ತಿದ್ದಾರೆ,’ ಎಂದು ಅಕ್ಮಲ್ ಹೇಳಿದ್ದಾರೆ.
‘ಇಂಥ ಮಾತುಗಳಿಗೆಲ್ಲ ಕೊಹ್ಲಿ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಮಾನಸಿಕವಾಗಿ ಅವರು ಸಧೃಡರಾಗಿದ್ದಾರೆ ಮತ್ತು ಅದ್ವಿತೀಯ ಪರ್ಫಾರ್ಮರ್ ಆಗಿದ್ದಾರೆ. ಸಾಧನೆಯ ದೃಷ್ಟಿಯಿಂದ ನೋಡಿದರೆ ಯಾರೂ ಅವರ ಹತ್ತರಕ್ಕೆ ಬರಲಾರರು. ಎಲ್ಲ ಫಾರ್ಮಾಟ್ಗಳಲ್ಲಿ 50 ಕ್ಕಿಂತ ಜಾಸ್ತಿ ಸರಾಸರಿಯೊದಿಗೆ 70 ಸೆಂಚುರಿಗಳನ್ನು ಬಾರಿಸುವುದು ನಂಬಲಸದಳ ಸಾಧನೆ,’ ಎಂದು ಅಕ್ಮಲ್ ಹೇಳಿದ್ದಾರೆ.
ಇದನ್ನೂ ಓದಿ: Virat Kohli: ಕೊಹ್ಲಿ ಒಬ್ಬ ನತದೃಷ್ಟ ನಾಯಕ! ಕೇವಲ ಆತನೊಬ್ಬನನ್ನು ಮಾತ್ರ ಏಕೆ ದೂಷಿಸುತ್ತಾರೆ? ವಿರಾಟ್ ಪರ ನಿಂತ ಅರುಣ್ ಲಾಲ್
Published On - 6:22 pm, Sat, 3 July 21