ಅದು 2018ರ ಸೆಪ್ಟೆಂಬರ್, ದೇಶೀಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ 83.90 ಮೀಟರ್ ಜಾವೆಲಿನ್ ಎಸೆಯುವ ಮೂಲಕ ನೀರಜ್ ಚೋಪ್ರಾ (Neeraj Chopra) ಎಂಬ ಹೊಸ ಪ್ರತಿಭೆಯೊಂದರ ಅನಾವರಣವಾಗಿತ್ತು. ಇದರ ಬೆನ್ನಲ್ಲೇ ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ತಂದುಕೊಟ್ಟರು. ಅದರಲ್ಲೂ ಏಷ್ಯನ್ ಗೇಮ್ಸ್‌ನಲ್ಲಿ 88.06 ಮೀ ದೂರ ಜಾವೆಲಿನ್ ಎಸೆದು ದಾಖಲೆ ಬರೆದರು. ಹೀಗಾಗಿ ಈ ಬಾರಿಯ ಒಲಿಂಪಿಕ್ಸ್ನಲ್ಲಿ ಜಾವೆಲಿನ್ ವಿಭಾಗದಲ್ಲಿ ಪದಕ ಖಚಿತ ಎನ್ನಲಾಗಿತ್ತು. ಆದರೆ 2019 ರಲ್ಲಿ ನೀರಜ್ ತಮ್ಮ ವೇಗವನ್ನು ಕಳೆದುಕೊಂಡಿದ್ದರು. ಭುಜದ ಬಿಗಿತ, ಮೊಣ ಕೈ ನೋವು ಮತ್ತು ಬೆನ್ನು ನೋವಿನಿಂದ ಯುವ ಜಾವೆಲಿನ್ ಎಸೆತಗಾರ ಬಳಲುತ್ತಿದ್ದರು. ಈ ವೇಳೆ ಪರೀಕ್ಷಿಸಿದಾಗ, ಶಸ್ತ್ರ ಚಿಕಿತ್ಸೆ ಅತ್ಯಗತ್ಯ ಎಂದು ವೈದ್ಯರು ತಿಳಿಸಿದ್ದರು.
ಅಷ್ಟೇ ಅಲ್ಲದೆ ಈ ಸಮಸ್ಯೆಯನ್ನು ಮುಂದುವರೆಸಿ ಮುಂದೆ ಜಾವೆಲಿನ್ ಎಸೆಯಲಾಗುವುದಿಲ್ಲ. ನಿಮಗೆ ಭುಜದ ಬಿಗಿತ ಸಮಸ್ಯೆಯು ಕಳೆದ ಒಂದು ವರ್ಷದಿಂದ ಇದೆ. ಆದರೆ ನಿಮ್ಮ ಫಿಸಿಯೋ ಮಾಡಿದ ನಿರ್ಲಕ್ಷ್ಯದಿಂದ ಇದೀಗ ಸಮಸ್ಯೆ ಬಿಗಡಾಯಿಸಿದೆ ಎಂದು ವೈದ್ಯರು ಎಚ್ಚರಿಸಿದರು. ಇನ್ನೇನು ಒಲಿಂಪಿಕ್ಸ್ ಆರಂಭವಾಗಲು ವರ್ಷ ಮಾತ್ರ ಉಳಿದಿತ್ತು. ಮೈದಾನದಲ್ಲೇ ಹೆಚ್ಚು ಸಮಯ ಕಳೆಯಬೇಕಿದ್ದ ನೀರಜ್ ಚೋಪ್ರಾ ಅನಿವಾರ್ಯವಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಯಿತು. ತಿಂಗಳುಗಳ ಕಾಲ ಬೆಡ್ ಮೇಲೆ ಕಳೆದ ನೀರಜ್ ಇನ್ನೇನು ಮತ್ತೆ ಮೈದಾನಕ್ಕಿಳಿಯಬೇಕು ಅನ್ನುವಷ್ಟರಲ್ಲಿ ಕೊರೋನಾ ಲಾಕ್ಡೌನ್ ಶುರುವಾಗಿತ್ತು. ಹೀಗಾಗಿ ನೀರಜ್ ಕೆರಿಯರ್ ಮುಗಿಯಿತು ಎಂದೇ ಎಲ್ಲರೂ ಭಾವಿಸಿದ್ದರು.
