‘ಚಕ್ ದೇ ಇಂಡಿಯಾ ಪಾರ್ಟ್ 2’ ಮಾಡುವ ಸಮಯ ಬಂದಿದೆ: ಭಾರತದ ವನಿತೆಯರ ಹಾಕಿ ಕೋಚ್ ಜೋರ್ಡ್ ಮರಿಜ್ನೆ
Shah Rukh Khan: ಭಾರತದ ವನಿತೆಯರ ತಂಡಕ್ಕೆ ಕಂಚಿನ ಪದಕ ಕೈತಪ್ಪಿ ಹೋದರೂ ಇಡೀ ದೇಶ ಅವರ ಸಾಧನೆಗೆ ಹೆಮ್ಮೆ ಪಟ್ಟಿದೆ. ಈ ನಡುವೆ, ಮುಖ್ಯ ಕೋಚ್ ಜೋರ್ಡ್ ಮರಿಜ್ನೆ ಇದೀಗ ಚಕ್ ದೇ ಇಂಡಿಯಾ ಪಾರ್ಟ್ 2 ಮಾಡುವ ಸಮಯ ಬಂದಿದೆ ಎಂದಿದ್ದಾರೆ.
‘ಚಕ್ ದೇ ಇಂಡಿಯಾ’ ಚಿತ್ರದ ಎರಡನೇ ಭಾಗವನ್ನು ಮಾಡಲು ಈಗ ಸೂಕ್ತ ಸಮಯ ಎಂದಿದ್ದಾರೆ ಭಾರತದ ವನಿತೆಯರ ಹಾಕಿ ತಂಡದ ಮುಖ್ಯ ಕೋಚ್ ಜೋರ್ಡ್ ಮರಿಜ್ನೆ. ಟೊಕಿಯೊ ಒಲಂಪಿಕ್ಸ್ ನಲ್ಲಿ ಇಂದು ಕಂಚಿನ ಪದಕಕ್ಕಾಗಿ ಭಾರತೀಯ ವನಿತೆಯರ ತಂಡ ಮತ್ತು ಗ್ರೇಟ್ ಬ್ರಿಟನ್ ನಡುವಿನ ಹಣಾಹಣಿಯಲ್ಲಿ, ಅತ್ಯುತ್ತಮ ಪ್ರಯತ್ನದ ಹೊರತಾಗಿಯೂ ಭಾರತ ಸೋಲು ಅನುಭವಿಸಿತು. ಆದರೆ ಭಾರತ ತಂಡದ ವೀರೋಚಿತ ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹಿತ ದೇಶದ ಅಭಿಮಾನಿಗಳಿಂದ ಶುಭಾಶಯ ವ್ಯಕ್ತವಾಗಿದೆ. ಭಾರತದ ವನಿತೆಯರ ತಂಡಕ್ಕೆ ಕೋಚ್ ಮರಿಜ್ನೆ ಕೂಡಾ ಶಹಬ್ಬಾಸ್ ಎಂದಿದ್ದು, ತಂಡಕ್ಕೆ ಬೆಂಬಲ ವ್ಯಕ್ತಪಡಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ಭಾರತೀಯ ವನಿತೆಯರಿಗೆ ಹಾಕಿ ಆಟದ ಕುರಿತು ಬಹಳ ಪ್ರಭಾವಿಸಿದೆ ಎನ್ನಲಾಗುವ, ಶಾರುಖ್ ಖಾನ್ ನಟನೆಯ ‘ಚಕ್ ದೇ ಇಂಡಿಯಾ’ ಚಿತ್ರದ ಕುರಿತು ಮಾತನಾಡಿರುವ ಕೋಚ್ ಜೋರ್ಡ್ ಮರಿಜ್ನೆ, ಚಿತ್ರವನ್ನು ಶ್ಲಾಘಿಸಿದ್ದಾರೆ. ಎನ್ಡಿಟಿವಿಗೆ ಅವರು ನೀಡಿದ ಹೇಳಿಕೆಯಲ್ಲಿ, “ನಾನು ಚಕ್‌ದೇ ಇಂಡಿಯಾ ಚಿತ್ರವನ್ನು ನೋಡಿದ್ದೇನೆ. ಅತ್ಯುತ್ತಮವಾದ ಚಿತ್ರವದು. ನಮ್ಮ ತಂಡದ ವನಿತೆಯರೂ ಅದರಿಂದ ಪ್ರಭಾವಿತರಾಗಿದ್ದಾರೆ. ಆದರೆ ನಾನು ಅವರಿಗೆ, ನೀವು ನಿಮ್ಮದೇ ಬದುಕಿನ ಚಿತ್ರವೊಂದರಲ್ಲಿದ್ದೀರಿ. ಈಗ ಚಕ್ ದೇ ಇಂಡಿಯಾ ಎರಡನೇ ಭಾಗವನ್ನು ಸ್ವತಃ ನೀವು ನಿರ್ಮಿಸುವ ಅವಕಾಶ ನಿಮ್ಮೆದುರಿದೆ ಎಂದಿದ್ದೆ” ಎಂದು ಮರಿಜ್ನೆ ತಿಳಿಸಿದ್ದಾರೆ.
