Tokyo Olympics 2020: ಪುರುಷರ ಬ್ಯಾಡ್ಮಿಂಟನ್​ನಲ್ಲಿ ಚಿನ್ನ ಗೆಲ್ಲುವರೆಂದು ನಿರೀಕ್ಷಿಸಲಾಗಿದ್ದ ವಿಶ್ವ ಚಾಂಪಿಯನ್ ಮೊಮೊಟಾ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 29, 2021 | 12:21 AM

2019ರಲ್ಲಿ ಮೊಮೊಟಾ ದಾಖಲೆಯ 11 ಪ್ರಶಸ್ತಿಗಳನ್ನು ಗೆದ್ದಿದ್ದರು. ತಾನಾಡಿದ 73 ಪಂದ್ಯಗಳಲ್ಲಿ ಅವರು ಕೇವಲ ಆರರಲ್ಲಿ ಮಾತ್ರ ಸೋತಿದ್ದರು. ಆದರೆ ಒಲಂಪಿಕ್ಸ್​ನಲ್ಲಿ ಅವರು ಮೆರೆಯಬೇಕೆಂದಿದ್ದ ಪರಾಕ್ರಮಕ್ಕೆ ದಕ್ಷಿಣ ಕೊರಿಯ ಆಟಗಾರ ಕೇವಲ 52 ನಿಮಿಷಗಳಲ್ಲಿ ತಣ್ಣೀರೆರಚಿದರು.

Tokyo Olympics 2020: ಪುರುಷರ ಬ್ಯಾಡ್ಮಿಂಟನ್​ನಲ್ಲಿ ಚಿನ್ನ ಗೆಲ್ಲುವರೆಂದು ನಿರೀಕ್ಷಿಸಲಾಗಿದ್ದ ವಿಶ್ವ ಚಾಂಪಿಯನ್ ಮೊಮೊಟಾ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು!
ಕೆಂಟೊ ಮೊಮೊಟಾ
Follow us on

ಕ್ರೀಡೆ ಯಾವುದೇ ಆಗರಲಿ, ಅಲ್ಲಿ ಅನಿರೀಕ್ಷಿತ ಫಲಿತಾಂಶಗಳು ಇದ್ದೇ ಇರುತ್ತವೆ. ಗ್ರ್ಯಾಂಡ್ ಸ್ಲ್ಯಾಮ್ ಟೆನಿಸ್​ ಟೂರ್ನಿಗಳಲ್ಲಿ ನಾವು ಟಾಪ್​ ಸೀಡೆಡ್​ ಆಟಗಾರನೊಬ್ಬ ಇಲ್ಲವೇ ಎಟಿಪಿ ಱಂಕಿಂಗ್​ನಲ್ಲಿ ಮೊದಲ ಹತ್ತು ಕ್ರಮಾಂಕಗಳನ್ನು ಹೊಂದಿರುವ ಪೈಕಿ ಒಬ್ಬರು ಇಲ್ಲವೇ ಇಬ್ಬರು; ಹೆಸರೇ ಕೇಳರಿಯದ ಇನ್ನೊಬ್ಬ ಆಟಗಾರನಿಗೆ ಸೋತು ಟೂರ್ನಿಯಿಂದ ನಿರ್ಗಮಿಸುವುದನ್ನು ನಾವು ನೋಡುತ್ತೇವೆ. 1983ರ ಕ್ರಿಕೆಟ್​ ವಿಶ್ವಕಪ್​ಗೆ ಮೊದಲು ನಡೆದ ಎರಡು ವಿಶ್ವಕಪ್ ಟೂರ್ನಿಗಳಲ್ಲಿ ಕೇವಲ ಪಂದ್ಯ ಮಾತ್ರ ಗೆದ್ದಿದ್ದ ಭಾರತ ಆ ವರ್ಷ ನಡೆದ ಪಂದ್ಯಾವಳಿಯಲ್ಲಿ ಮೊದಲಿನೆರಡು ವಿಶ್ವಕಪ್​ಗಳನ್ನು ಗೆದ್ದಿದ್ದ ಕ್ಲೈವ್ ಲಾಯ್ಡ್​ ನಾಯಕತ್ವದ ವೆಸ್ಟ್ ಇಂಡೀಸ್ ದೈತ್ಯರನ್ನು ಎರಡು ಬಾರಿ (ಒಮ್ಮೆ ಲೀಗ್ ಹಂತ ಇನ್ನೊಮ್ಮೆ ಫೈನಲ್) ಸೋಲಿಸಿ ವಿಕ್ರಮ ಮೆರೆಯುತ್ತದೆ ಎಂದು ಭಾರತೀಯರೇ ಅಂದುಕೊಂಡಿರಲಿಲ್ಲ. ಕ್ರೀಡೆಯ ಸೊಬಗೇ ಹಾಗೆ, ಅನಿರೀಕ್ಷಿತ ಪಲಿತಾಂಶಗಳು ಎಲ್ಲ ಕ್ರೀಡೆಗಳ ಅವಿಭಾಜ್ಯ ಅಂಗ.

