Tokyo Olympics: ಭಾರತ ಮಹಿಳಾ ಹಾಕಿ ತಂಡದ ಆಟಗಾರರಿಗೆ ಮನೆ ಕಟ್ಟಲು ಹಣ, ಕಾರು: ವಜ್ರದ ವ್ಯಾಪಾರಿ ಘೋಷಣೆ

| Updated By: Vinay Bhat

Updated on: Aug 05, 2021 | 12:29 PM

India Women's Hockey Team: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಮಹಿಳಾ ಹಾಕಿ ತಂಡ ಯಾವುದಾದರು ಪದಕ ಗೆದ್ದಿದ್ದೆ ಆದಲ್ಲಿ ತಂಡದ ಪ್ರತಿ ಆಟಗಾರರಿಗೆ ಮನೆ ಕಟ್ಟಲು ಹಣ ಮತ್ತು ಕಾರುಗಳನ್ನು ನೀಡುವುದಾಗಿ ಗುಜರಾತ್‌ ಮೂಲದ ಉದ್ಯಮಿ ಸಾವ್ಜಿ ಧೋಲಾಕಿಯಾ ಘೋಷಿಸಿದ್ದಾರೆ.

Tokyo Olympics: ಭಾರತ ಮಹಿಳಾ ಹಾಕಿ ತಂಡದ ಆಟಗಾರರಿಗೆ ಮನೆ ಕಟ್ಟಲು ಹಣ, ಕಾರು: ವಜ್ರದ ವ್ಯಾಪಾರಿ ಘೋಷಣೆ
India Women's Hockey Team
Follow us on

ಒಲಿಂಪಿಕ್ ಇತಿಹಾಸದಲ್ಲಿ (Tokyo Olympics) ಇದೇ ಮೊದಲ ಬಾರಿಗೆ ಹಾಕಿಯ ಸೆಮಿ ಫೈನಲ್ ಪ್ರವೇಶಿಸಿ ಇತಿಹಾಸ ಬರೆದಿದ್ದ ಭಾರತ ಮಹಿಳಾ ತಂಡ ಫೈನಲ್​ಗೇರಲು ವಿಫಲವಾಯಿತು. ಬುಧವಾರ ಅರ್ಜೇಂಟಿನಾ ವಿರುದ್ಧ ನಡೆದ ಸೆಮಿ ಫೈನಲ್ ಕದನದಲ್ಲಿ ಭಾರತ 1-2 ಗೋಲುಗಳ ಅಂತರದಿಂದ ಸೋಲುಂಡಿತು. ಆದರೆ, ಭಾರತಕ್ಕೆ ಕಂಚು ಗೆಲ್ಲುವ ಅವಕಾಶವಿದ್ದು, ಇನ್ನೊಂದು ಸೆಮಿ ಫೈನಲ್​ನಲ್ಲಿ ಸೋಲುವ ತಂಡದ ವಿರುದ್ಧ ಪಂದ್ಯವಿದೆ. ಇದರಲ್ಲಿ ಭಾರತ ಮಹಿಳಾ ಹಾಕಿ ತಂಡ ಗೆದ್ದರೆ ಕಂಚಿನ ಪದಕ ಮುಡಿಗೇರಿಸಿಕೊಳ್ಳಲಿದೆ. ಹೀಗಿರುವಾಗ ಭಾರತ ಮಹಿಳಾ ಹಾಕಿ ತಂಡವೇನಾದರೂ (India Women’s Hockey Team) ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಯಾವುದಾದರು ಪದಕ ಗೆದ್ದಿದ್ದೆ ಆದಲ್ಲಿ ತಂಡದ ಪ್ರತಿ ಆಟಗಾರರಿಗೆ ಮನೆ ಕಟ್ಟಲು ಹಣ ಮತ್ತು ಕಾರುಗಳನ್ನು ನೀಡುವುದಾಗಿ ಗುಜರಾತ್‌ ಮೂಲದ ಉದ್ಯಮಿ ಸಾವ್ಜಿ ಧೋಲಾಕಿಯಾ (Savji Dholakia) ಘೋಷಿಸಿದ್ದಾರೆ.