ಆದರೆ ಜಾವೆಲಿನ್ಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದ ನೀರಜ್ ಚೋಪ್ರಾ ಸೋಲೋಪ್ಪಿಕೊಳ್ಳಲು ಮಾತ್ರ ಸಿದ್ಧರಿರಲಿಲ್ಲ. ಸಮಯ ಸಿಕ್ಕಾಗೆಲ್ಲಾ ಅಭ್ಯಾಸ ನಡೆಸಿದರು. ಟೋಕಿಯೋ ಒಲಿಂಪಿಕ್ಸ್ಗಾಗಿ ಬೇಕಾದ ಸಿದ್ಧತೆಗಳನ್ನು ಶುರು ಮಾಡಿದರು. ಲಾಕ್ಡೌನ್ ಮುಗಿಯುತ್ತಿದ್ದಂತೆ ಮೈದಾನಕ್ಕಿಳಿದು ಬೆವರಿಸಿಳಿದರು. ಸತತ ಅಭ್ಯಾಸ, ಕಠಿಣ ಪರಿಶ್ರಮದೊಂದಿಗೆ ತಮ್ಮ ಹಿಂದಿನ ವೇಗವನ್ನು ಮರಳಿ ಪಡೆದರು. ಅಷ್ಟೇ ಅಲ್ಲದೆ ಪದಕ ಗೆಲ್ಲುವ ದೃಢ ನಿಶ್ಚಯದೊಂದಿಗೆ ಟೋಕಿಯೋ ಒಲಿಂಪಿಕ್ಸ್ ಗ್ರಾಮಕ್ಕೆ ಆಗಮಿಸಿದ್ದರು.
ಕ್ರೀಡಾಕೂಟ ಆರಂಭದವರೆಗೆ ನೀರಜ್ ಚೋಪ್ರಾ ಎಂಬ ಸ್ಪರ್ಧಿಯೊಬ್ಬರಿದ್ದಾರೆ ಎಂಬುದೇ ಅನೇಕರಿಗೆ ತಿಳಿದಿರಲಿಲ್ಲ. ತನ್ನ ವಿಭಾಗದ ಸ್ಪರ್ಧೆಗಳು ಆರಂಭವಾಗುತ್ತಿದ್ದಂತೆ ನೀರಜ್ ಗೆಲುವಿನ ಮೆಟ್ಟಿಲೇರುತ್ತಾ ಬಂದರು. ಕ್ವಾರ್ಟರ್, ಸೆಮಿ ಫೈನಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಅದರೊಂದಿಗೆ ಪದಕದ ಬೇಟೆಯಲ್ಲಿ ನೀರಜ್ ಹೆಸರು ಕಾಣಿಸಿಕೊಳ್ಳಲಾರಂಭಿಸಿತು. ಅದರಲ್ಲೂ ಅಂತಿಮ 12 ಸ್ಪರ್ಧಿಗಳ ಪಟ್ಟಿಯಲ್ಲಿ ನೀರಜ್ ಅವಕಾಶ ಪಡೆದರು.
