ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡದ ಭಾಗವಾಗಿರುವ ವಂದನಾ ಕಟಾರಿಯಾ ಅವರ ಕುಟುಂಬ ಸದಸ್ಯರೊಂದಿಗೆ ಅನುಚಿತವಾಗಿ ವರ್ತಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಕೆಲವು ಜನರು ವಂದನಾ ಅವರ ಕುಟುಂಬ ಸದಸ್ಯರ ವಿರುದ್ಧ ನಿಂದನೀಯ ಭಾಷೆಯನ್ನು ಬಳಸಿ, ಜಾತಿ ನಿಂದನೆ ಮಾಡಿದರು. ಈಗ ವಂದನಾ ಕಟಾರಿಯಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಭಾರತ ಫಾರ್ವರ್ಡ್ ವಂದನಾ ಕಟಾರಿಯಾ ಈ ಬಗ್ಗೆ ಮಾತನಾಡಿ, ಜನರು ಜಾತಿ ನಿಂದನೆಗಳನ್ನು ಕೊನೆಗೊಳಿಸುತ್ತಾರೆ ಮತ್ತು ಜನರು ತಂಡವನ್ನು ಬೆಂಬಲಿಸುವುದನ್ನು ಮುಂದುವರಿಸುತ್ತಾರೆ ಎಂದು ಆಶಿಸುತ್ತೇನೆ ಎಂದಿದ್ದಾರೆ.
ಟೋಕಿಯೊ ಒಲಿಂಪಿಕ್ಸ್‌ನ ಸೆಮಿಫೈನಲ್‌ನಲ್ಲಿ ಭಾರತ ಅರ್ಜೆಂಟೀನಾ ವಿರುದ್ಧ ಸೋತ ನಂತರ ಹರಿದ್ವಾರದ ಯುವಕರ ಗುಂಪು ತಮ್ಮ ಪ್ರದೇಶದಲ್ಲಿ ಪಟಾಕಿ ಸಿಡಿಸಿದರು ಎಂದು ವಂದನಾ ಕುಟುಂಬ ಆರೋಪಿಸಿದೆ. ಜೊತೆಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಅರೋಪ ಮಾಡಿ, ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದರು. ಗುರುವಾರ ದೂರಿನ ನಂತರ ಪೊಲೀಸರು ಪ್ರಮುಖ ಆರೋಪಿ ವಿಜಯಪಾಲ್ನನ್ನು ಪೊಲೀಸರು ಬಂಧಿಸಿದ್ದಾರೆ.
ಎಫ್ಐಆರ್ ದಾಖಲಿಸಲಾಗಿದೆ
ಹರಿದ್ವಾರ ಪೊಲೀಸರ ಹೇಳಿಕೆಯ ಪ್ರಕಾರ, ಮೂವರು ವ್ಯಕ್ತಿಗಳಾದ ವಿಜಯ್ ಪಾಲ್, ಅಂಕುರ್ ಪಾಲ್ ಮತ್ತು ಸುಮಿತ್ ಚೌಹಾಣ್ ಮತ್ತು ಇತರ ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 504 (ಶಾಂತಿ ಉಲ್ಲಂಘನೆ ಮಾಡುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು ಎಸ್ಸಿ/ಎಸ್ಟಿ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ.
ನಾವು ದೇಶಕ್ಕಾಗಿ ಆಡುತ್ತಿದ್ದೇವೆ
ಕಂಚಿನ ಪದಕದ ಪಂದ್ಯದಲ್ಲಿ ಬ್ರಿಟನ್ ವಿರುದ್ಧ ಭಾರತ 4-3 ಅಂತರದಲ್ಲಿ ಸೋತ ನಂತರ ಭಾರತದ ಮೂರು ಗೋಲುಗಳಲ್ಲಿ ಒಂದನ್ನು ಗಳಿಸಿದ ವಂದನಾ, ಈ ಘಟನೆಯ ಬಗ್ಗೆ ಹೇಳಿದ್ದೇನೆಂದರೆ, ನಾನು ಈ ಬಗ್ಗೆ ಕುಟುಂಬದವರೊಂದಿಗೆ ಇನ್ನೂ ಮಾತನಾಡಿಲ್ಲ. ಘಟನೆಯ ಬಗ್ಗೆ ವಿವರ ಪಡೆದು ಮಾತನಾಡುತ್ತೇನೆ ಎಂದರು.
ನಾವು ದೇಶಕ್ಕಾಗಿ ಆಡುತ್ತಿದ್ದೇವೆ. ಈ ಘಟನೆಯ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ. ಆದರೆ ಜಾತಿವಾದಿ ಹೇಳಿಕೆಗಳನ್ನೆಲ್ಲಾ ಯಾರು ಕೊಡಬಾರದು. ನೀವು ಹಾಕಿ ಬಗ್ಗೆ ಯೋಚಿಸಿ, ಅಲ್ಲಿ ಹೆಚ್ಚು ಯುವತಿಯರಿದ್ದಾರೆ. ನಾವು ದೇಶಕ್ಕಾಗಿ ಆಡುತ್ತಿದ್ದೇವೆ, ಆದ್ದರಿಂದ ನಾವು ಪ್ರತಿಯೊಂದು ವಿಷಯದಲ್ಲೂ ಒಂದಾಗಬೇಕು ಎಂದರು.
ಟೋಕಿಯೋದಲ್ಲಿ ಸ್ಟಾರ್ ಆಟಗಾರ್ತಿಯಾಗಿ ಹೊರಹೊಮ್ಮಿದ ವಂದನಾ
ಎಲ್ಲಾ ಸವಾಲುಗಳ ನಡುವೆಯೂ ವಂದನಾ ಟೋಕಿಯೊದಲ್ಲಿ ಭಾರತದ ಸ್ಟಾರ್ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಅವರ ಅದ್ಭುತ ಆಟದಿಂದ ಭಾರತ ಇತಿಹಾಸದಲ್ಲಿ ಮೊದಲ ಬಾರಿಗೆ ನಾಕೌಟ್ ಸುತ್ತಿಗೆ ಅರ್ಹತೆ ಪಡೆಯಿತು. ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಗುಂಪಿನ ಪಂದ್ಯದಲ್ಲಿ ವಂದನಾ ಹ್ಯಾಟ್ರಿಕ್ ಗೋಲು ಗಳಿಸಿದರು. ತಂಡವು ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾ ಮತ್ತು ಕಂಚಿನ ಪದಕದ ಪಂದ್ಯದಲ್ಲಿ ಬ್ರಿಟನ್ ಎದುರು ಸೋತು ಮೊದಲು ಕ್ವಾರ್ಟರ್ ಫೈನಲ್‌ನಲ್ಲಿ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಸೋಲಿಸಿತು. ತಂಡವು ನಾಲ್ಕನೇ ಸ್ಥಾನವನ್ನು ಪಡೆದಿದೆ. ಇದು ಮಹಿಳಾ ಹಾಕಿ ತಂಡದ 41 ವರ್ಷಗಳಲ್ಲಿ ಅತ್ಯುತ್ತಮ ಪ್ರದರ್ಶನವಾಗಿದೆ.
Published On - 4:30 pm, Fri, 6 August 21