ಈ ಕುರಿತು ಸಾವ್ಜಿ ಧೋಲಾಕಿಯಾ ಟ್ವೀಟ್‌ ಒಂದನ್ನು ಮಾಡಿದ್ದು, ‘ಭಾರತ ಮಹಿಳಾ ಹಾಕಿ ತಂಡದ ಆಟಗಾರರನ್ನು ಗೌರವಿಸಲು ಎಚ್‌ಕೆ ಸಮೂಹ ನಿರ್ಧಾರ ಮಾಡಿದೆ. ಒಂದು ವೇಳೆ ಭಾರತೀಯ ಹಾಕಿ ಮಹಿಳೆಯರು ಭಾರತಕ್ಕೆ ಪದಕ ಗೆದ್ದು ತಂದರೆ, ತಂಡದ ಪ್ರತಿಯೊಬ್ಬ ಸದಸ್ಯರಿಗೂ ಮನೆ ಕಟ್ಟಿಕೊಳ್ಳಲು 11 ಲಕ್ಷ ರೂಪಾಯಿ ಹಣ ನೀಡಲಾಗುವುದು. ಈಗಾಗಲೇ ಮನೆ ಹೊಂದಿರುವವರಿಗೆ 5 ಲಕ್ಷ ರೂಪಾಯಿ ಮೌಲ್ಯದ ಹೊಸ ಕಾರು ಕೊಡಿಸಲಾಗುವುದು,’ ಎಂದು ಹೇಳಿದ್ದಾರೆ.

 

ವಜ್ರ ವ್ಯಾಪಾರಿ ಘನಶ್ಯಾಮ್ ಭಾಯಿ ಧನ್ಜಿ ಭಾಯ್ ಡೋಲಾಕಿಯಾ ಅವರ ಕುಟುಂಬವು 2018 ರಲ್ಲಿ ಗಮನ ಸೆಳೆದಿತ್ತು, ಧಂಜಿಭಾಯಿ ಡೋಲಾಕಿಯಾ ಅವರ ಮಗ ಸಾವ್ಜಿ ಡೋಲಾಕಿಯಾ ಅವರು ಮೂವರು ಉದ್ಯೋಗಿಗಳಿಗೆ ಮರ್ಸಿಡಿಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು. 2014 ರ ಆರಂಭದಲ್ಲಿ ಅವರು ದೀಪಾವಳಿ ಬೋನಸ್‌ನಲ್ಲಿ ತಮ್ಮ ಉದ್ಯೋಗಿಗಳಿಗೆ 500 ಫ್ಲಾಟ್‌ಗಳು, 525 ವಜ್ರದ ಆಭರಣಗಳನ್ನು ನೀಡಿದ್ದರು.

ಇನ್ನೂ ಒಲಿಂಪಿಕ್ ವಿಚಾರಕ್ಕೆ ಬರುವುದಾದರೆ ಭಾರತ ಈವರೆಗೆ ಒಟ್ಟು ನಾಲ್ಕು ಪದವನ್ನಷ್ಟೆ ಗೆದ್ದಿದೆ. ಗುರುವಾರ ಭಾರತ ಪುರುಷರ ಹಾಕಿ ತಂಡ ಕಂಚಿನ ಪದಕ್ಕಾಗಿ ಜರ್ಮನಿ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ 4-5 ಗೋಲುಗಳ ಅಂತರದಲ್ಲಿ ಗೆದ್ದು ಬೀಗಿದೆ. ಈ ಮೂಲಕ ಬರೋಬ್ಬರಿ 41 ವರ್ಷಗಳ ಬಳಿಕ ಒಲಿಂಪಿಕ್ ಹಾಕಿಯಲ್ಲಿ ಭಾರತ ಚೊಚ್ಚಲ ಪದಕಕ್ಕೆ ಕೊರಳೊಡ್ಡಿದೆ.

Tokyo Olympics: ಇದು ಐತಿಹಾಸಿಕ ಕ್ಷಣ ಪ್ರತಿಯೊಬ್ಬ ಭಾರತೀಯನ ನೆನಪಲ್ಲಿ ಉಳಿಯುವಂತಹ ದಿನ: ಪ್ರಧಾನಿ ಮೋದಿ

India vs England: ವಿಕೆಟ್ ಹಿಂಬದಿಯಲ್ಲಿ ಪಂತ್ ಪಕ್ಕಾ ರಿವ್ಯೂ: ಫಿದಾ ಆದ ಕೊಹ್ಲಿ ಮಾಡಿದ್ದೇನು ನೋಡಿ

(Tokyo Olympics Gujarat Diamond Merchant Savji Dholakia Promises Houses Cars For Womens Hockey Team)