ಇದನ್ನೆಲ್ಲ ಹೇಳಬೇಕಾಗಿದೆಯೆಂದರೆ, ಟೋಕಿಯೋ ಒಲಂಪಿಕ್ಸ್​ನ ಪುರುಷರ ಬ್ಯಾಡ್ಮಿಂಟನ್ ವಿಭಾಗದಲ್ಲಿ ನಿಶ್ಚಿತವಾಗಿ ಚಿನ್ನದ ಪದಕ ಗೆಲ್ಲುತ್ತಾರೆಂದು ನಿರೀಕ್ಷಿಸಲಾಗಿದ್ದ ಲೋಕಲ್ ಹಿರೋ ಮತ್ತು ವಿಶ್ವದ ನಂಬರ್ ವನ್ ಆಟಗಾರ ಕೆಂಟೊ ಮೊಮೊಟಾ ಅವರು ಬುಧವಾರದಂದು ಮೊದಲ ಸುತ್ತಿನಲ್ಲೇ ಪರಾಭವಗೊಂಡು ಒಲಂಪಿಕ್ಸ್​ನಿಂದ ನಿರ್ಗಮಿಸಿದ್ದಾರೆ. ಕೇವಲ ಒಂದು ದಿನ ಮುಂಚೆ ಜಪಾನ್ ಟೆನಿಸ್​ನ ಅನಭಿಷಿಕ್ತ ರಾಣಿ ನವೋಮಿ ಒಸಕಾ ಅವರು ಸಹ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೋತು ಹೊರಬಿದ್ದಿದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.

ಮೊಮೊಟಾ ಅವರನ್ನು ಸೀಡೆಡ್ ಅಲ್ಲದ ದಕ್ಷಿಣ ಕೊರಿಯ ಆಟಗಾರ ಹೊ ಕ್ವಾಂಗ್ ಹೀ 21-15, 21-19 ರಿಂದ ಸೋಲಿಸಿ ಚಿನ್ನ ಗೆಲ್ಲುವ ಜಪಾನಿ ಆಟಗಾರನ ಆಸೆಯನ್ನು ಕೇವಲ ಎರಡೇ ಗೇಮ್​ಗಳಲ್ಲಿ ನುಚ್ಚುನೂರುಗೊಳಿಸಿದರು. ಮೊಮೊಟಾಗೆ ಇದು ಮೊದಲ ಒಲಂಪಿಕ್ಸ್ ಆಗಿತ್ತು. 2016 ರಿಯೋ ಒಲಂಪಿಕ್ಸ್​ ಆರಂಭಗೊಳ್ಳುವ ಕೆಲವೇ ತಿಂಗಳು ಮೊದಲು ಕಾನೂನುಬಾಹಿರ ಕ್ಯಾಸಿನೊ ಒಂದರಲ್ಲಿ ಜೂಜಾಡಿದ್ದ ಮೊಮೊಟಾ ಮೇಲೆ ನಿಷೇಧ ಹೇರಲಾಗಿತ್ತು. ಕಳೆದ ವರ್ಷ ಕಾರು ಅಪಘಾತವೊಂದರಲ್ಲಿ ಕರೀಯರನ್ನೇ ಗಂಡಾಂತರಕ್ಕೀಡು ಮಾಡಬಹುದಾಗಿದ್ದ ಪರಿಸ್ಥಿಯನ್ನು ಎದುರಿಸಿಸ ಮೊಮೊಟಾ ನಂತರ ಚೇತರಿಸಿಕೊಂಡಿದ್ದರು.

2019ರಲ್ಲಿ ಮೊಮೊಟಾ ದಾಖಲೆಯ 11 ಪ್ರಶಸ್ತಿಗಳನ್ನು ಗೆದ್ದಿದ್ದರು. ತಾನಾಡಿದ 73 ಪಂದ್ಯಗಳಲ್ಲಿ ಅವರು ಕೇವಲ ಆರರಲ್ಲಿ ಮಾತ್ರ ಸೋತಿದ್ದರು. ಆದರೆ ಒಲಂಪಿಕ್ಸ್​ನಲ್ಲಿ ಅವರು ಮೆರೆಯಬೇಕೆಂದಿದ್ದ ಪರಾಕ್ರಮಕ್ಕೆ ದಕ್ಷಿಣ ಕೊರಿಯ ಆಟಗಾರ ಕೇವಲ 52 ನಿಮಿಷಗಳಲ್ಲಿ ತಣ್ಣೀರೆರಚಿದರು.

ಬುಧವಾರದ ಪಂದ್ಯದಲ್ಲಿ ತಮ್ಮ ಶಾಟ್​ಗಳು ಗುರಿ ತಪ್ಪಿದಾಗ ಮೊಮೊಟಾ ಅಪನಂಬಿಕೆಯಿಂದ ಮುಗಳ್ನಗುತ್ತಿದ್ದರು. ಅದರೆ ತಾನು ಸೋಲುವುದು ಖಚಿತವಾಗುತ್ತಿದ್ದಂತೆ ಅವರ ಮುಖ ವಿವರ್ಣಗೊಳ್ಳತೊಡಗಿತು. ಅವರ ಹೊಡೆತವೊಂದು ನೆಟ್​ಗೆ ಅಪ್ಪಳಿಸುತ್ತಿದ್ದಂತೆ ಹೋರಾಟ ಅಂತ್ಯಗೊಂಡಿತು.

ಮೊಮೊಟಾ ಮತ್ತು ಒಸಾಕಾ ಅವರಂತೆ ಜಪಾನಿ ಸ್ಟಾರ್ ಜಿಮ್ನಾಸ್ಟ್ ಕೊಹೀ ಉಚಿಮುರಾ ಸಹ ಕಳಾಹೀನ ಪ್ರದರ್ಶನ ನೀಡಿ ಒಲಂಪಿಕ್ಸ್​ನಿಂದ ಹೊರಬಿದ್ದರು.

ಇದನ್ನೂ ಓದಿ: Tokyo Olympics 2020: ಟೊಕಿಯೋ ಉಷ್ಣಾಂಶದಿಂದ ಬಸವಳಿದ ಮೆಡ್ವೆಡೆವ್, ಕೋರ್ಟ್​ನಲ್ಲಿ ತಾನು ಸತ್ತರೆ ಅದಕ್ಕೆ ಯಾರು ಜವಾಬ್ದಾರಿ ಅಂತ ಅಂಪೈರ್​ನನ್ನು ಕೇಳಿದರು!