Tokyo Olympics 2020: ಮೊದಲ ಬಾರಿ ಒಲಂಪಿಕ್ಸ್​ನಲ್ಲಿ ಭಾಗವಹಿಸಿರುವ ಬಾಕ್ಸರ್ ಪೂಜಾ ರಾಣಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 28, 2021 | 8:05 PM

ತಮ್ಮ ಅನುಭವದ ಸಂಪೂರ್ಣ ಲಾಭ ಪಡೆದ ಪೂಜಾ, ಎದುರಾಳಿಯಿಂದ ಸ್ಲಲ್ಪ ಅಂತರ ಕಾಯ್ದುಕೊಂಡೇ ದಾಳಿ ನಡೆಸಿದರು. ಪಂಚ್​ಗಳನ್ನು ಲ್ಯಾಂಡ್​ ಮಾಡುವಲ್ಲಿ ವಿಫಲರಾಗುತ್ತಿದ್ದ ಚೇಬ್, ಹತಾಷೆಯಿಂದ ಪೂಜಾ ಅವರತ್ತ ಬೀಸಿದ ಪ್ರಹಾರಗಳು ಗುರಿ ತಲುಪಲಿಲ್ಲ.

Tokyo Olympics 2020: ಮೊದಲ ಬಾರಿ ಒಲಂಪಿಕ್ಸ್​ನಲ್ಲಿ ಭಾಗವಹಿಸಿರುವ ಬಾಕ್ಸರ್ ಪೂಜಾ ರಾಣಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ!
ಪೂಜಾ ರಾಣಿ
Follow us on

ಇದೇ ಮೊದಲ ಬಾರಿಗೆ ಒಲಂಪಿಕ್ಸ್​ನಲ್ಲಿ ಭಾಗವಹಿಸಿರುವ ಭಾರತದ ಮಹಿಳಾ ಬಾಕ್ಸರ್ ಪೂಜಾ ರಾಣಿ ಆವರು ಬುಧವಾರದಂದು 75 ಕೆಜಿ ವಿಭಾಗದಲ್ಲಿ ಅಲ್ಜೀರಿಯಾದ ಇಚ್ರಕ್ ಚೇಬ್ ಅವರನ್ನು ಸೋಲಿಸಿ ಕ್ವಾರ್ಟರ್ ಫೈನಲ್ ಹಂತವನ್ನು ಪ್ರವೇಶಿಸಿದ್ದಾರೆ. ವಯಸ್ಸಿನಲ್ಲಿ ಹತ್ತು ವರ್ಷ ಕಿರಿಯವರಾಗಿದ್ದ ತಮ್ಮ ಪ್ರತಿಸ್ಪರ್ಧಿ ಚೇಬ್ ಅವರನ್ನು 30 ವರ್ಷದ ಪೂಜಾ ರಾಣಿ ಅವರು ರೆಫರಿಗಳ 5-0 ತೀರ್ಪಿನ ಆಧಾರದ ಮೇಲೆ ಸೋಲಿಸಿದರು. ಎರಡು ಬಾರಿ ಏಷ್ಯನ್ ಚಾಂಪಿಯನ್​ಶಿಪ್ ಗೆದ್ದಿರುವ ಪೂಜಾ, ಚೇಬ್​ಗೆ ಸುಧಾರಿಸಿಕೊಳ್ಳುವ ಅವಕಾಶವನ್ನೂ ನೀಡದೆ, ತಮ್ಮ ಬಲಗೈ ಪಂಚ್​ಗಳನ್ನು ಬಾರಿಸುತ್ತಾ ಸಾಗಿದರು. ಎಲ್ಲ ಮೂರು ಸುತ್ತುಗಳಲ್ಲೂ ಅವರು ಸ್ಪಷ್ಟ ಮೇಲುಗೈ ಸಾಧಿಸಿದ್ದರು. ಪೂಜಾರಂತೆ ಚೇಬ್ ಸಹ ಇದೇ ಮೊದಲ ಬಾರಿಗೆ ಒಲಂಪಿಕ್ಸ್​ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದು ಭಾರತೀಯಳ ದಾಳಿಗೆ ತತ್ತರಿಸಿದರು. ಒಮ್ಮೆಯಂತೂ ಅವರು ರಿಂಗ್​ನಲ್ಲಿ ಆಯತಪ್ಪಿ ಬಿದ್ದರು.

