ಭಾರತ ಮಹಿಳಾ ಹಾಕಿ ತಂಡದ ಕೋಚ್ ಕೊಡಗಿನ ಅಂಕಿತಾ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸನ್ಮಾನ
ಪದಕ ಗೆಲ್ಲಲು ಸಾಧ್ಯವಾಗದಿದ್ದರೂ ಭಾರತೀಯರ ಮನಸ್ಸನ್ನು ಆ ಮಹಿಳಾ ತಂಡ ಗೆದ್ದಿದೆ. ಆ ತಂಡದ ತರಬೇತಿದಾರರಾದ ನಿಮಗೆ ತುಂಬು ಹೃದಯದ ಶುಭಾಶಯ ಕೋರುತ್ತೇನೆ.
ಬೆಂಗಳೂರು: ಭಾರತೀಯ ಮಹಿಳಾ ಹಾಕಿ ತಂಡದ ತರಬೇತುದಾರರಲ್ಲಿ ಒಬ್ಬರಾದ ಕೋಚ್ ಅಂಕಿತಾ ಅವರನ್ನು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ ಸನ್ಮಾನಿಸಿ ಗೌರವಿಸಿದರು. ಟೋಕಿಯೋ ಒಲಂಪಿಕ್ ಟೂರ್ನಿಯಲ್ಲಿ ಭಾರತ ಮಹಿಳಾ ಹಾಕಿ ತಂಡ ಅತ್ಯುತ್ತಮ ಪ್ರದರ್ಶನ ತೋರಿದೆ. ಪದಕ ಗೆಲ್ಲಲು ಸಾಧ್ಯವಾಗದಿದ್ದರೂ ಭಾರತೀಯರ ಮನಸ್ಸನ್ನು ಆ ಮಹಿಳಾ ತಂಡ ಗೆದ್ದಿದೆ. ಆ ತಂಡದ ತರಬೇತಿದಾರರಾದ ನಿಮಗೆ ತುಂಬು ಹೃದಯದ ಶುಭಾಶಯ ಕೋರುತ್ತೇನೆ. ಕನ್ನಡದ ಯುವತಿ ಭಾರತ ತಂಡದ ಕೋಚ್ ಆಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಸಿಎಂ ಹೇಳಿದರು.
ಅಂಕಿತ ಅವರು ಮಡಿಕೇರಿ ಮೂಲದವರು. ಇವರ ತರಬೇತಿಯಲ್ಲಿ ಪಳಗಿದ ದೇಶದ ಮಹಿಳಾ ಹಾಕಿ ತಂಡ ಬಲಿಷ್ಠವಾಗಿದೆ. ಕಳೆದ ಎರಡು ವರ್ಷಗಳಿಂದ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಅಂಕಿತಾ ತರಬೇತಿ ನೀಡುತ್ತಿದ್ದಾರೆ. ಹಲವಾರು ವರ್ಷಗಳ ಬಳಿಕ ಓಲಂಪಿಕ್ ನಲ್ಲಿ ಮಹಿಳಾ ತಂಡ ಸೆಮಿಫೈನಲ್ ಹಂತಕ್ಕೆ ತಲುಪಿ ಅಭೂತಪೂರ್ವ ಅಮೋಘ ಸಾಧನೆ ಮಾಡಿದೆ. ಒಟ್ಟು ಮೂರು ಜನ ಕೋಚ್ ಗಳ ಪೈಕಿ ಅಂಕಿತಾ ಒಬ್ಬರು. ಅವರು ಕನ್ನಡಿಗರು ಅಂಬುದು ಶ್ಲಾಘನೀಯ ಮತ್ತು ಹೆಮ್ಮೆ ಎಂದು ಸಿಎಂ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಭಾರತದ ವನಿತೆಯರ ತಂಡವು ಇದೇ ಮೊದಲ ಬಾರಿಗೆ ಹಾಕಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ ಸಾಧನೆ ಮಾಡಿತ್ತು. ಈ ಮೊದಲು ಮಾಸ್ಕೋದಲ್ಲಿ 1980ರಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ನಾಲ್ಕನೇ ಸ್ಥಾ ಪಡೆದಿತ್ತು. ಆದರೆ ಆ ಒಲಂಪಿಕ್ಸ್ ಗೆ ಹಲವು ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದವು. ಹಾಗಾಗಿ ಕೇವಲ ಆರು ತಂಡಗಳು ಹಾಕಿ ಪಂದ್ಯದಲ್ಲಿ ಭಾಗವಹಿಸಿದ್ದವು.