ಕಂಚಿನ ಪದಕದ ಪಂದ್ಯದಲ್ಲಿ ಭಾರತ ತಂಡ ಸೋತಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದ ನಟ ಶಾರುಖ್ ಖಾನ್ ಅವರಿಗೆ ಟ್ವೀಟ್ ಮೂಲಕ ಕೋಚ್ ಮರಿಜ್ನೆ ನೀಡಿರುವ ಉತ್ತರ ಎಲ್ಲರ ಗಮನ ಸೆಳೆದಿದೆ. ‘ಚೆನ್ನಾಗಿ ಆಡಿದ್ದೀರಿ. ಭಾರತದ ಎಲ್ಲರನ್ನೂ ಪ್ರಭಾವಿಸಿದ ನಿಮಗೆ, ಅದುವೇ ಬಹುದೊಡ್ಡ ಜಯ’ ಎಂದು ಶಾರುಖ್ ಟ್ವೀಟ್ ಮಾಡಿದ್ದರು. ಅದಕ್ಕೆ ಉತ್ತರಿಸಿದ್ದ ಜೋರ್ಡ್ ಮರಿಜ್ನೆ, ‘ನಿಮ್ಮ ಪ್ರೀತಿಗೆ ಧನ್ಯವಾದಗಳು ಶಾರುಖ್, ಬಾಲಿವುಡ್‌ನ ಅತ್ಯುತ್ತಮ ನಟನಿಂದ ದೊರೆಯುತ್ತಿರುವ ಪ್ರೋತ್ಸಾಹಕ್ಕೆ ಖುಷಿಯಿದೆ. ಈಗ ಚಕ್ ದೇ ಪಾರ್ಟ್ 2 ಮಾಡುವುದಕ್ಕೆ ಸಮಯ ಬಂದಿದೆ, ಏನಂತೀರಿ?’ ಎಂದು ಪ್ರತಿಕ್ರಿಯಿಸಿದ್ದಾರೆ. ಇದು ಈಗ ನೆಟ್ಟಿಗರ ಗಮನ ಸೆಳೆದಿದೆ.
ಜೋರ್ಡ್ ಮರಿಜ್ನೆ ಮಾಡಿರುವ ಟ್ವೀಟ್:
Thank you @srk for all the love ! It’s great to have support from the best in Bollywood. It’s time for Chak De part 2, what say? ? https://t.co/ikJQv3VjdL
— Sjoerd Marijne (@SjoerdMarijne) August 6, 2021
ಭಾರತದ ವನಿತೆಯರ ತಂಡವು ಇದೇ ಮೊದಲ ಬಾರಿಗೆ ಹಾಕಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ ಸಾಧನೆ ಮಾಡಿತ್ತು. ಈ ಮೊದಲು ಮಾಸ್ಕೋದಲ್ಲಿ 1980ರಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ನಾಲ್ಕನೇ ಸ್ಥಾ ಪಡೆದಿತ್ತು. ಆದರೆ ಆ ಒಲಂಪಿಕ್ಸ್ ಗೆ ಹಲವು ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದವು. ಹಾಗಾಗಿ ಕೇವಲ ಆರು ತಂಡಗಳು ಹಾಕಿ ಪಂದ್ಯದಲ್ಲಿ ಭಾಗವಹಿಸಿದ್ದವು.
ಇದನ್ನೂ ಓದಿ:
Tokyo Olympics: ಹಾಕಿ ಸ್ಟಿಕ್ ಹಿಡಿದ ನಾರಿಯರ ಗೆಲುವಿನೊಂದಿಗಿದೆ ಕಣ್ಣೀರ ಕಥೆ; ಒಬ್ಬೊಬ್ಬರದು ಒಂದೊಂದು ಕಹಾನಿ
(Is it the time for Chak de India 2, what would the Indian women hockey team coach Sjoerd Marijne says to Shah Rukh khan)
Published On - 3:00 pm, Fri, 6 August 21