ತಮ್ಮ ಅನುಭವದ ಸಂಪೂರ್ಣ ಲಾಭ ಪಡೆದ ಪೂಜಾ, ಎದುರಾಳಿಯಿಂದ ಸ್ಲಲ್ಪ ಅಂತರ ಕಾಯ್ದುಕೊಂಡೇ ದಾಳಿ ನಡೆಸಿದರು. ಪಂಚ್​ಗಳನ್ನು ಲ್ಯಾಂಡ್​ ಮಾಡುವಲ್ಲಿ ವಿಫಲರಾಗುತ್ತಿದ್ದ ಚೇಬ್, ಹತಾಷೆಯಿಂದ ಪೂಜಾ ಅವರತ್ತ ಬೀಸಿದ ಪ್ರಹಾರಗಳು ಗುರಿ ತಲುಪಲಿಲ್ಲ. ಪ್ರಾಯಶಃ ತಮ್ಮ ಪಂಚ್​ನಲ್ಲಿ ಹೆಚ್ಚು ಬಲ ಪ್ರಯೋಗಿಸಲು ಪ್ರಯತ್ನಿಸಿದ್ದು ಅವರಿಗೆ ಮುಳುವಾಯಿತು.

ಪೂಜಾ ಅವರ ಒಲಂಪಿಕ್ ಪಯಣ ಸುಗಮವಾಗೇನೂ ಇಲ್ಲ. ಕರೀಯರ್​ಗೆ ಗಂಡಾಂತರ ತಂದೊಡ್ಡಿದ್ದ ಭಜುದ ಗಾಯದ ಜೊತೆ ಅವರು ಬಹಳ ಸಮಯದವರೆಗೆ ಹೆಣಗಿದರು. ಒಮ್ಮೆ ಅವರ ಕೈಗೆ ಸುಟ್ಟ ಗಾಯವಾಗಿತ್ತು. ಈ ಎಲ್ಲದರ ನಡುವೆ ಹಣಕಾಸಿನ ಸಂಕಷ್ಟ ಅವರನ್ನು ಕಾಡುತ್ತಲೇ ಇತ್ತು. ಆಕೆಯ ತಂದೆ ಪೊಲೀಸ್ ಅಧಿಕಾರಿಯಾಗಿದ್ದರೂ, ತಮ್ಮ ಇಚ್ಛೆಗೆ ವಿರುದ್ಧವಾಗಿ ಬಾಕ್ಸಿಂಗ್ಸ್ ಅನ್ನು ವೃತ್ತಿಬದುಕು ಮಾಡಿಕೊಂಡ ಕಾರಣ ಹಣಕಾಸಿನ ಸಹಾಯ ಮಾಡಲಿಲ್ಲ. ಬಾಕ್ಸಿಂಗ್ ಪುರುಷರ ಕ್ರೀಡೆ ಎನ್ನುವುದು ಆವರ ವಾದವಾಗಿತ್ತು.

‘ಬಾಕ್ಸಿಂಗ್​ನಲ್ಲಿ ನೀನು ಪೆಟ್ಟು ತಿನ್ನಬೇಕಾಗುತ್ತದೆ ಅಂತ ನನ್ನ ತಂದೆ ನನಗೆ ಯಾವಾಗಲೂ ಹೇಳುತ್ತಿದ್ದರು. ಬಾಕ್ಸಿಂಗ್ ನನ್ನಂಥ ಹುಡುಗಿಯರಿಗೆ ಸೂಕ್ತವಾದ ಕ್ರೀಡೆ ಅಲ್ಲ, ಪುರುಷರು ಮತ್ತು ಆಕ್ರಮಣಶೀಲ ಜನರಿಗೆ ಅದು ಒಗ್ಗುವಥದ್ದು ಎಂದು ಅವರು ಹೇಳುತ್ತಿದ್ದರು,’ ಅಂತ ಪೂಜಾ ರಾಣಿ, ಪಿಟಿಐಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದರು.

ಇದನ್ನೂ ಓದಿ: Tokyo Olympics: 109 ವರ್ಷಗಳ ಬಳಿಕ ಈಜು ರಿಲೇ ಸ್ಪರ್ಧೆಯಲ್ಲಿ ಇತಿಹಾಸ ಸೃಷ್ಟಿಸಿದ ಬ್ರಿಟನ್.. ಅಮೆರಿಕಕ್ಕೆ ಕಂಚು ಕೂಡ ಸಿಗಲಿಲ್ಲ