Tokyo Olympics: ‘ಭಾರತಕ್ಕೆ ತನ್ನ ಆಟಗಾರರ ಕುರಿತು ಹೆಮ್ಮೆಯಿದೆ’ ಎಂದು ಹಾಕಿ ತಂಡದ ಬೆಂಬಲಕ್ಕೆ ನಿಂತ ಪ್ರಧಾನಿ ಮೋದಿ
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸರಣಿ ಟ್ವೀಟ್ಗಳ ಮೂಲಕ ಭಾರತ ಪುರುಷರ ಹಾಕಿ ತಂಡದ ಶ್ರಮವನ್ನು ಶ್ಲಾಘಿಸಿದ್ದಾರೆ. ಸೆಮಿಫೈನಲ್ನಲ್ಲಿ ಬೆಲ್ಜಿಯಂ ವಿರುದ್ಧ ಸೋತರೂ ಸಹ, ಕಂಚಿನ ಪದಕವನ್ನು ಭಾರತ ಜಯಿಸಿಲಿ ಎಂದು ಅವರು ಶುಭಹಾರೈಸಿದ್ದಾರೆ.
ಟೊಕಿಯೊ ಒಲಂಪಿಕ್ಸ್: ಇಂದು (ಆಗಸ್ಟ್ 3ರ ಮಂಗಳವಾರ) ನಡೆದ ಟೊಕಿಯೊ ಒಲಂಪಿಕ್ಸ್ನ ಪುರುಷರ ಹಾಕಿ ಸೆಮಿಫೈನಲ್ನಲ್ಲಿ ಭಾರತ ತಂಡವು ಬೆಲ್ಜಿಯಂ ತಂಡಕ್ಕೆ ಶರಣಾಯಿತು. ಇದರಿಂದಾಗಿ 41 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿ ಚಿನ್ನ ಗೆಲ್ಲುವ ಭಾರತದ ಬಯಕೆ ಸಾಕಾರವಾಗಲಿಲ್ಲ. ಈಗ ಭಾರತದ ಪ್ರಧಾನಿ ನರೇಂದ್ರ ಮೋದಿ ಪಂದ್ಯ ಸೋತ ಭಾರತ ತಂಡದ ಬೆಂಬಲಕ್ಕೆ ನಿಂತಿದ್ದು, ಮುಂದೆ ನಡೆಯುವ ಪಂದ್ಯದಲ್ಲಿ ಕಂಚಿನ ಪದಕ ಗೆಲ್ಲುವಂತೆ ಹಾರೈಸಿದ್ದಾರೆ.
ಸರಣಿ ಟ್ವೀಟ್ಗಳ ಮೂಲಕ ಆಟಗಾರರಿಗೆ ಸಮಾಧಾನದ ಮಾತುಗಳನ್ನು ಹೇಳಿರುವ ನರೇಂದ್ರ ಮೋದಿ, ‘ಸೋಲು ಗೆಲುವುಗಳು ಆಟದ ಒಂದು ಭಾಗ. ಒಲಂಪಿಕ್ಸ್ನಲ್ಲಿ ಉತ್ತಮ ಪ್ರದರ್ಶನ ನೀಡುವುದು ಮುಖ್ಯ. ಭಾರತ ಹಾಕಿ ತಂಡವು ಟೊಕಿಯೊ ಒಲಂಪಿಕ್ಸ್ನಲ್ಲಿ ತನ್ನ ಅತ್ಯುತ್ತಮ ಪ್ರದರ್ಶನವನ್ನು ನೀಡಿದೆ’ ಎಂದು ಅವರು ಹೇಳಿದ್ದಾರೆ. ಜೊತೆಗೆ ಭಾರತ ತಂಡದ ಮುಂದಿನ ಪಂದ್ಯಕ್ಕೂ ಶುಭ ಹಾರೈಸಿ, ‘ತಂಡದ ಮುಂದಿನ ಪಂದ್ಯಕ್ಕೆ ಶುಭ ಹಾರೈಕೆಗಳು. ದೇಶಕ್ಕೆ ತನ್ನ ಆಟಗಾರರ ಕುರಿತು ಬಹಳ ಹೆಮ್ಮೆಯಿದೆ’ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಟ್ವೀಟ್:
Wins and losses are a part of life. Our Men’s Hockey Team at #Tokyo2020 gave their best and that is what counts. Wishing the Team the very best for the next match and their future endeavours. India is proud of our players.
— Narendra Modi (@narendramodi) August 3, 2021
ಭಾರತಕ್ಕೆ ಕಂಚಿನ ಪದಕದ ಹೋರಾಟಕ್ಕೆ ಎದುರಾಳಿ ಯಾರು?
ಭಾರತವು ಬೆಲ್ಜಿಯಂ ವಿರುದ್ಧದ ಪಂದ್ಯದಲ್ಲಿ ವೀರೋಚಿತ ಹೋರಾಟ ನಡೆಸಿಯೂ ಗೆಲುವು ದಕ್ಕಲಿಲ್ಲ. ಪಂದ್ಯದ ಮೊದಲಾರ್ಧದಲ್ಲಿ 2-1 ಗೋಲುಗಳಿಂದ ಮುಂದಿದ್ದ ಭಾರತ, ಕೊನೆಗೆ ಪೆನಾಲ್ಟಿಗಳ ಮೂಲಕ ಗೋಲು ಬಿಟ್ಟುಕೊಟ್ಟಿತು. ಅದರಿಂದಾಗಿ ಮನ್ಪ್ರೀತ್ ಸಿಂಗ್ ನಾಯಕತ್ವದ ತಂಡಕ್ಕೆ 2-5 ಅಂತರದಲ್ಲಿ ಸೋಲು ಎದುರಾಯಿತು. ಬೆಲ್ಜಿಯಂ ತಂಡದ ಪರ ಅಲೆಕ್ಸಾಂಡರ್ ಹೆನ್ರಿಕ್ಸ್ ಹ್ಯಾಟ್ರಿಕ್ ಗೋಲು ಬಾರಿಸಿದರು. ಕಂಚಿನ ಪದಕಕ್ಕಾಗಿ ಭಾರತ ಮತ್ತೊಂದು ಸೆಮಿಫೈನಲ್ನಲ್ಲಿ(ಆಸ್ಟ್ರೇಲಿಯಾ- ಜರ್ಮನಿ) ಸೋತ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ:
Tokyo Olympics: ಭಾರತ ಪುರುಷರ ಹಾಕಿ ತಂಡದ ಫೈನಲ್ ಕನಸು ಭಗ್ನ; ಇನ್ನು ಕಂಚಿಗಾಗಿ ಹೋರಾಟ
Tokyo Olympics: ಕೊನೆಯ 15 ಸೆಕೆಂಡ್ಗಳಲ್ಲಿ 2 ಅಂಕ ಬಿಟ್ಟುಕೊಟ್ಟು ಸೋತ ಭಾರತದ ವನಿತಾ ಕುಸ್ತಿಪಟು ಸೋನಮ್ ಮಲಿಕ್
(Prime Minister Narendra Modi supports Indian Men’s Hockey Team and wished them for bronze medal match)
Published On - 11:07 am, Tue, 3 August 21