ಫೈನಲ್ ಪಂದ್ಯವು ಜಾವೆಲಿನ್ ಎಸೆತಗಾರರ ದಂಡೇ ಇರುವ ಜೆಕ್ ಗಣರಾಜ್ಯದ ಹಾಗೂ ಜರ್ಮನಿಯ ಸ್ಪರ್ಧಾಳುಗಳ ನಡುವೆ ಆಗಿತ್ತು. ಆರಂಭದಿಂದಲೇ ಪೈಪೋಟಿಗೆ ಕಾರಣವಾಗಿದ್ದ ಈ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಪ್ರಥಮ ಸುತ್ತಿನಲ್ಲಿ 87.03 ಮೀಟರ್ ದೂರ ಎಸೆಯುವ ಮೂಲಕ ಮುನ್ನಡೆ ಸಾಧಿಸಿದರು. ಹಾಗೆಯೇ 2ನೇ ಸುತ್ತಿನಲ್ಲಿ ನೀರಜ್ ಎಸೆದ ಥ್ರೋ 87.58 ಮೀಟರ್ ತಲುಪಿತು. ಇದಾಗ್ಯೂ ಪದಕ ಖಚಿತ ಎಂದು ಹೇಳುವಂತಿಲ್ಲ. ಏಕೆಂದರೆ ಎದುರಾಳಿಗಳೂ ಅಷ್ಟೇ ಬಲಿಷ್ಠರಾಗಿದ್ದರು. ಇನ್ನು 3ನೇ ಸುತ್ತಿನಲ್ಲಿ 76.79 ಮೀಟರ್ ಅಷ್ಟೇ ಎಸೆಯಲು ಶಕ್ತರಾದರು. 4ನೇ ಮತ್ತು 5ನೇ ಸುತ್ತಿನಲ್ಲಿ ಫೌಲ್ ಆದ ಕಾರಣ ಆತಂಕ ಎದುರಾಗಿತ್ತು. ಇದಾಗ್ಯೂ 6ನೇ ಸುತ್ತಿನಲ್ಲಿ 84.24 ದೂರ ಎಸೆಯುವ ಮೂಲಕ ತಮ್ಮ ರೌಂಡ್ ಮುಗಿಸಿದರು.
ಅತ್ತ ಜೆಕ್ ರಿಪಬ್ಲಿಕ್ ಸ್ಪರ್ಧಿ ಜಾಕೋಬ್ ವಡ್ಲೇಜ್ 86.67 ಮೀಟರ್ ಎಸೆಯುವ ಮೂಲಕ ಕಂಬ್ಯಾಕ್ ಮಾಡುವ ನಿರೀಕ್ಷೆ ಹುಟ್ಟುಹಾಕಿದರು. ಇದಾಗ್ಯೂ 6 ಸುತ್ತಿನಲ್ಲಿ ನೀರಜ್ ಎಸೆದ 2ನೇ ಸುತ್ತಿನ 87.58 ಮೀಟರ್ ಥ್ರೋವನ್ನು ದಾಟಲು ಯಾವೊಬ್ಬ ಸ್ಪರ್ಧಿಗಳಿಗೂ ಸಾಧ್ಯವಾಗಿಲ್ಲ. ಇದರೊಂದಿಗೆ ನೀರಜ್ ಚೋಪ್ರಾ ಅವರ ಚಿನ್ನದ ಪದಕ ಖಚಿತವಾಯಿತು. ಶಸ್ತ್ರ ಚಿಕಿತ್ಸೆ ಬಳಿಕದ ಸತತ ಪರಿಶ್ರಮ ಹಾಗೂ ಕಠಿಣ ಅಭ್ಯಾಸಕ್ಕೆ ಕೊನೆಗೂ ಪ್ರತಿಫಲ ದೊರಕಿತು. ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದು ನೀರಜ್ ಚೋಪ್ರಾ ಭಾರತದ ಬಂಗಾರದ ಮನುಷ್ಯ ಎನಿಸಿಕೊಂಡರು.
ಇದನ್ನೂ ಓದಿ: Neeraj Chopra: ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತಕ್ಕಿದು 2ನೇ ಚಿನ್ನದ ಪದಕ
ಇದನ್ನೂ ಓದಿ: Tokyo Olympics 2020: ಒಲಿಂಪಿಕ್ಸ್ ಇತಿಹಾಸದಲ್ಲೇ ಸರ್ವಶ್ರೇಷ್ಠ ಸಾಧನೆ ಮಾಡಿದ ಭಾರತ