Sushil Kumar: ಕುಸ್ತಿ ಫೈನಲ್‌ನಲ್ಲಿ ರವಿ ದಹಿಯಾಗೆ ಸೋಲು; ತಿಹಾರ್ ಜೈಲಿನಲ್ಲಿ ಭಾವುಕರಾದ ಕುಸ್ತಿಪಟು ಸುಶೀಲ್ ಕುಮಾರ್
Sushil Kumar: ಒಲಿಂಪಿಕ್ ಕ್ರೀಡಾಕೂಟದಲ್ಲಿ ಹಾಲಿ ವಿಶ್ವ ಚಾಂಪಿಯನ್ ಜಾವೂರ್ ಉಗೆವ್ ವಿರುದ್ಧ ರವಿ ದಹಿಯಾ ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದಲ್ಲಿ ಪ್ರಶಸ್ತಿಯನ್ನು 4-7ರಿಂದ ಕಳೆದುಕೊಳ್ಳುವುದನ್ನು ನೋಡಿ ಭಾವುಕರಾಗಿದ್ದಾರೆ.
ಪ್ರಸ್ತುತ ಕೊಲೆ ಪ್ರಕರಣವೊಂದರಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿರುವ ಕುಸ್ತಿಪಟು ಸುಶೀಲ್ ಕುಮಾರ್, ಒಲಿಂಪಿಕ್ ಕ್ರೀಡಾಕೂಟದಲ್ಲಿ ಹಾಲಿ ವಿಶ್ವ ಚಾಂಪಿಯನ್ ಜಾವೂರ್ ಉಗೆವ್ ವಿರುದ್ಧ ರವಿ ದಹಿಯಾ ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದಲ್ಲಿ ಪ್ರಶಸ್ತಿಯನ್ನು 4-7ರಿಂದ ಕಳೆದುಕೊಳ್ಳುವುದನ್ನು ನೋಡಿ ಭಾವುಕರಾಗಿದ್ದಾರೆ. ಆದಾಗ್ಯೂ, ದಹಿಯಾ ಬೆಳ್ಳಿ ಗೆದ್ದು ದಾಖಲೆಯ ಪುಸ್ತಕಗಳಲ್ಲಿ ಅವರ ಹೆಸರನ್ನು ಕೆತ್ತಿಸಿದರು. ಜೊತೆಗೆ ಒಲಿಂಪಿಕ್ ಪದಕ ಗೆದ್ದ ಐದನೇ ಭಾರತೀಯ ಕುಸ್ತಿಪಟು ಎನಿಸಿಕೊಂಡರು.
ಸುಶೀಲ್ ಕುಮಾರ್ ಒಲಿಂಪಿಕ್ಸ್‌ನಲ್ಲಿ ಫೈನಲ್ ತಲುಪಿದ ಭಾರತದ ಇನ್ನೊಬ್ಬ ಕುಸ್ತಿಪಟು. ಆದರೆ ಈಗ ಕೊಲೆ ಆರೋಪ ಹೊತ್ತು ತಿಹಾರ್ ಜೈಲು ಸೇರಿದ್ದಾರೆ. ಸುಶೀಲ್ 2012 ರ ಲಂಡನ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದರು. ಅಲ್ಲದೇ 2012 ರ ಲಂಡನ್ ಗೇಮ್ಸ್‌ನಲ್ಲಿ ಯೋಗೇಶ್ವರ್ ದತ್ ಕೂಡ ಕಂಚು ಗೆದ್ದಿದ್ದರು. ಅದಕ್ಕೂ ಮುನ್ನ ಅಂದರೆ 2008 ರ ಬೀಜಿಂಗ್ ಕ್ರೀಡಾಕೂಟದಲ್ಲಿ ಸುಶೀಲ್ ಕಂಚು ಗೆದ್ದಿದ್ದರು.
23 ವರ್ಷದ ದಹಿಯಾ ಭಾರತದ ಕಿರಿಯ ಒಲಿಂಪಿಕ್ ಚಾಂಪಿಯನ್ ಆಗುವ ನಿರೀಕ್ಷೆಯಿತ್ತು ಆದರೆ ಅದು ಸಫಲವಾಗಲಿಲ್ಲ. ತಿಹಾರ್ ಜೈಲಿನ ಮೂಲಗಳ ಪ್ರಕಾರ, ಸುಶೀಲ್ ಕುಮಾರ್ ಮಧ್ಯಾಹ್ನದಿಂದ ದೂರದರ್ಶನ ಸೆಟ್ ಬಳಿ ಕುಳಿತು, ನಿರ್ಣಾಯಕ ಪಂದ್ಯವನ್ನು ನೋಡಲು ಕಾಯುತ್ತಿದ್ದರು. ಪಂದ್ಯದ ರೋಚಕತೆಯನ್ನು ಕಣ್ತುಂಬಿಕೊಳ್ಳುತ್ತಿದ ಸುಶೀಲ್, ರವಿ ದಹಿಯಾ ಫೈನಲ್‌ನಲ್ಲಿ ಸೋತದನ್ನು ಕಂಡು ಭಾವುಕರಾದರು.
ಜುಲೈ 2 ರಂದು, ಜೈಲಿನ ಹೊರಗೆ ಕುಸ್ತಿ ಪಂದ್ಯಗಳು ಮತ್ತು ಇತರ ಘಟನೆಗಳ ಬಗ್ಗೆ ಅಪ್‌ಡೇಟ್ ಆಗಲು ತನಗೆ ದೂರದರ್ಶನವನ್ನು ಒದಗಿಸುವಂತೆ ಸುಶೀಲ್ ಜೈಲು ಅಧಿಕಾರಿಗಳನ್ನು ಒತ್ತಾಯಿಸಿದ್ದರು. ವಿನಂತಿಯನ್ನು ಪುರಸ್ಕರಿಸಿದ ಜೈಲು ಅಧಿಕಾರಿಗಳು ದೂರದರ್ಶನದ ವ್ಯವಸ್ಥೆ ಮಾಡಿಕೊಟ್ಟಿದ್ದರು.